ಬರಡು ಭೂಮಿ ಬೀದರ್ನಲ್ಲಿ ನೇರಳೆ ಭರ್ಜರಿ ಫಸಲು: ಲಕ್ಷಾಂತರ ರೂ. ಆದಾಯದಲ್ಲಿ ರೈತ
ಬೀದರ್ ಜಿಲ್ಲೆಯಲ್ಲಿ, ಕಳೆದ ದಶಕದ ಬರಗಾಲ ಮತ್ತು ಅನಿರೀಕ್ಷಿತ ಮಳೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದರು. ಆದರೆ, ಈಗ ನೇರಳೆ ಬೆಳೆ ರೈತರ ಜೀವನದಲ್ಲಿ ಬದಲಾವಣೆ ತಂದಿದೆ. ಉತ್ತಮ ಬೆಲೆಗೆ ಮಾರಾಟವಾಗುತ್ತಿರುವ ಈ ಹಣ್ಣು, ರೈತರಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಸಹಾಯ ಮಾಡುತ್ತಿದೆ. ಮನ್ನಳ್ಳಿಯ ರೈತ ರಾಮರಾಜು ಅವರ ಯಶಸ್ಸು ಇದಕ್ಕೊಂದು ಉದಾಹರಣೆ. ಆದರೂ, ಸಂರಕ್ಷಣಾ ಸೌಲಭ್ಯಗಳ ಕೊರತೆಯು ಕೆಲವು ರೈತರಿಗೆ ಸವಾಲಾಗಿದೆ.
Updated on:Jun 20, 2025 | 5:45 PM

ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ಬರಗಾಲ, ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸಿದ್ದಾರೆ. ಜೋಳ, ಕಬ್ಬು, ಸೋಯಾ ಬೆಳೆದು ನಷ್ಟದಲ್ಲಿದ ರೈತರಿಗೆ ಈಗ ತೋಟಗಾರಿಗೆ ಬೆಳೆ ಕಡೆಗೆ ವಾಲಿದ್ದಾರೆ. ನೇರಳೆ ಹಣ್ಣು ಬೀದರ್ ಜಿಲ್ಲೆಯ ರೈತರ ಕೈ ಹಿಡಿದಿದೆ. ಈ ವರ್ಷ ಭರ್ಜರಿ ಫಸಲು ಬಂದಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ರೈತರು ವಿವಿಧ ಜಾತಿಯ ನೇರಳೆ ಗಿಡ ನೆಟ್ಟು ಲಕ್ಷಾಂತರ ರೂಪಾಯಿ ಆದಾಯದ ಗಳಿಸುತ್ತಿದ್ದಾರೆ.

ಬೀದರ್ನ ಮನ್ನಳ್ಳಿಯ ಪ್ರಗತಿಪರ ರೈತ ರಾಮರಾಜು ಅವರು ತಮ್ಮ 62 ಎಕರೆ ಜಮೀನಿನಲ್ಲಿ 25 ಎಕರೆ ಪ್ರದೇಶದಲ್ಲಿ ನೇರಳೆ ಗಿಡಗಳನ್ನು ನೆಟ್ಟು ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ. ಈ ನೇರಳೆ ಗಿಡಗಳನ್ನು ನೋಡಿದ ಹಣ್ಣು ವ್ಯಾಪಾರಿಯಾಗಿರುವ ಬೀದರ್ನ ಅಬ್ಬು ಶೇಠ್ ಅವರು 32 ಲಕ್ಷಕ್ಕೆ 25 ಎಕರೆಯಷ್ಟು ನೇರಳ ಹಣ್ಣುಗಳನ್ನು ಖರೀದಿ ಮಾಡಿದ್ದಾರೆ.

ರಾಮರಾಜು ಅವರ ತೋಟದಲ್ಲಿ ಬೆಳೆದ ನೇರಳೆ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ತಿನ್ನಲು ಕೂಡ ರುಚಿಯಾಗಿವೆ. ಹೀಗಾಗಿ, ರೈತ ರಾಮರಾಜು ಹೊಲದಲ್ಲಿ ಬೆಳೆದ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯಿದ್ದು ತೆಲಂಗಾಣ, ಹೈದ್ರಾಬಾದ್, ದೆಹಲಿ, ಬೆಂಗಳೂರು, ಚನ್ನೈನಲ್ಲಿ ಮಾರಾಟವಾಗುತ್ತಿವೆ.

ಬೀದರ್ ಜಿಲ್ಲೆಯಲ್ಲಿನ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ನೇರಳೆ ಬೆಳೆಗೆ ಸಹಕಾರಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಮನ್ನಳ್ಳಿಯ ರೈತ ರಾಮರಾಜು 25 ಎಕರೆ ಪ್ರದೇಶದಲ್ಲಿ 3 ಸಾವಿರ ಗಿಡಗಳನ್ನು ನೆಟ್ಟಿದ್ದು ಗಿಡ ನೆಟ್ಟು ಆರು ವರ್ಷದ ಬಳಿಕ ಫಸಲು ಬಂದಿದೆ. ಈ ವರ್ಷ ನೇರಳೆ ಹಣ್ಣು ಬಂಪರ್ ಬೆಳೆ ಬಂದಿದ್ದು ಲಾಭವು ಕೂಡಾ ಹೆಚ್ಚಾಗಿ ಸಿಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ.

ಬೀದರ್ ಜಿಲ್ಲೆ ನೇರಳೆ ಹಣ್ಣು ಬೆಳೆಯಲಿಕ್ಕೆ ಸೂಕ್ತವಾದ ವಾತಾವರಣ ಇದೆಯಾದರೂ ಹಣ್ಣುಗಳನ್ನು ಸಂರಕ್ಷಣೆ ಮಾಡುವ ಕೋಲ್ಡ್ ಸ್ಟೋರೇಜ್ಗಳು ಇಲ್ಲದಿರುವುದುರಿಂದ ಕೆಲವು ರೈತರು ನೇರಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಇನ್ನೂ ಕೆಲವು ರೈತರು ನೇರಳೆ ಹಣ್ಣು ಬೆಳೆದು, ತಾವೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈತುಂಬ ಹಣ ಪಡೆಯುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಮಾವು ಮತ್ತು ನೇರಳೆ ಬೆಳೆಯಲು ಸೂಕ್ತವಾದ ವಾತಾವರಣ ಮತ್ತು ಕೆಂಪು ಮಿಶ್ರಿತ ಮಣ್ಣು ಇದೆ. ರೈತರು ಮಾವು ಸಹ ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಖಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೇ ಪ್ರಸಕ್ತ ವರ್ಷ ಫಸಲು ತುಂಬಾ ಚೆನ್ನಾಗಿ ಬಂದಿದೆ. ದಿನಕ್ಕೆ 20 ಕ್ಷೀಟಾಂಲ್ ವರೆಗೂ ಹಣ್ಣು ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದಾರೆ.
Published On - 5:21 pm, Fri, 20 June 25



