- Kannada News Photo gallery Cricket photos Team india cricketer Virender Sehwag has tweeted about the Adipurush movie
‘ಆದಿಪುರುಷ್ ನೋಡಿ ಆ ಪ್ರಶ್ನೆಗೆ ಉತ್ತರ ಕಂಡುಕೊಂಡೆ’; ಪ್ರಭಾಸ್ ಸಿನಿಮಾಕ್ಕೆ ಸೆಹ್ವಾಗ್ ರಿಯಾಕ್ಷನ್
Virender Sehwag: ಆದಿಪುರುಷ್ ಚಿತ್ರವನ್ನು ವೀಕ್ಷಿಸಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಆದಿಪುರುಷ್ ಚಿತ್ರ ತಂಡವನ್ನು ಕುಟುಕಿದ್ದಾರೆ.
Updated on:Jun 26, 2023 | 11:03 AM

ಜೂನ್ 16ರಂದು ತೆರೆಗಪ್ಪಳಿಸಿದ್ದ ‘ಆದಿಪುರುಷ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ಸಿಕ್ಕಿದ್ದೇ ಹೆಚ್ಚು. ತಾನಾಜಿ ಖ್ಯಾತಿಯ ಓಂ ರಾವತ್ ನಿರ್ದೇಶನದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ ಚಿತ್ರ ತೆರೆಕಂಡ ಬಳಿಕ ಪ್ರೇಕ್ಷಕರಿಂದ ನಿರಾಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದ್ಯ ಆದಿಪುರುಷ್ ಚಿತ್ರದ ಪಾತ್ರ ವರ್ಗ ಹಾಗೂ ಡೈಲಾಗ್ಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದಗಳು ಎದ್ದಿವೆ. ಈ ನಡುವೆ ಆದಿಪುರುಷ್ ಚಿತ್ರವನ್ನು ವೀಕ್ಷಿಸಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಆದಿಪುರುಷ್ ಚಿತ್ರ ತಂಡವನ್ನು ಕುಟುಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ವೀರೇಂದ್ರ ಸೆಹ್ವಾಗ್ ತಮ್ಮ ತಮಾಷೆಯ ಟ್ವೀಟ್‌ಗಳಿಂದ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ. ಇಂತಹ ಘಟನೆಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ನಿನ್ನೆ ಅಂದರೆ, ಭಾನುವಾರದಂದು ಆದಿಪುರುಷ್ ಚಿತ್ರದ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್ ತಮಗೆ ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಕೊಂಡಿರುವುದಾಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.

ವಾಸ್ತವವಾಗಿ ತಮ್ಮ ಟ್ವೀಟ್ನಲ್ಲಿ ಪ್ರಭಾಸ್ ಅವರ ಸೂಪರ್ ಡೂಪರ್ ಹಿಟ್ ಚಿತ್ರ ಬಾಹುಬಲಿಯೊಂದಿಗೆ ಆದಿಪುರುಷ್ ಚಿತ್ರವನ್ನು ಲಿಂಕ್ ಮಾಡಿರುವ ಸೆಹ್ವಾಗ್, ಆದಿಪುರುಷ್ ಚಿತ್ರವನ್ನು ನೋಡಿದ ನಂತರ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬುದನ್ನು ನಾನು ತಿಳಿದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಜೊತೆಗೆ, ಅವರು ಸ್ಮೈಲಿ ಎಮೋಜಿಯನ್ನು ಸಹ ಹಾಕಿದ್ದಾರೆ. ಸದ್ಯ ಸೆಹ್ವಾಗ್ ಅವರು ಮಾಡಿರುವ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು ಆದಿಪುರುಷ್ ಚಿತ್ರಕ್ಕೆ ಬರುವುದಾದರೆ, ಈ ಚಿತ್ರ ಹೆಚ್ಚಾಗಿ ವಿವಾದಾತ್ಮಕ ಸಂಭಾಷಣೆಯಿಂದಾಗಿ ಈಗಾಗಲೇ ಹಲವಾರು ಸ್ಥಳಗಳಲ್ಲಿ ನಿಷೇಧಕ್ಕೊಳಗಾಗಿದೆ. 600 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಕಳೆದ ವಾರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ಬರುಬರುತ್ತಾ ಈ ಚಿತ್ರದ ಪ್ರದರ್ಶನಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಕಂಡಿದೆ.

ಸಾಹೋ ಹಾಗೂ ರಾಧೆಶ್ಯಾಮ್ ಚಿತ್ರಗಳ ಹೀನಾಯ ಸೋಲಿನ ಬಳಿಕ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಪ್ರಭಾಸ್ಗೆ ಈ ಚಿತ್ರದ ಸೋಲು ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ಸದ್ಯ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ ಅವರ ಮುಂದಿನ ಸಿನಿಮಾ ಸಲಾರ್ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.
Published On - 11:02 am, Mon, 26 June 23




