- Kannada News Photo gallery Cricket photos IPL 2026: Bhuvneshwar Kumar Becomes First Pacer with 200 Games
IPL 2026: ಐಪಿಎಲ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭುವನೇಶ್ವರ್ ಕುಮಾರ್
Bhuvneshwar Kumar's Historic 200th IPL Match: ಐಪಿಎಲ್ 2026 ರ 50 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು 9 ರನ್ಗಳಿಂದ ಸೋಲಿಸಿತು. ಈ ಪಂದ್ಯ ಭುವನೇಶ್ವರ್ ಕುಮಾರ್ ಅವರ 200 ನೇ ಐಪಿಎಲ್ ಪಂದ್ಯವಾಗಿತ್ತು, ಈ ಮೈಲಿಗಲ್ಲು ತಲುಪಿದ ಮೊದಲ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದರು. 200ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ವೇಗಿ ಇವರೇ. ವೈಯಕ್ತಿಕವಾಗಿ ವಿಕೆಟ್ ಸಿಗದಿದ್ದರೂ, ಭುವಿ ತಮ್ಮ ಸ್ಥಾನವನ್ನು ಐಪಿಎಲ್ ಇತಿಹಾಸದಲ್ಲಿ ಭದ್ರಪಡಿಸಿಕೊಂಡರು.
Updated on: May 08, 2026 | 3:50 PM

ಐಪಿಎಲ್ 2026 ರ 50 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 9 ರನ್ಗಳಿಂದ ಮಣಿಸಿದ ಲಕ್ನೋ ತಂಡ ಸತತ ಸೋಲುಗಳಿಗೆ ಬ್ರೇಕ್ ಹಾಕಿತು. ಇತ್ತ ಆರ್ಸಿಬಿ ಸತತ ಎರಡನೇ ಸೋಲಿಗೆ ಕೊರಳೊಡ್ಡಬೇಕಾಯಿತು (PC- IPL X).

ಈ ಪಂದ್ಯದಲ್ಲಿ ಆರ್ಸಿಬಿ ಸೋತಿತ್ತಾದರೂ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ಗೆ ಐತಿಹಾಸಿಕ ಪಂದ್ಯವಾಗಿತ್ತು. ವಾಸ್ತವವಾಗಿ ಈ ಪಂದ್ಯವು ಭುವನೇಶ್ವರ್ ಕುಮಾರ್ ಅವರ 200 ನೇ ಐಪಿಎಲ್ ಪಂದ್ಯವಾಗಿತ್ತು. ಇದರೊಂದಿಗೆ, ಅವರು ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭುವಿಯನ್ನು ಹೊರತುಪಡಿಸಿ ಬೇರೆ ಯಾವುದೇ ವೇಗದ ಬೌಲರ್ 190 ಪಂದ್ಯಗಳ ಗಡಿಯನ್ನು ತಲುಪಿಲ್ಲ ಎಂಬುದು ವಿಶೇಷ (PC- IPL X).

2011 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದಲ್ಲಿ ಆಡುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಭುವನೇಶ್ವರ್ ಕುಮಾರ್ ಆ ನಂತರ ಸನ್ರೈಸರ್ಸ್ ಹೈದರಾಬಾದ್ ಪರ ದೀರ್ಘಕಾಲ ಆಡಿದ್ದರು. ಪ್ರಸ್ತುತ ಕಳೆದ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಭುವಿ ತಂಡ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು (PC- IPL X).

ಭುವನೇಶ್ವರ್ ಕುಮಾರ್ ಇದುವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಈ ಮೂಲಕ ಲೀಗ್ನಲ್ಲಿ 200+ ವಿಕೆಟ್ಗಳನ್ನು ಪಡೆದ ಏಕೈಕ ವೇಗದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮತ್ತೊಬ್ಬ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (PC- IPL X).

ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. 2016 ಮತ್ತು 2017 ರಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಈ ಬಾರಿಯೂ ಭುವಿ ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ (PC- IPL X).

ಆದಾಗ್ಯೂ ಈ ಐತಿಹಾಸಿಕ ಪಂದ್ಯ ಭುವನೇಶ್ವರ್ ಕುಮಾರ್ಗೆ ಸ್ಮರಣೀಯವಾಗಲಿಲ್ಲ. ಏಕೆಂದರೆ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭುವಿಗೆ ವಿಕೆಟ್ ಸಿಗಲಿಲ್ಲ. ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲ್ ಮಾಡಿದ ಭುವಿ ಯಾವುದೇ ವಿಕೆಟ್ ಪಡೆಯದೆ 34 ರನ್ ಬಿಟ್ಟುಕೊಟ್ಟರು. ವಾಸ್ತವವಾಗಿ ಭುವಿಗೆ 2 ವಿಕೆಟ್ಗಳನ್ನು ಪಡೆಯುವ ಅವಕಾಶವಿತ್ತು. ಆದರೆ ಫಿಲ್ಡರ್ಗಳು ಕ್ಯಾಚ್ಗಳನ್ನು ಕೈಚೆಲ್ಲಿದ್ದರಿಂದ ಭುವಿಗೆ ಯಾವುದೇ ವಿಕೆಟ್ ಸಿಗಲಿಲ್ಲ (PC- IPL X).




