ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
Virat Kohli Records: ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕೆಲ್ ಬೆವೆನ್ ಅವರ ವಿಶ್ವ ದಾಖಲೆಯನ್ನು ಮುರಿದು ಕಿಂಗ್ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಅತ್ಯುತ್ತಮ ಸರಾಸರಿಯೊಂದಿಗೆ ಎಂಬುದು ವಿಶೇಷ.
Updated on: Dec 04, 2025 | 7:24 AM

ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ (Virat Kohli) ಪಾರುಪತ್ಯ ಮುಂದುವರೆದಿದೆ. ಈ ಪಾರುಪತ್ಯದೊಂದಿಗೆ ಕಿಂಗ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆದರೆ ಈ ಬಾರಿ ನಿರ್ಮಿಸಿರುವುದು ಅಂತಿಂಥ ದಾಖಲೆಯಲ್ಲ. ಬದಲಾಗಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವರ್ಲ್ಡ್ ರೆಕಾರ್ಡ್ ಎಂಬುದು ವಿಶೇಷ.

ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 102 ರನ್ ಬಾರಿಸಿದ್ದರು. ಈ 102 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 50+ ಸರಾಸರಿಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 4 ಸಾವಿರಕ್ಕೂ ಅಧಿಕ ದಿನಗಳ ಕಾಲ 50+ ಅವರೇಜ್ನಲ್ಲಿ ಕಾಣಿಸಿಕೊಂಡ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಇಂತಹದೊಂದು ದಾಖಲೆ ಆಸ್ಟ್ರೇಲಿಯಾದ ಮೈಕೆಲ್ ಬೆವೆನ್ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾ ಪರ 232 ಏಕದಿನ ಪಂದ್ಯಗಳನ್ನಾಡಿರುವ ಬೆವೆನ್ 53.17 ಸರಾಸರಿಯಲ್ಲಿ ಒಟ್ಟು 6912 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರು 3409 ದಿನಗಳ ಕಾಲ 50+ ಸರಾಸರಿ ಕಾಯ್ದುಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ವಿರಾಟ್ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕಿಂಗ್ ಕೊಹ್ಲಿ ಈವರೆಗೆ 307 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 14412 ರನ್ಗಳನ್ನು ಕಲೆಹಾಕಿದ್ದಾರೆ. ಇದರ ನಡುವೆ 4431 ದಿನಗಳ ಕಾಲ 50+ ಅವರೇಜ್ ಅನ್ನು ಕಾಯ್ದುಕೊಂಡಿದ್ದಾರೆ.

ಈ ಮೂಲಕ 54 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ದಿನಗಳ ಕಾಲ 50+ ಅವರೇಜ್ ಕಾಯ್ದುಕೊಂಡ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿ ವಿಶ್ವದ ಬೇರೆ ಯಾವುದೇ ಬ್ಯಾಟರ್ಗೂ ಏಕದಿನ ಕ್ರಿಕೆಟ್ನಲ್ಲಿ 4 ಸಾವಿರಕ್ಕೂ ಅಧಿಕ ದಿನಗಳ ಕಾಲ 50+ ಸರಾಸರಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಗೆ ಕಿಂಗ್ ಕೊಹ್ಲಿ ಕೊರೊಳೊಡ್ಡಿದ್ದಾರೆ.




