- Kannada News Photo gallery Shocking incident In Chitradruga: Chikkajajuru police station PSI punishment to staff stand in sunlight heat
ಕರ್ನಾಟಕದಲ್ಲೊಂದು ಅಪರೂಪದ ಘಟನೆ: ಸಿಬ್ಬಂದಿಗೆ ಬಂದೂಕು ಹೊತ್ತು ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ
ಶಾಲೆಗೆ ತಡವಾಗಿ ಹೋಗಿದ್ದಕ್ಕೆ ಅಥವಾ ಹೋಂ ವರ್ಕ್ ಮಾಡಿಕೊಂಡು ಹೋಗದಿದ್ದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳನ್ನು ಬಿಸಿನಲ್ಲಿ ನಿಲ್ಲಿಸಿದ ಉದಾಹರಣೆಗಳಿವೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಪಿಎಸ್ಐ, ತಮ್ಮ ಠಾಣೆಯ ಸಿಬ್ಬಂದಿಗೆ ಬಂದೂಕು ಹೊತ್ತು ಬಿಸಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪಿಎಸ್ಐ ನಡೆ ಬಗ್ಗೆ ಪರ ವಿರೋಧದ ಚರ್ಚೆಗಳು ಶುರುವಾಗಿವೆ.
Updated on: Apr 07, 2026 | 5:54 PM

ಕರ್ತವ್ಯ ನಿರ್ಲಕ್ಷ್ಯ ಕಾರಣಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ರಣಬಿಸಿಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ.

ಅಚ್ಚರಿ ಅನ್ನಿಸಿದರೂ ಸತ್ಯ. PSI ನೇತ್ರಾವತಿ ಅವರು ತಮ್ಮ ಚಿಕ್ಕಜಾಜೂರು ಠಾಣೆ ಪೊಲೀಸ್ ಸಿಬ್ಬಂದಿಗೆ ನಿನ್ನೆ (ಏಪ್ರಿಲ್ 06) ಮಧ್ಯಾಹ್ನ 2ರಿಂದ 5ರವರೆಗೆ ರಣಬಿಸಿನಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ವಿಧಿಸಿದ್ದಾರೆ.

ಅರ್ಧದಿನ ರಣಬಿಸಿಲಿನಲ್ಲಿ ನಿಲ್ಲಿಸಿದ್ದಕ್ಕೆ ಕೆಲ ಪೊಲೀಸ್ ಸಿಬ್ಬಂದಿ ಆರೋಗ್ಯದಲ್ಲಿ ಏರುಪೇರಾಗಿರುವುದು ಕಂಡುಬಂದಿದ್ದು, ಕೂಡಲೇ ಹೊಳಲ್ಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪಿಎಸ್ಐ ನೇತ್ರಾವತಿ ನಡೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆದಿದ್ದು, ಕೆಲ ಸಿಬ್ಬಂದಿ, ಪಿಎಸ್ಐ ನೇತ್ರಾವಳಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ಅವರು ಡಿವೈಎಸ್ಪಿ ಗಿರೀಶ್ ಗೌಡ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷಿ ವಿಧಿಸಿರುವುದು ನಿನ್ನೆ (ಏಪ್ರಿಲ್ 06). ಆದ್ರೆ, ಇಂದು ಫೋಟೋಗಳು ವೈರಲ್ ಆಗುತ್ತಿದ್ದು, ಈ ಸಂಬಂಧ ಪರ ವಿರೋಧಕ್ಕೆ ಕಾರಣವಾಗಿದೆ.



