GT vs RCB ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡದಿರಲು ಇದುವೇ ಕಾರಣ!
IPL 2026 RCB vs GT: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 19.2 ಓವರ್ಗಳಲ್ಲಿ 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 15.5 ಓವರ್ಗಳಲ್ಲಿ 158 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿದೆ.
Updated on: May 02, 2026 | 10:05 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ನರ್ ಕೃನಾಲ್ ಪಾಂಡ್ಯ ಆಡುವ ಬಳಗದಲ್ಲಿದ್ದರೂ (Playing XI) ಅವರಿಗೆ ಒಂದು ಓವರ್ ಕೂಡ ಬೌಲಿಂಗ್ ನೀಡದಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೃನಾಲ್ ಯಾಕೆ ಬೌಲಿಂಗ್ ಮಾಡಲಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಇದೀಗ ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ ಉತ್ತರ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಭುವನೇಶ್ವರ್ ಕುಮಾರ್, ಇದು ಸಂಪೂರ್ಣವಾಗಿ ತಂಡದ ರಣತಂತ್ರವಾಗಿತ್ತು. ಆರಂಭದಲ್ಲಿ ವೇಗಿಗಳು ಯಶಸ್ಸು ಸಾಧಿಸಿದ್ದರಿಂದ ವೇಗಿಗಳನ್ನೇ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಹೀಗಾಗಿ ಕೃನಾಲ್ಗೆ ಓವರ್ ನೀಡಲಿಲ್ಲ ಎಂದು ಭುವಿ ಹೇಳಿದ್ದಾರೆ.

ಈ ಪಂದ್ಯದ ಆರಂಭದಲ್ಲಿ ಚೆಂಡು ಚೆನ್ನಾಗಿ ಸೀಮ್ ಆಗುತ್ತಿತ್ತು. ಇದರಿಂದಾಗಿ ನಾಯಕ ಮೊದಲ ಒಂಬತ್ತು ಓವರ್ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್ವುಡ್ ಅವರಂತಹ ವೇಗಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದರು.

ಕಡಿಮೆ ಮೊತ್ತವನ್ನು ರಕ್ಷಿಸಿಕೊಳ್ಳಬೇಕಾದರೆ ವಿಕೆಟ್ ಪಡೆಯುವುದು ಮುಖ್ಯವಾಗಿತ್ತು. ಸ್ಪಿನ್ನರ್ಗಳಿಗಿಂತ ವೇಗಿಗಳು ಹೆಚ್ಚು ಪರಿಣಾಮಕಾರಿ ಎಂದು ತಂಡ ಭಾವಿಸಿತ್ತು. ಹೀಗಾಗಿ ಕೃನಾಲ್ಗೆ ಓವರ್ ನೀಡಿರಲಿಲ್ಲ. ಇದರ ಹೊರತಾಗಿ ಅವರಿಗೆ ಯಾವುದೇ ಗಾಯದ ಸಮಸ್ಯೆ ಇಲ್ಲ ಮತ್ತು ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಭುವನೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಇದಾಗ್ಯೂ ಆರ್ಸಿಬಿ ನಾಯಕ ಸ್ಪಿನ್ನರ್ ಸುಯಶ್ ಶರ್ಮಾ ಅವರಿಗೆ ಚೆಂಡು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಸುಯಶ್ ಮಿಸ್ಟ್ರಿ ಸ್ಪಿನ್ನರ್ ಆಗಿರುವುದು. ಅದೇ ಕೃನಾಲ್ ಪಾಂಡ್ಯ ರನ್ ಗತಿಯನ್ನು ನಿಯಂತ್ರಿಸಬಲ್ಲ ಬೌಲರ್. ಈ ಪಂದ್ಯದಲ್ಲಿ ರನ್ ಗತಿಯನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿ ಆರ್ಸಿಬಿ ತಂಡಕ್ಕೆ ವಿಕೆಟ್ಗಳ ಅಗತ್ಯವಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೋಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್, ರೊಮಾರಿಯೊ ಶೆಫರ್ಡ್ ಹಾಗೂ ಸುಯಶ್ ಶರ್ಮಾ ಅವರನ್ನು ಮಾತ್ರ ಬಳಸಿಕೊಂಡಿದ್ದರು. ಇದಾಗ್ಯೂ ಈ ಪಂದ್ಯದಲ್ಲಿ ಆರ್ಸಿಬಿ ತಂಡ 4 ವಿಕೆಟ್ಗಳಿಂದ ಸೋಲನುಭವಿಸಿತು.




