- Kannada News Photo gallery Cricket photos T20 World Cup 2026:Team India's Five Young Debutants Ready to Shine
T20 World Cup 2026: ಟೀಂ ಇಂಡಿಯಾದ ಐವರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್
T20 World Cup 2026: ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಯುವ ಪಡೆಯೊಂದಿಗೆ ಸಜ್ಜಾಗಿದೆ. ಫೆಬ್ರವರಿ 7ರಂದು ಅಮೆರಿಕ ವಿರುದ್ಧ ಮೊದಲ ಪಂದ್ಯ. ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ತಿಲಕ್ ವರ್ಮಾ, ರಿಂಕು ಸಿಂಗ್ ಹಾಗೂ ಹರ್ಷಿತ್ ರಾಣಾ ಸೇರಿದಂತೆ ಐವರು ಪ್ರಮುಖ ಆಟಗಾರರು ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಇವರ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು.
Updated on: Feb 03, 2026 | 4:16 PM

ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಯುವ ಪಡೆಯನ್ನು ಕಟ್ಟಿಕೊಂಡು ಕಣಕ್ಕಿಳಿಯುತ್ತಿದೆ. ಫೆಬ್ರವರಿ 7 ರಂದು ಭಾರತ ಟಿ20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿರುವ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಈಗಾಗಲೇ ಖಚಿತವಾದಂತ್ತಾಗಿದೆ. ಆದಾಗ್ಯೂ ಈ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವ ಐದು ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ.

ಅಭಿಷೇಕ್ ಶರ್ಮಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ. 2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿರುವ ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ ನಿವೃತ್ತಿಯ ನಂತರ ತಂಡದಲ್ಲಿ ಆರಂಭಿಕನಾಗಿ ಆಡುತ್ತಿದ್ದಾರೆ. ಅಂದಿನಿಂದ ಟಿ20 ತಂಡದ ಭಾಗವಾಗಿರುವ ಅಭಿಷೇಕ್ 38 ಟಿ20 ಪಂದ್ಯಗಳಲ್ಲಿ 194.74 ಸ್ಟ್ರೈಕ್ ರೇಟ್‌ನಲ್ಲಿ 1297 ರನ್ ಗಳಿಸಿದ್ದಾರೆ.

2017 ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ಗೆ ಇದುವರೆಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ 9 ವರ್ಷಗಳ ನಂತರ, ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಪರ ಇದುವರೆಗೆ 58 ಟಿ20 ಪಂದ್ಯಗಳನ್ನು ಆಡಿರುವ ಸುಂದರ್ 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭಾರತ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಆಡುತ್ತಿರುವ ತಿಲಕ್ ವರ್ಮಾ, ಕೊಹ್ಲಿ ನಿವೃತ್ತಿಯ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. 2023 ರಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಆಡಿರುವ 40 ಪಂದ್ಯಗಳಲ್ಲಿ 114.09 ಸ್ಟ್ರೈಕ್ ರೇಟ್‌ನಲ್ಲಿ 1183 ರನ್ ಗಳಿಸಿದ್ದಾರೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಮೀಸಲು ಆಟಗಾರನಾಗಿ ತಂಡದಲ್ಲಿ ಆಯ್ಕೆಯಾಗಿದ್ದರು. ಅಂದರೆ 15 ಆಟಗಾರರ ತಂಡದಲ್ಲಿಯೂ ರಿಂಕು ಸ್ಥಾನ ಪಡೆದಿರಲಿಲ್ಲ. ಆದರೀಗ ಪ್ರಮುಖ ತಂಡದ ಭಾಗವಾಗಿರುವ ರಿಂಕು ಸಿಂಗ್ 2023 ರಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ ಆಡಿರುವ 40 ಪಂದ್ಯಗಳಲ್ಲಿ 161.05 ಸ್ಟ್ರೈಕ್ ರೇಟ್‌ನಲ್ಲಿ 641 ರನ್ ಗಳಿಸಿದ್ದಾರೆ.

ಯುವ ವೇಗಿ ಹರ್ಷಿತ್ ರಾಣಾ ಕೂಡ ತಮ್ಮ ಮೊದಲ ಟಿ20 ವಿಶ್ವಕಪ್ ಆಡಲಿದ್ದಾರೆ. ಬುಮ್ರಾ ಹಾಗೂ ಅರ್ಷದೀಪ್ ಜೊತೆಗೆ ತಂಡದ ಬೌಲಿಂಗ್ ವಿಭಾಗವನ್ನು ನಿಭಾಯಿಸಲಿರುವ ಹರ್ಷಿತ್ ಕಳೆದ ವರ್ಷ ಜನವರಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದರು. ಇದುವರೆಗೆ ಆಡಿರುವ 9 ಟಿ20 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
