- Kannada News Photo gallery Cricket photos Mitchell Santner Rescues NZ with Record Partnership, Reaches 1000 T20I Runs vs SL
SL vs NZ: 6,6,6,6.. ಲಂಕಾ ವಿರುದ್ಧ ಅಬ್ಬರಿಸಿ ವಿಶೇಷ ದಾಖಲೆ ಬರೆದ ಮಿಚೆಲ್ ಸ್ಯಾಂಟ್ನರ್
Mitchell Santner T20 World Cup: ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡ ಸಂಕಷ್ಟದಲ್ಲಿದ್ದಾಗ, ನಾಯಕ ಮಿಚೆಲ್ ಸ್ಯಾಂಟ್ನರ್ 47 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಮೆಕ್‌ಕಾಂಚಿ ಜೊತೆಗೂಡಿ 84 ರನ್‌ಗಳ ಐತಿಹಾಸಿಕ 7ನೇ ವಿಕೆಟ್ ಜೊತೆಯಾಟ ನಿರ್ಮಿಸಿದ ಸ್ಯಾಂಟ್ನರ್, ಟಿ20ಐನಲ್ಲಿ 1000 ರನ್ ಪೂರ್ಣಗೊಳಿಸಿ ದಾಖಲೆ ಬರೆದರು. ಅವರ ನಿರ್ಣಾಯಕ ಇನ್ನಿಂಗ್ಸ್ ನ್ಯೂಜಿಲೆಂಡ್ ತಂಡವನ್ನು ಉತ್ತಮ ಮೊತ್ತ ಗಳಿಸಲು ನೆರವಾಯಿತು.
Updated on: Feb 25, 2026 | 10:31 PM

ಶ್ರೀಲಂಕಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನಿರ್ಣಾಯಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಶ್ರೀಲಂಕಾ ವಿರುದ್ಧ, ನ್ಯೂಜಿಲೆಂಡ್ 84 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಕ್ರೀಸ್ಗೆ ಬಂದ ಮಿಚೆಲ್ ಸ್ಯಾಂಟ್ನರ್, ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಕೋಲ್ ಮೆಕ್‌ಕಾಂಚಿ ಅವರೊಂದಿಗೆ ನಿರ್ಣಾಯಕ ಜೊತೆಯಾಟವನ್ನಾಡಿದಲ್ಲದೆ ದಾಖಲೆಯನ್ನು ಸಹ ಮುರಿದರು.

ಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 6 ವಿಕೆಟ್‌ಗೆ 84 ರನ್ ಗಳಿಸಿತ್ತು. ಈ ವೇಳೆ ಜೊತೆಯಾದ ಮಿಚೆಲ್ ಸ್ಯಾಂಟ್ನರ್ ಮತ್ತು ಮೆಕ್‌ಕಾಂಚಿ 47 ಎಸೆತಗಳಲ್ಲಿ 84 ರನ್‌ಗಳ ಜೊತೆಯಾಟ ಕಟ್ಟಿದರು. ಇದರ ಪರಿಣಾಮವಾಗಿ ಒಂದು ಹಂತದಲ್ಲಿ ತತ್ತರಿಸುತ್ತಿದ್ದ ನ್ಯೂಜಿಲೆಂಡ್‌ನ ಇನ್ನಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 168 ರನ್ ಗಳಿಸಿತು.

ಮಿಚೆಲ್ ಸ್ಯಾಂಟ್ನರ್ ಮತ್ತು ಮೆಕ್‌ಕಾಂಚಿ ನಡುವಿನ 84 ರನ್‌ಗಳ ಪಾಲುದಾರಿಕೆಯು ನ್ಯೂಜಿಲೆಂಡ್ ಪರ ಏಳನೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜೊತೆಯಾಟವೆಂಬ ದಾಖಲೆಯನ್ನು ನಿರ್ಮಿಸಿತು. ಈ ಹಿಂದೆ ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ನಡುವೆ ದಾಖಲಾಗಿದ್ದ 24 ರನ್‌ಗಳ ಜೊತೆಯಾಟ ಇದುವರೆಗಿನ ದಾಖಲೆಯಾಗಿತ್ತು.

ಇದರ ಜೊತೆಗೆ ಮೆಕ್‌ಕಾಂಚಿ ಜೊತೆಗೂಡಿ ಮಿಚೆಲ್ ಸ್ಯಾಂಟ್ನರ್ 26 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಸೇರಿದಂತೆ 47 ರನ್ ಗಳಿಸಿದರು. ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ಔಟಾದರು. ಮೆಕ್‌ಕಾಂಚಿ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 31 ರನ್ ಗಳಿಸಿ ಅಜೇಯರಾಗುಳಿದರು.

ಶ್ರೀಲಂಕಾ ವಿರುದ್ಧ 47 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಮಿಚೆಲ್ ಸ್ಯಾಂಟ್ನರ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸಿದರು. ಸ್ಯಾಂಟ್ನರ್ ತಮ್ಮ ಇನ್ನಿಂಗ್ಸ್‌ನ 26 ನೇ ರನ್ ಗಳಿಸಿದ ತಕ್ಷಣ ಈ ಮೈಲಿಗಲ್ಲು ತಲುಪಿದರು. ಮಿಚೆಲ್ ಸ್ಯಾಂಟ್ನರ್ ಈಗ 132 ಪಂದ್ಯಗಳಿಂದ 88 ಇನ್ನಿಂಗ್ಸ್‌ಗಳಲ್ಲಿ 1,021 ರನ್‌ಗಳನ್ನು ಗಳಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ 13 ನೇ ನ್ಯೂಜಿಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೂ ಸ್ಯಾಂಟ್ನರ್ ಪಾತ್ರರಾಗಿದ್ದಾರೆ.
