- Kannada News Photo gallery Cricket photos IPL 2025: Jasprit bumrah, Deepak Chahar and Trent Boult Conceded 115 Runs
IPL 2025: ಬರೋಬ್ಬರಿ 115 ರನ್ಸ್: RCB ಆರ್ಭಟಕ್ಕೆ ಮಗುಚಿ ಬಿದ್ದ JCB
IPL 2025 MI vs RCB: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 221 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ ತಂಡವು 209 ರನ್ಗಳಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿತು.
Updated on: Apr 08, 2025 | 10:30 AM

10 ಓವರ್ಗಳಲ್ಲಿ ಬರೋಬ್ಬರಿ 115 ರನ್ಗಳು... ಇದು ಯಾವುದೇ ಹೊಸ ಬೌಲರ್ ನೀಡಿದ ರನ್ಗಳಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ತಂಡದ ತ್ರಿವಳಿ ಅಸ್ತ್ರವೆಂದೇ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟರ್ಗಳು ಕಲೆಹಾಕಿದ ರನ್ಗಳು.

ಐಪಿಎಲ್ ಮೆಗಾ ಹರಾಜಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಖತ್ ಸುದ್ದಿಯಾಗಿದ್ದು JCB ಟ್ಯಾಗ್ ಲೈನ್ನೊಂದಿಗೆ. ಇಲ್ಲಿ J ಅಂದರೆ ಜಸ್ಪ್ರೀತ್, C ಅಂದರೆ ಚಹರ್ ಹಾಗೂ B ಅಂದರೆ ಬೌಲ್ಟ್. ಈ ಮೂವರು ಪ್ರಮುಖ ವೇಗಿಗಳನ್ನು ಜೊತೆಗೂಡಿಸುವ ಮೂಲಕ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ JCB ಅಸ್ತ್ರ ಪ್ರಯೋಗಿಸಲಿದೆ ಎನ್ನಲಾಗಿತ್ತು. ಆದರೀಗ ಆರ್ಸಿಬಿ ಬ್ಯಾಟರ್ಗಳ ಆರ್ಭಟಕ್ಕೆ JCB ಮಗುಚಿ ಬಿದ್ದಿದೆ.

ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಎಸೆದಿದ್ದು ಟ್ರೆಂಟ್ ಬೌಲ್ಟ್. ಮೊದಲ ಓವರ್ನಲ್ಲಿ ಸಾಲ್ಟ್ ವಿಕೆಟ್ ಪಡೆದ ಬೌಲ್ಟ್ ಅನ್ನು ಆ ಬಳಿಕ ಆರ್ಸಿಬಿ ಬ್ಯಾಟರ್ಗಳು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಪರಿಣಾಮ 4 ಓವರ್ಗಳಲ್ಲಿ ಟ್ರೆಂಟ್ ಬೌಲ್ಟ್ ನೀಡಿದ್ದು ಬರೋಬ್ಬರಿ 57 ರನ್ಗಳು.

ಮುಂಬೈ ಇಂಡಿಯನ್ಸ್ ತಂಡದ ಮತ್ತೋರ್ವ ವೇಗಾಸ್ತ್ರವಾಗಿ ಗುರುತಿಸಿಕೊಂಡಿರುವ ದೀಪಕ್ ಚಹರ್ ಅವರ ಓವರ್ಗಳಲ್ಲೂ ಆರ್ಸಿಬಿ ಬ್ಯಾಟರ್ಗಳು ಅಬ್ಬರಿಸಿದರು. ಪರಿಣಾಮ 2 ಓವರ್ಗಳಲ್ಲಿ ಚಹರ್ ನೀಡಿದ್ದು ಬರೋಬ್ಬರಿ 29 ರನ್ಗಳು. ಆ ಬಳಿಕ ಅವರಿಗೆ ಹಾರ್ದಿಕ್ ಪಾಂಡ್ಯ ಓವರ್ ನೀಡಲಿಲ್ಲ ಎಂಬುದು ವಿಶೇಷ.

ಇನ್ನು ಮುಂಬೈ ಇಂಡಿಯನ್ಸ್ ಪರ ತುಸು ಉತ್ತಮ ಪ್ರದರ್ಶನ ನೀಡಿದ್ದು ಜಸ್ಪ್ರೀತ್ ಬುಮ್ರಾ. 4 ಓವರ್ಗಳನ್ನು ಎಸೆದ ಬುಮ್ರಾ ಒಟ್ಟು 29 ರನ್ ನೀಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಮೂಲಕ ಆರ್ಸಿಬಿ ಬ್ಯಾಟರ್ಗಳು JCB ವೇಗಾಸ್ತ್ರದ ವಿರುದ್ಧ ಬರೋಬ್ಬರಿ 115 ರನ್ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಅದು ಸಹ ಕೇವಲ 10 ಓವರ್ಗಳಲ್ಲಿ ಎಂಬುದು ವಿಶೇಷ.
























