ಇದೇ ಕಾರಣಕ್ಕೆ ನೋಡಿ ಹಿರಿಯರು ಹೇಳೋದು ಊಟ ಮಾಡುವಾಗ ಮಾತನಾಡಬೇಡಿ ಅಂತ
ಕುಟುಂಬದವರು, ಸ್ನೇಹಿತರು ಒಟ್ಟಾಗಿ ಕುಳಿತು ಊಟ ಮಾಡುವಂತಹ ಸಂದರ್ಭದಲ್ಲಿ ಹರಟೆ ಹೊಡೆಯುತ್ತಾ ಊಟ ಮಾಡುತ್ತೇವೆ. ಹೀಗೆ ಮಾತನಾಡ್ತಾ ಊಟ ಮಾಡುವಾಗ ಮಾತನಾಡಬೇಡಿ, ಸುಮ್ಮನೆ ಕುಳಿತು ಊಟ ಮಾಡಿ ಮುಗಿಸ್ಬೇಕು ಎಂದು ಹಿರಿಯರು ಗದರಿಸುವುದನ್ನು, ಬುದ್ಧಿಮಾತು ಹೇಳೋದನ್ನು ನೀವು ಕೂಡ ಕೇಳಿರುತ್ತೀರಿ ಅಲ್ವಾ. ಅಷ್ಟಕ್ಕೂ ಊಟ ಮಾಡುವಾಗ ಮಾತನಾಡಬಾರದು ಎಂದು ಏಕೆ ಹೇಳೋದು? ಇದರ ಹಿಂದಿನ ಕಾರಣವೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Apr 17, 2025 | 5:21 PM

ನಾವು ಊಟ ಮಾಡುವಾಗ, ನಮ್ಮ ಬಾಯಿಯಲ್ಲಿರುವ ಲಾಲಾರಸವು ಆಹಾರದೊಂದಿಗೆ ಬೆರೆತು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ನಾವು ಊಟ ಮಾಡುವಾಗ ಮಾತನಾಡಿದರೆ, ಆಹಾರದ ಜೊತೆಗೆ ಗಾಳಿಯೂ ನಮ್ಮ ಹೊಟ್ಟೆಯ ಒಳಗೆ ಹೋಗುತ್ತದೆ. ಇದರಿಂದಾಗಿ ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಗೆ ತೊಂದರೆಯಾಗುತ್ತದೆ.

ಅನೇಕರಿಗೆ ಊಟ ಮಾಡುವಾಗ ಮಾತನಾಡುವ ಅಭ್ಯಾಸ ಕೂಡಾ ಇದೆ. ಹೀಗೆ ಗಬಗಬನೇ ಊಟ ಮಾಡುತ್ತಾ, ಮಾತನಾಡಿದರೆ ತಿಂದ ಆಹಾರ ಗಂಟಲಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಇದರಿಂದ ಸಾವು ಕೂಡಾ ಸಂಭವಿಸುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ನಿಧಾನಕ್ಕೆ ಊಟ ಮಾಡ್ಬೇಕು, ತಿನ್ನೋವಾಗ ಮಾತನಾಡಬಾರದು ಎಂದು ಹಿರಿಯರು ಹೇಳುವುದು.

ಅಷ್ಟೇ ಅಲ್ಲದೆ ತಿನ್ನುವಾಗ ಮಾತನಾಡಿದರೆ ಆಹಾರದ ಚಿಕ್ಕ ಚಿಕ್ಕ ಕಣಗಳು, ಎಂಜಲು ಇತರರ ಮೇಲೆ ಬೀಳುವ ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಊಟ ಮಾಡುವಾಗ ಮಾತನಾಡದಿರುವುದು ತುಂಬಾನೇ ಒಳ್ಳೆಯದು.

ಮಾತನಾಡುತ್ತಾ ಊಟ ಮಾಡಿದರೆ, ಗಮನ ಆಹಾರದ ಮೇಲೆ ಇರದೆ ಎಲ್ಲೋ ಇರುತ್ತೆ. ಇದರಿಂದಾಗಿ ಊಟದ ರುಚಿಯನ್ನು ಕೂಡ ಸವಿಯಲು ಸಾಧ್ಯವಾಗುವುದಿಲ್ಲ ಜೊತೆಗೆ ತೃಪ್ತಿದಾಯಕವಾಗಿ ಊಟ ಮಾಡಲು ಕೂಡಾ ಸಾಧ್ಯವಿಲ್ಲ. ಹಾಗಾಗಿ ಊಟ ಮಾಡುವಾಗ ಗಮನ ಯಾವಾಗಲೂ ತಿನ್ನೋ ಆಹಾರದ ಕಡೆಗೆ ಇರಬೇಕು.

ಶಾಸ್ತ್ರ, ಸಂಪ್ರದಾಯಗಳ ಪ್ರಕಾರ ನಾವು ಪ್ರತಿನಿತ್ಯ ಸೇವಿಸುವ ಆಹಾರವನ್ನು ದೇವರ ಪ್ರಸಾದ ಎಂದು ಪರಿಗಣಿಸಲಾಗುತ್ತದೆ. ಊಟ ಮಾಡುವಾಗ ಮಾತನಾಡಿದರೆ ಅದು ದೇವರಿಗೆ ಅವಮಾನ ಮಾಡಿದಂತೆ. ಹಾಗಾಗಿ ಊಟ ಮಾಡುವಾಗ ಮಾತನಾಡಬಾರದು ಎಂದು ಹಿರಿಯರು ಕಿವಿ ಮಾತು ಹೇಳುವುದು.



















