- Kannada News Photo gallery Cricket photos IPL 2026 CSK and RR Trade: Ravindra Jadeja for Sanju Samson
IPL 2026: ಸ್ವಾಪ್ ಡೀಲ್ ಆಫರ್… ರವೀಂದ್ರ ಜಡೇಜಾರನ್ನೇ ಕೈ ಬಿಡಲು ಮುಂದಾದ CSK
IPL 2026 Ravindra Jadeja: ರವೀಂದ್ರ ಜಡೇಜಾ ಕಳೆದ 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಸಿಎಸ್ಕೆ ತಂಡ ಖಾಯಂ ಸದಸ್ಯರಾಗಿ ಕಣಕ್ಕಿಳಿದಿದ್ದಾರೆ. ಇದರ ನಡುವೆ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಇದೀಗ 36 ವರ್ಷದ ರವೀಂದ್ರ ಜಡೇಜಾ ಅವರನ್ನು ಸ್ವಾಪ್ ಡೀಲ್ ಮೂಲಕ ಟ್ರೇಡ್ ಮಾಡಲು ಸಿಎಸ್ಕೆ ಫ್ರಾಂಚೈಸಿ ಮುಂದಾಗಿದೆ.
Updated on: Nov 09, 2025 | 1:58 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುಂಚಿತವಾಗಿ ಬಿಗ್ಗೆಸ್ಟ್ ಟ್ರೇಡ್ ಪ್ರಕ್ರಿಯೆ ನಡೆಯಲಿದೆಯಾ? ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ನಡುವೆ. ಇಂತಹದೊಂದು ಸುದ್ದಿ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.

ಈ ಸುದ್ದಿಯು ಇಷ್ಟೊಂದು ಮಹತ್ವ ಪಡೆಯಲು ಮುಖ್ಯ ಕಾರಣ ಸಿಎಸ್ಕೆ ಫ್ರಾಂಚೈಸಿ ಟ್ರೇಡ್ ಮಾಡಲು ಮುಂದಾಗಿರುವುದು ತನ್ನ ಖಾಯಂ ಸದಸ್ಯ ರವೀಂದ್ರ ಜಡೇಜಾ ಅವರನ್ನು. ಹೌದು, ಕೆಲ ಮೂಲಗಳ ಮಾಹಿತಿ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಜಡೇಜಾ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಮುಂದಾಗಿದೆ.

ಅಂದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ತಂಡಕ್ಕೆ ಕರೆತರಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸ್ವಾಪ್ ಡೀಲ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರಂತೆ ರವೀಂದ್ರ ಜಡೇಜಾ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಸಿಎಸ್ಕೆ ಮುಂದಾಗಿದೆ.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಟ್ರಿಸ್ಟನ್ ಸ್ಟಬ್ಸ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಮುಂದಾಗಿತ್ತು. ಈ ಟ್ರೇಡ್ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ಮುಂದೆ ಜಡೇಜಾ ಅವರ ಸ್ವಾಪ್ ಡೀಲ್ ಮುಂದಿಟ್ಟಿದೆ.

ರವೀಂದ್ರ ಜಡೇಜಾ ಹಾಗೂ ಸಂಜು ಸ್ಯಾಮ್ಸನ್ ತಲಾ 18 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಆಟಗಾರರು. ಇಬ್ಬರನ್ನು ಪರಸ್ಫರ ಬದಲಿಸಿಕೊಳ್ಳೋಣ ಎಂಬ ಆಫರ್ ಒಂದನ್ನು ಸಿಎಸ್ಕೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮುಂದಿಟ್ಟಿದ್ದಾರೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.

ಆದರೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಜೊತೆ ಡೆವಾಲ್ಡ್ ಬ್ರೆವಿಸ್ಗಾಗಿಯೂ ಬೇಡಿಕೆಯಿಟ್ಟಿದೆ ಎಂದು ತಿಳಿದು ಬಂದಿದೆ. ಅಂದರೆ ಜಡೇಜಾ ಹಾಗೂ ಬ್ರೆವಿಸ್ ಅವರನ್ನು ನೀಡಿದರೆ ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಕೊಡುವುದಾಗಿ ಆರ್ಆರ್ ಫ್ರಾಂಚೈಸಿ ತಿಳಿಸಿದೆ.

ಈ ಬೇಡಿಕೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಅವರನ್ನು ಮಾತ್ರ ಸ್ವಾಪ್ ಮಾಡಿಕೊಳ್ಳುವ ತನ್ನ ನಿಲುವಿನಲ್ಲಿ ದೃಢವಾಗಿದೆ. ಸದ್ಯ ಚೆಂಡು ಆರ್ಆರ್ ಅಂಗಳದಲ್ಲಿದ್ದು, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಜಡೇಜಾ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಒಪ್ಪಿದರೆ ಸಂಜು ಸ್ಯಾಮ್ಸನ್ ಮುಂದಿನ ಸೀಸನ್ನಲ್ಲಿ ಸಿಎಸ್ಕೆ ಪರ ಕಣಕ್ಕಿಳಿಯುವುದು ಖಚಿತ.




