- TV9 Kannada Photo gallery Cricket photos Jos Buttler Century vs India T20: Ends Run Drought with Record 131!
IND vs ENG: 64 ಎಸೆತ 131 ರನ್..! ಭಾರತದ ಬೌಲರ್‌ಗಳನ್ನು ಬೆಂಡೆತ್ತಿದ ಬಟ್ಲರ್
Jos Buttler Century vs India T20: ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಸ್ಫೋಟಕ ಶತಕ ಬಾರಿಸುವ ಮೂಲಕ ರನ್ ಬರ ನೀಗಿಸಿಕೊಂಡರು. 64 ಎಸೆತಗಳಲ್ಲಿ 131 ರನ್ ಗಳಿಸಿ, 5 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20 ಶತಕದ ಬರವನ್ನು ನೀಗಿಸಿಕೊಂಡರು. ಹ್ಯಾರಿ ಬ್ರೂಕ್ ಜೊತೆ 233 ರನ್‌ಗಳ ದಾಖಲೆ ಜೊತೆಯಾಟ ನಡೆಸಿ, ಇಂಗ್ಲೆಂಡ್ 257 ರನ್ ಗಳಿಸಲು ನೆರವಾದರು. ಇದು ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತು.
Updated on: Jul 11, 2026 | 10:48 PM

ರನ್ ಬರ ಎದುರಿಸುತ್ತಿದ್ದ ಇಂಗ್ಲೆಂಡ್‌ನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೂಡ ಟೀಂ ಇಂಡಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಲಯ ಕಂಡುಕೊಂಡಿದ್ದಾರೆ. ಟೀಂ ಇಂಡಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬಟ್ಲರ್ ಸುಮಾರು 5 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದರು.

ಸೌತಾಂಪ್ಟನ್‌ನ ಯುಟಿಲಿಟಾ ಬೌಲ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಸ್ಫೋಟಕ ಶತಕ ಬಾರಿಸಿದರು. ಈ ಪಂದ್ಯಕ್ಕೂ ಮೊದಲು ಬಟ್ಲರ್ ರನ್ ಬರ ಎದುರಿಸುತ್ತಿದ್ದರು, ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 44 ರನ್ ಗಳಿಸಿದರು. ಆದರೆ ಬಟ್ಲರ್ ತಮ್ಮ 160 ನೇ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡರು.

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಫಿಲ್ ಸಾಲ್ಟ್ ಬೇಗನೆ ಔಟಾದರು. ಆದರೆ ಬಟ್ಲರ್ಗೆ ಈ ವಿಕೆಟ್ ಪತನ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಬಟ್ಲರ್ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಮುಂದಿನ 17 ಎಸೆತಗಳಲ್ಲಿ ಉಳಿದ 50 ರನ್ಗಳನ್ನು ಕಲೆಹಾಕಿ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಎರಡನೇ ಶತಕವನ್ನು ಪೂರೈಸಿದರು.

ಬಟ್ಲರ್ 51 ಎಸೆತಗಳಲ್ಲಿಯೇ ತಮ್ಮ ಶತಕ ಪೂರೈಸಿದರು. 16ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ಮೈಲಿಗಲ್ಲು ದಾಟಿದ ಬಟ್ಲರ್, ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ ತಮ್ಮ ಶತಕ ಪೂರೈಸಿದರು. ಇದು ಅವರ ಎರಡನೇ ಶತಕವಾಗಿದ್ದು, ಸುಮಾರು ಐದು ವರ್ಷಗಳಲ್ಲಿ ಅವರ ಮೊದಲ ಶತಕವಾಗಿದೆ. ಬಟ್ಲರ್ ಅವರ ಹಿಂದಿನ ಶತಕ ನವೆಂಬರ್ 2021 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಬಂದಿತು.

ಶತಕದ ನಂತರವೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಬಟ್ಲರ್ ಅಂತಿಮವಾಗಿ 19 ನೇ ಓವರ್‌ನಲ್ಲಿ ಔಟಾದರು. ಕೇವಲ 64 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳು ಮತ್ತು 12 ಬೌಂಡರಿಗಳನ್ನು ಒಳಗೊಂಡಂತೆ 131 ರನ್‌ಗಳ ಇನ್ನಿಂಗ್ಸ್ ಆಡಿದರು. ಇದಲ್ಲದೆ, ಬಟ್ಲರ್, ನಾಯಕ ಹ್ಯಾರಿ ಬ್ರೂಕ್ ಅವರೊಂದಿಗೆ ಎರಡನೇ ವಿಕೆಟ್‌ಗೆ 233 ರನ್‌ಗಳ ಜೊತೆಯಾಟವನ್ನಾಡಿದರು.

ಇದು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ (ಪೂರ್ಣ ಸದಸ್ಯ ರಾಷ್ಟ್ರಗಳಲ್ಲಿ) ಯಾವುದೇ ವಿಕೆಟ್‌ಗೆ ಅತ್ಯಧಿಕ ಪಾಲುದಾರಿಕೆಯಾಗಿದೆ. ಇದರ ಜೊತೆಗೆ ಈ ಹಿಂದೆ ಈ ದಾಖಲೆ ನಿರ್ಮಿಸಿದ್ದ ಭಾರತದ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ (210 ರನ್‌ಗಳು) ಅವರ ದಾಖಲೆಯನ್ನು ಮುರಿದರು. ಇವರಿಬ್ಬರ ಜೊತೆಯಾಟದಿಂದಾಗಿ ಇಂಗ್ಲೆಂಡ್ 257 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು.




