- TV9 Kannada Photo gallery Cricket photos India vs England T20: Sanju Samson's Batting Failure Ignites Selection Debate
IND vs ENG: ಇಂಗ್ಲೆಂಡ್ ವಿರುದ್ಧವೂ ಪುಟಿದೇಳದ ಸಂಜು ಸ್ಯಾಮ್ಸನ್ಗೆ ಇನ್ನೇಷ್ಟು ಅವಕಾಶ?
Sanju Samson's Form Crisis: ಐರ್ಲೆಂಡ್ ಹಾಗೂ ಇಂಗ್ಲೆಂಡ್ T20 ಸರಣಿಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣಿಸಿದೆ. ಸಂಜು ಸ್ಯಾಮ್ಸನ್ ಸತತ ಕಳಪೆ ಪ್ರದರ್ಶನ ನೀಡಿದ್ದರೂ, ಅವರಿಗೆ ಅವಕಾಶ ನೀಡಲಾಗುತ್ತಿದೆ. ಮೊದಲ ಇಂಗ್ಲೆಂಡ್ T20ಯಲ್ಲಿ ಕೇವಲ 1 ರನ್ ಗಳಿಸಿದ್ದ ಸಂಜುರ ಫಾರ್ಮ್ ಕುರಿತು ಪ್ರಶ್ನೆಗಳೆದ್ದಿವೆ. ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿಗೆ ಅವಕಾಶ ನೀಡದೆ ಸಂಜುವಿಗೆ ಅವಕಾಶ ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Updated on: Jul 01, 2026 | 10:50 PM

ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಸೋಲಲು ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ಅಗ್ರಕ್ರಮಾಂಕದ ಬ್ಯಾಟರ್ಗಳ ಸಪ್ಪೆ ಪ್ರದರ್ಶನ ಟೀಂ ಇಂಡಿಯಾವನ್ನು ಐತಿಹಾಸಿಕ ಸರಣಿ ಸೋಲಿಗೆ ತಳ್ಳಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ಧ ತಂಡ ತನ್ನ ಲೋಪವನ್ನು ಸರಿಪಡಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಆದರೆ ಅದು ಆಗಲಿಲ್ಲ (PC-PTI).

ಇಂಗ್ಲೆಂಡ್ ವಿರುದ್ಧ ಡರ್ಹಾಮ್ನ ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿತು. ಕೇವಲ 6 ರನ್ಗಳಿಗೆ ತಂಡ ತನ್ನ ಪ್ರಮುಖ 2 ವಿಕೆಟ್ಗಳನ್ನು ಕಳೆದುಕೊಂಡಿತು. ಆ ಎರಡು ವಿಕೆಟ್ಗಳು ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ರೂಪದಲ್ಲಿ ಬಿದ್ದವು (PC-PTI).

ವಾಸ್ತವವಾಗಿ ಐರ್ಲೆಂಡ್ ಸರಣಿಯಲ್ಲಿ ಸಂಜು ಹೀನಾಯ ಪ್ರದರ್ಶನ ನೀಡಿದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರನ್ನು ತಂಡದಿಂದ ಹೊರಗಿಟ್ಟು, ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ನೀಡಬಹುದು ಎನ್ನಲಾಗುತ್ತಿತ್ತು. ಆದರೆ ಸಂಜು ಮೇಲೆ ಭರವಸೆ ಇಟ್ಟಿದ್ದ ಆಡಳಿತ ಮಂಡಳಿ ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ನೀಡಿತು (PC-PTI).

ಆದರೆ ಈ ಪಂದ್ಯದಲ್ಲೂ ಸಂಜುಗೆ ಒಂದಂಕಿ ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿದ ಸಂಜು ಕೇವಲ 1 ರನ್ ಬಾರಿಸಿ ಔಟಾದರು. ಸಂಜು ಈ ಪಂದ್ಯದಲ್ಲಿ ಮಾತ್ರವಲ್ಲ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿ ಕೇವಲ 5 ರನ್ ಬಾರಿಸಿದ್ದ ಸಂಜುಗೆ 2ನೇ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ (PC-PTI).

ಸಂಜು ಸ್ಯಾಮ್ಸನ್ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಅವರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಇದು ಅಭಿಮಾನಿಗಳ ಹಾಗೂ ಹಿರಿಯ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಫಾರ್ಮ್ನಲ್ಲಿರುವ ವೈಭವ್ನನ್ನು ಬಿಟ್ಟು ಕಳಪೆ ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್ರನ್ನು ಆಡಿಸುತ್ತಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಾದರೂ ವೈಭವ್ಗೆ ಅವಕಾಶ ಸಿಗುತ್ತಾ ಕಾದುನೋಡಬೇಕಿದೆ (PC-PTI).




