Sai Sudharsan: ಆಕರ್ಷಕ ಶತಕ ಬಾರಿಸಿ ಮಿಂಚಿದ ಸಾಯಿ ಸುದರ್ಶನ್
Sai Sudharsan: ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಆದರೆ ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಏಕೆಂದರೆ ಗುಜರಾತ್ ಟೈಟಾನ್ಸ್ ಸಾಯಿ ಸುದರ್ಶನ್ಗೆ ನೀಡುತ್ತಿರುವುದು ಕೇವಲ 20 ಲಕ್ಷ ರೂ. ಮಾತ್ರ. ಹೀಗಾಗಿ ಅವರು ಮೆಗಾ ಆಕ್ಷನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
Updated on: Aug 31, 2024 | 12:09 PM

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ 53ನೇ ಪಂದ್ಯದಲ್ಲಿ ಭಾರತದ ಸಾಯಿ ಸುದರ್ಶನ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸರ್ರೆ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಸರ್ರೆ ತಂಡಕ್ಕೆ ನಾಯಕ ರೋರಿ ಬರ್ನ್ಸ್ ಭರ್ಜರಿ ಆರಂಭ ಒದಗಿಸಿದ್ದರು. ಆಕರ್ಷಕ ಬ್ಯಾಟಿಂಗ್ನೊಂದಿಗೆ ನಾಟಿಂಗ್‌ಹ್ಯಾಮ್‌ಶೈರ್ ಬೌಲರ್ಗಳನ್ನು ದಂಡಿಸಿದ ಬರ್ನ್ಸ್ 266 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 161 ರನ್ ಬಾರಿಸಿ ಔಟಾದರು.

ಇನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ಸಾಯಿ ಸುದರ್ಶನ್ ಅತ್ಯಾಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ತಾಳ್ಮೆಯುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದ 22 ವರ್ಷದ ಸಾಯಿ 178 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 105 ರನ್ ಬಾರಿಸಿದರು. ಈ ಮೂಲಕ ಚೊಚ್ಚಲ ಕೌಂಟಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ರೋರಿ ಬರ್ನ್ಸ್ ಹಾಗೂ ಸಾಯಿ ಸುದರ್ಶನ್ ಅವರ ಈ ಶತಕಗಳೊಂದಿಗೆ ಸರ್ರೆ ತಂಡವು ಮೊದಲ ಇನಿಂಗ್ಸ್ನಲ್ಲಿ 525 ರನ್ ಪೇರಿಸಿ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿರುವ ನಾಟಿಂಗ್‌ಹ್ಯಾಮ್‌ಶೈರ್ ತಂಡವು 2ನೇ ದಿನದಾಟದ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ.

ತಮಿಳುನಾಡು ಮೂಲದ ಸಾಯಿ ಸುದರ್ಶನ್ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಹಾಗೆಯೇ ಈ ಹಿಂದೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ಟಿ20 ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಐಪಿಎಲ್ನಲ್ಲಿ ಸ್ಪೋಟಕ ಇನಿಂಗ್ಸ್ಗಳ ಮೂಲಕ ಗಮನ ಸೆಳೆದಿರುವ ಯುವ ಎಡಗೈ ದಾಂಡಿಗ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




