- Kannada News Photo gallery Shivamogga: Wedding Turns Blood Drive: Inspiring Couple's selfless act, taja suddi
ಶಿವಮೊಗ್ಗದಲ್ಲೊಂದು ವಿಶೇಷ ಮದುವೆ: ಮದ್ವೆ ಛತ್ರದಲ್ಲೇ ರಕ್ತದಾನ
ಶಿವಮೊಗ್ಗದ ಒಂದು ಮದುವೆಯಲ್ಲಿ, ವಧು-ವರ ಮತ್ತು ಅತಿಥಿಗಳು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ. ರಕ್ತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿವಾಹದಲ್ಲಿ ರಕ್ತದಾನ ಮಾಡುವುದು ವಿಶೇಷವಾಗಿತ್ತು. ಇದು ಇತರರಿಗೆ ರಕ್ತದಾನ ಮಾಡಲು ಸ್ಫೂರ್ತಿ ಆಗಿದೆ. ಸ್ವಯಂ ವಧು-ವರ ರಕ್ತದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Updated on: Feb 10, 2025 | 6:02 PM

ಅಲ್ಲಿ ಒಂದೆಡೆ ಮದುವೆ ಮನೆಯ ಸಂಭ್ರಮ ಮನೆ ಮಾಡಿತ್ತು. ಇನ್ನೊಂದೆಡೆ ಹಾಸಿಗೆಯಲ್ಲಿ ಮಲಗಿದವರಿಂದ ರಕ್ತ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಮದುವೆಗೆಂದು ಬಂದವರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಕೆಲಸವೂ ನಡೆಯುತ್ತಿತ್ತು. ಅರೇ ಇದೇನು, ಮದುವೆ ಮನೆಯಲ್ಲಿ ರಕ್ತದಾನ ಅಂತೀರಾ. ಈ ಸ್ಟೋರಿ ಒಮ್ಮೆ ಓದಿ.

ಮದುವೆ ಮನೆ ಎಂದ್ರೆ ಸಡಗರ-ಸಂಭ್ರಮ ಸಾಮಾನ್ಯ ಇದ್ದೇ ಇರುತ್ತೆ. ವಧು-ವರರನ್ನು ಆಶೀರ್ವದಿಸಲು ಬರುವ ಬಂಧು, ಬಾಂಧವರು ಒಂದೆಡೆ ಕುಳಿತು ಕಷ್ಟ-ಸುಖದ ಜೊತೆಗೆ ಹಲವು ವಿಷಯಗಳ ಕುರಿತು ಹರಟೆ, ಚರ್ಚೆ ನಡೆಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಮದುವೆ ಮನೆ ಮಾತ್ರ ಸ್ವಲ್ಪ ಭಿನ್ನವಾಗಿತ್ತು. ವಧು-ವರರನ್ನು ಆಶೀರ್ವದಿಸಲು ಬಂದವರು ಊಟ ಮಾಡಿ ಹೋಗದೆ ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಶಿವಮೊಗ್ಗದ ಗುಡ್ಡೇಕಲ್ ಬಾಲಸುಬ್ರಮಣ್ಯ ಕಲ್ಯಾಣ ಮಂದಿರದಲ್ಲಿ ಇಂದು ನಡೆದ ಯಶ್ವಂತ್ ಮತ್ತು ಗೀತಾರ ಮದುವೆ ಕೇವಲ ವಿವಾಹ ಬಂಧನಕ್ಕೆ ಸೀಮಿತವಾಗದೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದ ನಾನು ರಕ್ತದಾನದ ಮೂಲಕ ಮದುವೆ ಆಗಿದ್ದೇನೆ.

ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸಬಹುದು ಎಂಬುದೇ ರಕ್ತದಾನ ಶಿಬಿರಕ್ಕೆ ಪ್ರೇರಣೆ ಎಂದು ಯಶ್ವಂತ್ ಹೇಳಿದ್ದಾರೆ. ಜೊತೆಗೆ ಮದುವೆ ಮಂಟಪದಲ್ಲಿ ಸ್ವತಃ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

ಯಶ್ವಂತ್ ಹಾಗೂ ಗೀತಾ ತಮ್ಮ ಮದುವೆ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ರಕ್ತದಾನದ ಮಹತ್ವ ಅರಿತುಕೊಳ್ಳುವುದರ ಜೊತೆಗೆ ಅದರ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆವಾಗಿದೆ.
























