ಪಂಜಾಬ್ ಕಿಂಗ್ಸ್ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು?
Punjab Kings Playoff Chances: ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಐಪಿಎಲ್ 2026ರ ಪ್ಲೇಆಫ್ ಟಿಕೆಟ್ ಸಿಗಲಿದೆಯೇ? ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಪಂಜಾಬ್ ಪಡೆಯ ಪ್ಲೇಆಫ್ ಹಾದಿ ಕಠಿಣವಾಗಿದ್ದು, ಸ್ವತಃ ಗೆಲ್ಲುವುದರ ಜೊತೆಗೆ ಬೇರೆ ತಂಡಗಳ ಸೋಲಿಗಾಗಿ ಪ್ರಾರ್ಥಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Updated on:May 18, 2026 | 7:35 AM

IPL 2026: ಐಪಿಎಲ್ 2026ರ ಆವೃತ್ತಿಯು ಅಂತಿಮ ಹಂತಕ್ಕೆ ತಲುಪುತ್ತಿದ್ದು, ಪಂಜಾಬ್ ಕಿಂಗ್ಸ್ (PBKS) ತಂಡದ ಪ್ಲೇಆಫ್ ಹಾದಿ ಈಗ ಅತ್ಯಂತ ರೋಚಕ ಹಾಗೂ ಜಟಿಲವಾಗಿದೆ. ಸತತ ಆರು ಪಂದ್ಯಗಳ ಸೋಲಿನ ಬಳಿಕವೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶವಿದೆ. ಆದರೆ ಇದಕ್ಕಾಗಿ ಇತರೆ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕು. ಅಂದರೆ ಇಲ್ಲಿ ಪಂಜಾಬ್ ಕಿಂಗ್ಸ್ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು ಎಂದು ನೋಡುವುದಾದರೆ... (PC: IPL)

ಸತತ ಸೋಲುಗಳ ಹೊರತಾಗಿಯೂ ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಪಾಲಿಗೆ ಉಳಿದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಪಂಜಾಬ್ ಪಡೆ ಭರ್ಜರಿ ಜಯ ಸಾಧಿಸಬೇಕು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಒಟ್ಟು ಅಂಕ 15 ಆಗಲಿದೆ. (PC: IPL)

ಇತ್ತ ಪಂಜಾಬ್ ಕಿಂಗ್ಸ್ 15 ಅಂಕಗಳನ್ನು ಪಡದರೆ, ಸನ್ರೈಸರ್ಸ್ ಹೈದರಾಬಾದ್ ತಂಡವು ತನ್ನ ಮುಂದಿನ ಎರಡು ಮ್ಯಾಚ್ಗಳಲ್ಲಿ ಜಯ ಸಾಧಿಸುವುದನ್ನು ಎದುರು ನೋಡಬೇಕು. ಅಂದರೆ ಎಸ್ಆರ್ಹೆಚ್ 18 ಅಥವಾ 16 ಅಂಕಗಳನ್ನು ಪಡೆದರೆ ಪಂಜಾಬ್ ಕಿಂಗ್ಸ್ ಪಾಲಿಗೆ ಯಾವುದೇ ಸಮಸ್ಯೆಯಿಲ್ಲ. (PC: IPL)

ಅತ್ತ ಗುಜರಾತ್ ಟೈಟಾನ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವುದು ಕೂಡ ಪಂಜಾಬ್ ಕಿಂಗ್ಸ್ ಪಾಲಿಗೆ ಅನಿವಾರ್ಯ. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದರೆ, ಸಿಎಸ್ಕೆ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. (PC: IPL)

ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ನಲ್ಲಿ ಸೋಲುವುದನ್ನು ಎದುರು ನೋಡಬೇಕು. ಅಂದರೆ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಆರ್ ಪಡೆ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. (PC: IPL)

ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತರೂ ಪಂಜಾಬ್ ಕಿಂಗ್ಸ್ ಪಾಲಿಗೆ ಪ್ಲಸ್ ಪಾಯಿಂಟ್. ಏಕೆಂದರೆ ಕೆಕೆಆರ್ 2 ಪಂದ್ಯ ಗೆದ್ದರೆ ಒಟ್ಟು 15 ಅಂಕಗಳನ್ನು ಪಡೆಯಲಿದೆ. ಈ ವೇಳೆ ನೆಟ್ ರನ್ ರೇಟ್ ಉತ್ತಮವಾಗಿದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬಹುದು. ಹೀಗಾಗಿ ಕೆಕೆಆರ್ ತಂಡದ ಒಂದು ಸೋಲನ್ನು ಕೂಡ ಪಂಜಾಬ್ ಕಿಂಗ್ಸ್ ಎದುರು ನೋಡಬೇಕು. (PC: IPL)

ಅಂದರೆ ಇಲ್ಲಿ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು 15 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬೇಕಿದ್ದರೆ, ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆಲ್ಲಬೇಕು. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂದಿನ ಮ್ಯಾಚ್ಗಳಲ್ಲಿ ತಲಾ ಒಂದೊಂದು ಪಂದ್ಯಗಳಲ್ಲಿ ಸೋಲಬೇಕು. ಇಂತಹದೊಂದು ಫಲಿತಾಂಶ ಮೂಡಿಬಂದರೆ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಪ್ಲೇಆಫ್ಗೇರಬಹುದು. (PC: IPL)
Published On - 7:34 am, Mon, 18 May 26

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
