RCB ತಂಡದ್ದು ಅಂತಿಂಥ ಗೆಲುವಲ್ಲ… ವಿಶ್ವ ದಾಖಲೆಯ ವಿಜಯ
RCB Records: ವುಮೆನ್ಸ್ ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ತಂಡ ಫೈನಲ್ ಪಂದ್ಯದಲ್ಲಿ 200 ಕ್ಕಿಂತ ಅಧಿಕ ಮೊತ್ತವನ್ನು ಚೇಸ್ ಮಾಡಿ ಗೆದ್ದಿಲ್ಲ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಸಹ 19.4 ಓವರ್ಗಳಲ್ಲಿ 204 ರನ್ ಕಲೆಹಾಕುವ ಮೂಲಕ. ಇದರೊಂದಿಗೆ ಫೈನಲ್ ಪಂದ್ಯದಲ್ಲಿ ಅತೀ ಕಡಿಮೆ ಓವರ್ಗಳಲ್ಲಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಕೂಡ ತನ್ನದಾಗಿಸಿಕೊಂಡಿದೆ.
Updated on:Feb 07, 2026 | 7:36 AM

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ 200+ ರನ್ಗಳನ್ನು ಬೆನ್ನತ್ತಿ ಗೆದ್ದಿರುವುದು ಕೇವಲ ಮೂರು ತಂಡಗಳು ಮಾತ್ರ. ಈ ಮೂರು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು. ಅದರಲ್ಲೂ ಈ ಸಾಧನೆ ಮಾಡಿದ ಏಕೈಕ ಮಹಿಳಾ ತಂಡ ಆರ್ಸಿಬಿ.

ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಆರ್ಸಿಬಿ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕಳಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿ ಸ್ಮೃತಿ ಮಂಧಾನ (87) ಹಾಗೂ ಜಾರ್ಜಿಯಾ ವೊಲ್ (79) ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಎರಡು ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ 19.4 ಓವರ್ಗಳಲ್ಲಿ 204 ರನ್ ಬಾರಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವು ಅಂತಿಂಥ ಗೆಲುವಲ್ಲ. ಬದಲಾಗಿ ವಿಶ್ವ ದಾಖಲೆಯ ವಿಜಯ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಮ್ಯಾಚ್ನಲ್ಲಿ 200+ ಸ್ಕೋರ್ ಬೆನ್ನತ್ತಿ ಗೆದ್ದಿರುವುದು ಕೇವಲ 3 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಕೊಲ್ಕತ್ತಾ ನೈಟ್ ರೈಡರ್ಸ್. ಇದಾದ ಬಳಿಕ ಲಾಹೋರ್ ಖಲಂದರ್ಸ್ ಕೂಡ ಭರ್ಜರಿ ಚೇಸಿಂಗ್ನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 200+ ಸ್ಕೋರ್ ಬೆನ್ನತ್ತಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

2014 ರಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 200 ರನ್ಗಳನ್ನು ಬೆನ್ನತ್ತಿದ 3 ವಿಕೆಟ್ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

2024 ರಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಲಾಹೋರ್ ಖಲಂದರ್ಸ್ ತಂಡವು 19.5 ಓವರ್ಗಳಲ್ಲಿ 204 ರನ್ಗಳನ್ನು ಬೆನ್ನತ್ತಿ ಚಾಂಪಿಯನ್ ಪಟ್ಟಕ್ಕೇರಿದಿದ್ದರು.

ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ರನ್ಗಳ ಗುರಿಯನ್ನು ಕೇವಲ 19.4 ಓವರ್ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ 200+ ರನ್ ಚೇಸ್ ಮಾಡಿ ಗೆದ್ದ ವಿಶ್ವದ ಮೊದಲ ಮಹಿಳಾ ತಂಡ ಎಂಬ ವಿಶ್ವ ದಾಖಲೆಯನ್ನು ಆರ್ಸಿಬಿ ತಂಡ ತನ್ನದಾಗಿಸಿಕೊಂಡಿದೆ.
Published On - 7:34 am, Sat, 7 February 26
