100 ಸಿಕ್ಸರ್ಗಳೊಂದಿಗೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ
Vaibhav Sooryavanshi Records: ಅಂಡರ್-19 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 15 ಫೋರ್ ಹಾಗೂ 15 ಸಿಕ್ಸ್ಗಳೊಂದಿಗೆ 175 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು 100 ಸಿಕ್ಸರ್ಗಳನ್ನು ಪೂರೈಸಿರುವುದು.
Updated on: Feb 07, 2026 | 8:09 AM

ಯೂತ್ ಒಡಿಐ ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಈ ಹಲವು ದಾಖಲೆ ನಿರ್ಮಿಸಿದ್ದ ವೈಭವ್ ಇದೀಗ ಒಂದೇ ಪಂದ್ಯದ ಮೂಲಕ ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ಸಿಕ್ಸರ್ಗಳ ಮೂಲಕವೇ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.

ಹರಾರೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚಿದ್ದರು. ಈ ವೇಳೆ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 15.

ಈ 15 ಸಿಕ್ಸರ್ಗಳೊಂದಿಗೆ ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಡರ್-19 ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಹೆಸರಿನಲ್ಲಿತ್ತು. 2022ರ ಅಂಡರ್-19 ವಿಶ್ವಕಪ್ನಲ್ಲಿ ಬ್ರೆವಿಸ್ 18 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಆದರೆ ಈ ಬಾರಿ ವೈಭವ್ ಸೂರ್ಯವಂಶಿ ಸಿಡಿಸಿರುವುದು ಬರೋಬ್ಬರಿ 30 ಸಿಕ್ಸರ್ಗಳು. ಈ ಮೂಲಕ ಅಂಡರ್-19 ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅತೀ ಕಡಿಮೆ ಇನಿಂಗ್ಸ್ಗಳ ಮೂಲಕ ಯೂತ್ ಒಡಿಐ ಕ್ರಿಕೆಟ್ನಲ್ಲಿ 100 ಸಿಕ್ಸ್ ಪೂರೈಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 25 ಇನಿಂಗ್ಸ್ಗಳ ಮೂಲಕ 100 ಸಿಕ್ಸರ್ಗಳನ್ನು ಪೂರೈಸಿದ್ದಾರೆ.

ವಿಶೇಷ ಎಂದರೆ ವೈಭವ್ ಸೂರ್ಯವಂಶಿಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ 25 ಇನಿಂಗ್ಸ್ಗಳಲ್ಲಿ 100 ಸಿಕ್ಸ್ ಬಾರಿಸಿಲ್ಲ. ಇದಕ್ಕೂ ಮುನ್ನ 25 ಇನಿಂಗ್ಸ್ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಬಾಂಗ್ಳಾದೇಶ್ನ ಝವಾದ್ ಅಬ್ರಾರ್ ಹೆಸರಿನಲ್ಲಿತ್ತು. ಝವಾದ್ 25 ಇನಿಂಗ್ಸ್ಗಳಲ್ಲಿ 55 ಸಿಕ್ಸ್ ಬಾರಿಸಿದ್ದರು. ಇದೀಗ ಇಪ್ಪತ್ತೈದು ಇನಿಂಗ್ಸ್ಗಳ ಮೂಲಕ ವೈಭವ್ ಸೂರ್ಯವಂಶಿ ಸಿಕ್ಸರ್ಗಳ ಶತಕ ಪೂರೈಸಿರುವುದು ವಿಶೇಷ.
