- TV9 Kannada Photo gallery Cricket photos Jasprit Bumrah's Historic ODI Comeback: 150 Wickets and England Record vs ENG
IND vs ENG: 968 ದಿನಗಳ ಬಳಿಕ ಕಣಕ್ಕಿಳಿದು ಇತಿಹಾಸ ಸೃಷ್ಟಿಸಿದ ಬುಮ್ರಾ..!
Jasprit Bumrah's Historic ODI Comeback: ಸುಮಾರು ಮೂರು ವರ್ಷಗಳ ನಂತರ ಏಕದಿನ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ತಮ್ಮ 90ನೇ ಪಂದ್ಯದಲ್ಲಿ 150 ಏಕದಿನ ವಿಕೆಟ್ ಪಡೆದು ಭಾರತದ ಪರ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ ಹೆಚ್ಷು ಏಕದಿನ ವಿಕೆಟ್ ಪಡೆದ ಮೂರನೇ ಅತಿ ವೇಗದ ಬೌಲರ್ ಎನಿಸಿಕೊಂಡರು. ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು (31) ಏಕದಿನ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು, ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿದರು.
Updated on: Jul 14, 2026 | 7:14 PM

ಸುಮಾರು 3 ವರ್ಷಗಳ ನಂತರ ಅಂದರೆ 2023 ರ ಏಕದಿನ ಫೈನಲ್ ನಂತರ ಏಕದಿನ ಕ್ರಿಕೆಟ್‌ಗೆ ಮರಳುತ್ತಿರುವ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇತಿಹಾಸ ಸೃಷ್ಟಿಸಿದರು.

ಸುಮಾರು 968 ದಿನಗಳ ನಂತರ ಏಕದಿನ ಪಂದ್ಯವನ್ನಾಡದ ಬುಮ್ರಾ ತಮ್ಮ ತೀಕ್ಷ್ಣ ಬೌಲಿಂಗ್‌ನಿಂದ ಆತಿಥೇಯ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಲ್ಲದೆ, ಎರಡು ದಾಖಲೆಗಳನ್ನು ಸಹ ನಿರ್ಮಿಸಿದರು. ಬುಮ್ರಾ ತಮ್ಮ ಎರಡನೇ ಸ್ಪೆಲ್‌ನ ಮೊದಲ ಎಸೆತದಲ್ಲೇ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ನಂಬರ್ 1 ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಅವರು ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಹಿಂದಿಕ್ಕಿದ್ದಾರೆ. ಜಸ್ಪ್ರೀತ್ ಬುಮ್ರಾ ಈಗ ಇಂಗ್ಲೆಂಡ್‌ನಲ್ಲಿ 31 ಏಕದಿನ ವಿಕೆಟ್‌ಗಳನ್ನು ಹೊಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ಜಸ್ಪ್ರೀತ್ ಬುಮ್ರಾ 31 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ರವೀಂದ್ರ ಜಡೇಜಾ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 28 ವಿಕೆಟ್‌ಗಳೊಂದಿಗೆ ಭುವನೇಶ್ವರ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ.

ಹ್ಯಾರಿ ಬ್ರೂಕ್ ಅವರ ಈ ವಿಕೆಟ್ ಜಸ್ಪ್ರೀತ್ ಬುಮ್ರಾ ಅವರ ಏಕದಿನ ವೃತ್ತಿಜೀವನದಲ್ಲಿ 150 ನೇ ವಿಕೆಟ್ ಆಗಿದೆ. ಬುಮ್ರಾ ಕೇವಲ 90 ನೇ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದು, ಇದರೊಂದಿಗೆ ಅವರು 150 ಏಕದಿನ ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಅತಿ ವೇಗದ ಬೌಲರ್ ಎನಿಸಿಕೊಂಡರು.

ಮೊಹಮ್ಮದ್ ಶಮಿ (80 ಪಂದ್ಯಗಳು) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕುಲ್ದೀಪ್ ಯಾದವ್ (88 ಪಂದ್ಯಗಳು) ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಪಂದ್ಯಗಳಂತೆ, ಅವರ 150 ನೇ ಟೆಸ್ಟ್ ವಿಕೆಟ್ ಕೂಡ ಇಂಗ್ಲೆಂಡ್ ನಾಯಕನದ್ದಾಗಿತ್ತು ಎಂಬುದು ಗಮನಾರ್ಹ. ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ತಮ್ಮ 150 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು.




