ಬರೋಬ್ಬರಿ 12 ವರ್ಷಗಳ ಬಳಿಕ ಹೀಗೆ ರನ್ ಗಳಿಸಿದ ವಿರಾಟ್ ಕೊಹ್ಲಿ
India vs South Africa: ರಾಯ್ಪುರದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತುವ ಮೂಲಕ ಸೌತ್ ಆಫ್ರಿಕಾ ತಂಡ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Dec 04, 2025 | 8:55 AM

ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 102 ರನ್ ಗಳಿಸಿದ್ದಾರೆ.

ವಿಶೇಷ ಎಂದರೆ ಈ ಬಾರಿ ಕಿಂಗ್ ಕೊಹ್ಲಿ ರನ್ ಖಾತೆ ತೆರೆದಿದ್ದು ಭರ್ಜರಿ ಸಿಕ್ಸರ್ ನೊಂದಿಗೆ. ಲುಂಗಿ ಎನ್ಗಿಡಿ ಎಸೆದ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಕೊಹ್ಲಿ ಶುಭಾರಂಭ ಮಾಡಿದ್ದರು. ಹೀಗೆ ಸಿಕ್ಸ್ ನೊಂದಿಗೆ ಕೊಹ್ಲಿ ರನ್ ಖಾತೆ ತೆರೆದಿರುವುದು ಬರೋಬ್ಬರಿ 12 ವರ್ಷಗಳ ಬಳಿಕ ಎಂಬುದು ವಿಶೇಷ.

ಇದಕ್ಕೂ ಮುನ್ನ ಹೀಗೆ ಸಿಕ್ಸ್ ಸಿಡಿಸಿ ರನ್ ಖಾತೆ ತೆರೆದಿದ್ದು 2013 ರಲ್ಲಿ. ಕಿಂಗ್ಸ್ಟನ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸಿಕ್ಸ್ ಬಾರಿಸಿ ಇನಿಂಗ್ಸ್ ಆರಂಭಿಸಿದ್ದರು. ಇದಾದ ಬಳಿಕ ಒಮ್ಮೆಯೂ ಅವರು ಸಿಕ್ಸ್ ನೊಂದಿಗೆ ರನ್ ಖಾತೆ ತೆರೆದಿರಲಿಲ್ಲ.

ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಸಿಕ್ಸರ್ ನೊಂದಿಗೆ ಶುಭಾರಂಭ ಮಾಡಿದ್ದಾರೆ. ಈ ಶುಭಾರಂಭದೊಂದಿಗೆ 93 ಎಸೆತಗಳನ್ನು ಎದುರಿಸಿದ ಕೊಹ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 102 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 50 ಓವರ್‌ಗಳಲ್ಲಿ 358 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ 110 ರನ್ಗಳ ಭರ್ಜರಿ ಶತಕ ಸಿಡಿಸಿದರು. ಈ ಸೆಂಚುರಿ ನೆರವಿನೊಂದಿಗೆ ಆಫ್ರಿಕಾ ಪಡೆ 49.2 ಓವರ್‌ಗಳಲ್ಲಿ 362 ರನ್ ಬಾರಿಸಿ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದೆ.




