- Kannada News Photo gallery Cricket photos IPL 2026 Slow Over Rate Fines: Rs 84 Lakh Collected from Captains So Far
IPL 2026: ಐದು ತಂಡಗಳ ನಾಯಕರಿಂದ 84 ಲಕ್ಷ ರೂ. ದಂಡ ವಸೂಲಿ
IPL 2026 Slow Over-Rate Fines: ಐಪಿಎಲ್ 2026 ರಲ್ಲಿ ಇಲ್ಲಿಯವರೆಗೆ 23 ಪಂದ್ಯಗಳು ನಡೆದಿವೆ. ನಿಧಾನಗತಿಯ ಓವರ್ ಬೌಲಿಂಗ್ ಮಾಡಿದ ಕಾರಣಕ್ಕೆ ಬಿಸಿಸಿಐ ಐದು ತಂಡಗಳ ನಾಯಕರಿಗೆ ದಂಡ ವಿಧಿಸಿದೆ. ಶ್ರೇಯಸ್ ಅಯ್ಯರ್ ಎರಡು ಬಾರಿ ನಿಯಮ ಉಲ್ಲಂಘಿಸಿ 36 ಲಕ್ಷ ರೂ. ದಂಡ ತೆತ್ತಿದ್ದಾರೆ. ಶುಭ್ಮನ್ ಗಿಲ್, ರುತುರಾಜ್ ಗೈಕ್ವಾಡ್, ಹಾರ್ದಿಕ್ ಪಾಂಡ್ಯ ಹಾಗೂ ಅಜಿಂಕ್ಯ ರಹಾನೆ ಸಹ ದಂಡಕ್ಕೆ ಗುರಿಯಾಗಿದ್ದಾರೆ. ಒಟ್ಟಾರೆ 84 ಲಕ್ಷ ರೂ. ದಂಡ ಸಂಗ್ರಹವಾಗಿದೆ.
Updated on: Apr 15, 2026 | 6:29 PM

2026 ರ ಐಪಿಎಲ್‌ನಲ್ಲಿ ಇದುವರೆಗೆ 23 ಪಂದ್ಯಗಳು ನಡೆದಿವೆ. ಇದುವರೆಗೆ 5 ತಂಡಗಳ ನಾಯಕರಿಗೆ ಬಿಸಿಸಿಐ ದಂಡದ ಬರೆ ಎಳೆದಿದೆ. ವಾಸ್ತವವಾಗಿ ಈ ಐದು ತಂಡಗಳ ನಾಯಕರು ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸುವಲ್ಲಿ ಎಡವಿದರು. ಹೀಗಾಗಿ ಐಪಿಎಲ್ ನಿಯಮ ಉಲ್ಲಂಘಿಸಿರುವ ಈ ಐವರು ನಾಯಕರುಗಳಿಗೆ ಬಿಸಿಸಿಐ ದಂಡ ವಿಧಿಸಿದೆ.

ಈ ಐದು ತಂಡಗಳ ನಾಯಕರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಅಗ್ರಸ್ಥಾನದಲ್ಲಿದ್ದು, ಎರಡು ಬಾರಿ ಈ ನಿಯಮ ಮುರಿದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಇದುವರೆಗೆ 36 ಲಕ್ಷ ರೂ. ದಂಡ ವಿಧಿಸಲಾಗಿದೆ. ಅವರ ನಾಯಕತ್ವದಲ್ಲಿ, ಪಂಜಾಬ್ ತಂಡ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಓವರ್ ಬೌಲಿಂಗ್ ಮಾಡಿದೆ. ಅಯ್ಯರ್ ಅವರಿಗೆ ಮೊದಲ ಬಾರಿಗೆ 12 ಲಕ್ಷ ಮತ್ತು ಎರಡನೇ ಬಾರಿಗೆ 24 ಲಕ್ಷ ರೂಗಳನ್ನು ದಂಡ ವಿಧಿಸಲಾಗಿದೆ.

ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಅವರಿಗೂ ಸರಿಯಾದ ಸಮಯಕ್ಕೆ ಓವರ್ ಮುಗಿಸದ ಕಾರಣ ದಂಡ ವಿಧಿಸಲಾಗಿದೆ. ಗಿಲ್ ಪಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಓವರ್ ಬೌಲಿಂಗ್ ಮಾಡಿತ್ತು.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಬಂಧಿಸಿದಂತೆ, ಈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಓವರ್ ಬೌಲಿಂಗ್ ಮಾಡಿತ್ತು. ಹೀಗಾಗಿ ಸಿಎಸ್ಕೆ ತಂಡದ ನಾಯಕ ರುತುರಾಜ್ ಗೈಕ್ವಾಡ್ ಅವರಿಗೆ ದಂಡ ವಿಧಿಸಲಾಗಿದೆ.

ಐಪಿಎಲ್ 2026 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೂ ದಂಡ ವಿಧಿಸಲಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಈ ನಿಯಮ ಉಲ್ಲಂಘಿಸಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ, ಆ ಪಂದ್ಯದಲ್ಲಿ ಮುಂಬೈ ತಂಡವು ಹೀನಾಯ ಸೋಲು ಅನುಭವಿಸಿತ್ತು.

ಇದೀಗ ಈ ನಿಯಮ ಉಲ್ಲಂಘಿಸಿದಕ್ಕೆ ದಂಡ ಕಟ್ಟಿದ ಐದನೇ ನಾಯಕ ಅಜಿಂಕ್ಯ ರಹಾನೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದಲ್ಲದೆ, ಇದೀಗ ಆ ತಂಡದ ನಾಯಕ ರಹಾನೆ ನಿಧಾನಗತಿಯ ಓವರ್ ದರಕ್ಕಾಗಿ 12 ಲಕ್ಷ ರೂ. ದಂಡ ಕಟ್ಟಬೇಕಾಗಿದೆ. ಇದುವರೆಗೆ ಈ ಐದು ನಾಯಕರಿಂದ ಬಿಸಿಸಿಐ ಒಟ್ಟು 84 ಲಕ್ಷ ರೂಗಳನ್ನು ದಂಡವಾಗಿ ಕಟ್ಟಿಸಿಕೊಂಡಿದೆ.




