Updated on:Feb 08, 2023 | 11:33 AM
ದಕ್ಷಿಣ ಕನ್ನಡ ಜಿಲ್ಲೆ ದೈವರಾಧಾನೆಗೆ ಪ್ರಸಿದ್ಧಿ. ಇಲ್ಲಿ ದೇವರು ಮತ್ತು ದೈವಗಳನ್ನ ಒಟ್ಟೊಟ್ಟಿಗೇ ನಂಬಿಕೊಂಡು ಬಗೆ ಬಗೆ ಆಚರಣೆಗಳು ನಡೆಯುತ್ತೆ. ಅಂತಾ ಒಂದು ವಿಷೇಷ ಆಚರಣೆ ಉಜ್ಜೊಡಿಯ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲೂ ನಡೆಯಿತು.
ಇದು ಮಂಗಳೂರಿಗರು ಬಹುವಾಗಿ ನಂಬುವ ಅತ್ಯಂತ ಪ್ರತೀತಿ ಉಳ್ಳ ದೈವಸ್ಥಾನ. ಪ್ರತೀ ವರ್ಷವೂ ಅಲ್ಲಿ ವರ್ಷಾವಧಿ ಉತ್ಸವ ಭರ್ಜರಿಯಾಗಿ ಜರುಗುತ್ತೆ. ಆದ್ರೆ ಆ ದೈವಕ್ಕೆ ಎಣ್ಣೆಯೇ ನೈವೇದ್ಯ, ಮಾಂಸದೂಟವೇ ಭೋಜನ, ಎಲೆ ಅಡಿಕೆ ಬೀಡಿ, ಸಿಗರೇಟ್‌ಗಳೇ ಫಲಾಹಾರ.
ಮೈಮನ ಪುಳಕಗೊಳಿಸೋ ವಾದ್ಯಗಳ ಸದ್ದು. ಭಕ್ತಿ ಭಾವ ಹೆಚ್ಚಿಸೋ ಗಂಟೆ ಸಪ್ಪಳ. ಎತ್ತ ನೋಡಿದ್ರೂ ಭಕ್ತಿಯ ಡಿಂಡಿಮ. ಇದರ ಮಧ್ಯೆ ಕೈಯಲ್ಲಿ ತ್ರಿಶೂಲ. ಮಲ್ಲಿಗೆ ಹೂವಿನಿಂದ ಸಿಂಗಾರಗೊಂಡ ಅಲಂಕಾರ. ಧ್ಯಾನದಲ್ಲಿ ತಲ್ಲೀನನಾಗಿ ಕುಣಿದು ಕುಪ್ಪಳಿಸುತ್ತಾ ಆರ್ಭಟಿಸುತ್ತಿರೋ ಕೊರಗಜ್ಜ.
ಇಂತಹವೊಂದು ರೋಮಾಂಚನಕಾರಿ ಭಕ್ತಿ ಭಾವಕ್ಕೆ ಸಾಕ್ಷಿಯಾಗಿದ್ದು ಮಂಗಳೂರಿನ ಪಂಪ್‌ವೆಲ್ ಸಮೀಪ ಇರುವ ಉಜ್ಜೋಡಿಯ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ. ಇಲ್ಲಿ ಪ್ರತಿವರ್ಷ ತಾಯಿ ಮಹಾಕಾಳಿ ಹಾಗೂ ಕೊರಗಜ್ಜನಿಗೆ ವಿಶೇಷ ವರ್ಷಾವಧಿ ಉತ್ಸವ ನಡೆಯುತ್ತೆ.
ಇಲ್ಲಿ ಕೊರಗಜ್ಜನಿಗೆ ಮದ್ಯ ಮತ್ತು ಮಾಂಸಾಹಾರ, ಮೀನು, ಹೀಗೆ ಬಗೆ ಬಗೆ ಭಕ್ಷ ಭೋಜನವನ್ನ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಕೇಳಿಕೊಳ್ಳುತ್ತಾರಂತೆ. ಮಂಗಳೂರಿನ ಪ್ರಸಿದ್ದ ಜಾತ್ರೆ ಗರೋಡಿ ಜಾತ್ರೆ ನಡೆದು ಸರಿಯಾಗಿ ಒಂದು ತಿಂಗಳಿಗೆ ಉಜ್ಜೋಡಿ ವರ್ಷಾವಧಿ ಉತ್ಸವ ನಡೆಯುವುದು ಪ್ರತೀತಿ. ಅದರಂತೆ ಈ ಬಾರಿ ಕೂಡ ಉತ್ಸವ ಅದ್ದೂರಿಯಾಗಿ ನಡೆಯಿತು.
ಈ ಉತ್ಸವಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಕೊರಗಜ್ಜ ಹಾಗೂ ಮಹಾಕಾಳಿ ತಾಯಿಯ ದರ್ಶನ ಪಡೆದು, ಹರಕೆ ಕಟ್ಟಿ ತೆರಳುತ್ತಾರೆ. ಹರಕೆ ಫಲಿಸಿದ ಬಳಿಕ ಮತ್ತೆ ಕ್ಷೇತ್ರಕ್ಕೆ ಬಂದು ದೇವರಿಗೆ ಮಾಂಸಾಹಾರದ ಭೋಜನ, ಮದ್ಯದ ನೈವೇದ್ಯ ಅರ್ಪಿಸಿ ಹರಕೆ ತೀರಿಸುತ್ತಾರೆ.
ಕೊರಗಜ್ಜನನ್ನು ನಂಬಿದ್ರೆ ಒಳ್ಳೆದಾಗುತ್ತೆ ಮತ್ತು ಕಷ್ಟ ಕಾರ್ಪಣ್ಯಗಳು ಬಾರದಂತೆ ಕೊರಗಜ್ಜ ನೋಡಿಕೊಳ್ಳುತ್ತಾನೆ ಅನ್ನೋದು ಜನರ ನಂಬಿಕೆ. ಹೀಗಾಗಿ ಪ್ರತಿವರ್ಷವೂ ಇಲ್ಲಿಗೆ ಜನಸಾಗರವೇ ಹರಿದುಬರುತ್ತೆ.
ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ತನಿಯ. ಇಲ್ಲಿ "ಕೊರಗ" ಎಂಬುದು ಸಮುದಾಯದ ಹೆಸರು ಮತ್ತು "ಅಜ್ಜ" ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ಕೊರಗ ತನಿಯ ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರು. ಇವರ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಇವರನ್ನು "ಅಜ್ಜ" ಎಂದು ಕರೆಯುತ್ತಾರೆ.
ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಕುಟುಂಬದಲ್ಲಿ. ಕಳ್ಳನ್ನು ಸೇವಿಸುವುದು ಆ ಕುಟುಂಬದ ಕಾರ್ಯಕ್ರಮದ ಭಾಗವಾಗಿತ್ತು. ಈ ಕಾರಣದಿಂದ ತನಿಯನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ.
ಸ್ವಾಮಿಗೆ ಅರ್ಪಿಸುವ ಕೋಲಗಳು ಅಥವಾ ಮುಖ್ಯ ಪೂಜೆಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ನಿಷೇಧಿಸಲಾಗಿದೆ. ಏಕೆಂದರೆ ಚೈತನ್ಯಕ್ಕೆ ಮಾಧ್ಯಮವಾಗಿರುವ ವ್ಯಕ್ತಿಯು ಸೊಂಟದಲ್ಲಿ ತಾಳೆ ಎಲೆಗಳನ್ನು ವಿರಳವಾಗಿ ಧರಿಸಿರುತ್ತಾನೆ.
Published On - 11:33 am, Wed, 8 February 23