- Kannada News Photo gallery Mahalaya Amavasya, Millions of devotees flocked to see Madappa, Chamarajanagar news in Kannada
ಮಹಾಲಯ ಅಮಾವಾಸ್ಯೆ: ಮಾದಪ್ಪನ ದರ್ಶನಕ್ಕೆ ಹರಿದು ಬಂದ ಲಕ್ಷಾಂತರ ಭಕ್ತಗಣ!
ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಮಾದಪ್ಪನ ಸನ್ನಿಧಾನಕ್ಕೆ ಲಕ್ಷಾಂತರ ಮಂದಿ ಭಕ್ತಗಣ ಆಗಮಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು. ಜೊತೆಗೆ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ ಕೂಡ ನೆರವೇರಿಸಲಾಯ್ತು. ಅಮಾವಾಸ್ಯೆಯ ವಿಶೇಷ ಸಿದ್ದತೆ ಹೇಗಿತ್ತು ಅಂತೀರಾ? ಈ ಸ್ಟೋರಿ ಓದಿ.
Updated on: Oct 02, 2024 | 9:46 PM

ಕಣ್ಣಾಡಿಸಿದ ಕಡೆಯೆಲ್ಲಾ ಭಕ್ತರ ದಂಡು, ಎಲ್ಲಿ ನೋಡಿದರೂ ಉಘೇ ಮಾದಪ್ಫ ಎಂಬ ಝೇಂಕಾರ. ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿರುವ ಜನತೆ. ಈ ಎಲ್ಲಾ ದೃಶ್ಥ ಕಣ್ಣಿಗೆ ಬಿದ್ದಿದ್ದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ.

ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಲಕ್ಷಾಂತರ ಮಂದಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಇನ್ನು ಅಮಾವಾಸ್ಯೆ ದಿನದಂದು ಮಾದಪ್ಫನ ದರ್ಶನ ಪಡೆದು ಬೇಡಿಕೊಂಡರೆ ಅಂದುಕೊಂಡ ಕೆಲಸಗಳು ನೆರವೇರಲಿದೆ ಎಂಬ ಪ್ರತೀತಿಯಿದೆ. ಈ ಹಿನ್ನಲೆ ಇಂದು ವಿಶೇಷವಾಗಿ ಮಾದಪ್ಪನ ದರ್ಶನ ಪಡೆದು ಭಕ್ತರು ಪುನೀತರಾದರು.

ಇಂದು ಮಹಾಲಯ ಅಮಾವಾಸ್ಯೆ ಹಿನ್ನಲೆ ಮಲೆ ಮಹದೇಶ್ವರ ಪ್ರಾಧಿಕಾರ ವಿಶೇಷವಾಗಿ 2 ಲಕ್ಷ ಲಾಡುಗಳನ್ನ ತಯಾರಿಸಿಲಾಗಿತ್ತು. ಜೊತೆಗೆ ಎರೆಡುವರೆ ಲಕ್ಷದಷ್ಟು ಜನರಿಗೆ ಉಚಿತ ಅನ್ನದಾಸೋಹ ಮಾಡಲಾಯ್ತು.

ಇಂದು ಮುಂಜಾನೆ ನಾಲ್ಕು ಗಂಟೆಯಿಂದಲೇ ಮಾದಪ್ಪನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯ್ತು, ಇನ್ನು ಭಕ್ತರಿಗೆ ಅನುಕೂಲವಾಗಲು ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರದಿಂದ ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನ ಸಾರಿಗೆ ಇಲಾಖೆ ಮಾಡಿತ್ತು.

ಮಹಾಲಯ ಅಮಾವಾಸ್ಯೆ ಹಿನ್ನಲೆ ಇಂದು ಮಾದಪ್ಪನ ಬಳಿ ತಮ್ಮ ಹರಕೆ ಕಟ್ಟಿಕೊಂಡರೆ, ಬೇಡಿಕೊಂಡ ಇಷ್ಟಾರ್ಥ ಸಿದ್ದಿಸುತ್ತೆ ಎಂಬ ವಾಡಿಕೆಯಿದೆ. ಇದರಿಂದಾಗಿ ಇಂದು ಭಕ್ತರ ದಂಡು ಬೆಟ್ಟಕ್ಕೆ ಆಗಮಿಸಿ ಪುನೀತರಾದರು.

ಇನ್ನು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಹಿನ್ನಲೆ ಈ ಬಾರಿ ಮಹಿಳಾ ಭಕ್ತಾಧಿಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಸಾರಿಗೆ ಬಸ್ನಲ್ಲಿಯೂ ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದರು.




