- Kannada News Photo gallery Cricket photos Mohammed Shami Ranji Comeback: 3 Wickets Silence BCCI Fitness Doubts
Ranji Trophy: ಒಂದೇ ಓವರ್‌ನಲ್ಲಿ 3 ವಿಕೆಟ್ ಉರುಳಿಸಿ ಬಿಸಿಸಿಐಗೆ ತಿರುಗೇಟು ನೀಡಿದ ಶಮಿ
Mohammed Shami: ಗಾಯದ ಬಳಿಕ ರಣಜಿ ಟ್ರೋಫಿಗೆ ಮರಳಿದ ಮೊಹಮ್ಮದ್ ಶಮಿ, ಉತ್ತರಾಖಂಡ್ ವಿರುದ್ಧ 3 ವಿಕೆಟ್ ಪಡೆದು ಮಿಂಚಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ಮುಖ್ಯ ಆಯ್ಕೆಗಾರರು ಪ್ರಶ್ನೆ ಎತ್ತಿದ್ದರು. ಶಮಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಬಿಸಿಸಿಐಗೆ ದಿಟ್ಟ ತಿರುಗೇಟು ನೀಡಿದ್ದು, ತಮ್ಮ ಫಿಟ್ನೆಸ್ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
Updated on: Oct 15, 2025 | 6:42 PM

2023 ರ ವಿಶ್ವಕಪ್ ಬಳಿಕ ಗಾಯಗಳಿಂದ ಬಳಲುತ್ತಿರುವ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ದ ಶಮಿ, ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿದ್ದರು. ಆದಾಗ್ಯೂ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲಾಗಿಲ್ಲ. ಇದಕ್ಕೆ ಕಾರಣ ನೀಡಿದ್ದ ಅಗರ್ಕರ್, ಶಮಿ ಫಿಟ್ನೆಸ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದರು.

ಇದಾದ ಬಳಿಕ ರಣಜಿ ಟೂರ್ನಿ ಆರಂಭಕ್ಕೂ ಮುನ್ನ ಬಿಸಿಸಿಐಗೆ ಮಾತಿನ ತಿರುಗೇಟು ನೀಡಿದ್ದ ಮೊಹಮ್ಮದ್ ಶಮಿ, ಇದೀಗ ತಮ್ಮ ಪ್ರದರ್ಶನದ ಮೂಲಕವೂ ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ. ವಾಸ್ತವವಾಗಿ ಇಂದಿನಿಂದ ಆರಂಭವಾಗಿರುವ ರಣಜಿ ಟ್ರೋಫಿಯಲ್ಲಿ ಬೆಂಗಾಲ್ ಪರ ಆಡುತ್ತಿರುವ ಶಮಿ, ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದಾರೆ.

ಉತ್ತರಾಖಂಡ್ ವಿರುದ್ಧದ ಈ ಪಂದ್ಯದಲ್ಲಿ ಶಮಿ ತಮ್ಮ ಆರಂಭಿಕ ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ ತಮ್ಮ 15 ನೇ ಓವರ್‌ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. 15ನೇ ಓವರ್ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ವಿಕೆಟ್ ಪಡೆದ ಶಮಿಗೆ ನಾಲ್ಕನೇ ಎಸೆತದಲ್ಲಿ ಹ್ಯಾಟ್ರಿಕ್ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ಐದನೇ ಎಸೆತದಲ್ಲಿ ವಿಕೆಟ್ ಪಡೆದು ಉತ್ತರಾಖಂಡದ ಇನ್ನಿಂಗ್ಸ್ ಅನ್ನು 213 ಕ್ಕೆ ಕೊನೆಗೊಳಿಸಿದರು.

ಮೊದಲ ಇನ್ನಿಂಗ್ಸ್ನಲ್ಲಿ 14.5 ಓವರ್ ಬೌಲ್ ಮಾಡಿದ ಮೊಹಮ್ಮದ್ ಶಮಿ ಇದರಲ್ಲಿ 37 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಇದರಲ್ಲಿ 4 ಮೇಡನ್ ಓವರ್ಗಳು ಸೇರಿದ್ದವು. ರಣಜಿ ಮೊದಲ ಪಂದ್ಯದಲ್ಲೇ ತಮ್ಮ ಮಾರಕ ಬೌಲಿಂಗ್ ಮೂಲಕ ಶಮಿ, ಬಿಸಿಸಿಐ ನಿರ್ಲಕ್ಷ್ಯಕ್ಕೆ ತಿರುಗೇಟು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಮಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ವಾಸ್ತವವಾಗಿ 2025 ರ ಚಾಂಪಿಯನ್ಸ್ ಟ್ರೋಫಿಯ ನಂತರ ಶಮಿ ಭಾರತ ಪರ ಯಾವುದೇ ಪಂದ್ಯವನ್ನು ಆಡಿಲ್ಲ, ಇದಕ್ಕೆ ಅವರ ಫಿಟ್ನೆಸ್ ಕಾರಣ ಎಂದು ನಂಬಲಾಗಿದೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸಕ್ಕೂ ಅವರನ್ನು ತಂಡದಲ್ಲಿ ಸೇರಿಸಲಾಗಿಲ್ಲ. ತಂಡವನ್ನು ಘೋಷಿಸಿದ ನಂತರ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶಮಿ ಅವರ ಫಿಟ್ನೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದರು.




