- Kannada News Photo gallery Sirsi Farmers Turn Areca Waste into Art: Crafting Success from Farm Byproducts
ಅಡಿಕೆ ತೋಟದಲ್ಲಿನ ತ್ಯಾಜ್ಯಕ್ಕೂ ಬಂಗಾರದ ಬೆಲೆ ಇದೆ ಎಂದು ತೋರಿಸಿಕೊಟ್ಟ ಶಿರಸಿಯ ರೈತ ದಂಪತಿ
ಅಡಿಕೆ ಬೆಳೆಗೆ ಬೆಲೆ ಸಿಗದೆ ಕಂಗಾಲಾಗುವವರ ಮಧ್ಯೆ ಶಿರಸಿಯ ರೈತ ದಂಪತಿ ತೋಟದ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಯಶಸ್ಸು ಕಂಡಿದ್ದಾರೆ. ಅಡಿಕೆ ತೋಟದ ತ್ಯಾಜ್ಯವನ್ನು ಬಳಸಿಕೊಂಡು ಸುಂದರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ, ಕೇವಲ ನಾಲ್ಕು ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಳಿಸಿದ್ದಾರೆ.
Updated on: Oct 30, 2025 | 5:43 PM

ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ, ಸಾಲದ ಸೂಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುವ ಹತ್ತಾರು ನಿದರ್ಶನಗಳನ್ನ ನೋಡಿದ್ದೇವೆ. ಆದರೆ ಇಲ್ಲೊಂದು ರೈತ ದಂಪತಿ, ತೋಟದಲ್ಲಿನ ತ್ಯಾಜ್ಯಕ್ಕೂ ಬಂಗಾರದ ಬೆಲೆ ಇದೆ ಎಂದು ಸಾಬೀತು ಮಾಡಿದ್ದಾರೆ.

ಇಂದು ರೈತರು ಬಂಗಾರದಂತಹ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಆದರೆ ರೈತನ ತೋಟದಲ್ಲಿರುವ ಪ್ರತಿಯೊಂದು ವಸ್ತುವಿಗೂ ಬೆಲೆ ಇದೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದ ಜಯಶ್ರೀ-ವಿನಾಯಕ ದಂಪತಿ ತೋರಿಸಿಕೊಟ್ಟಿದ್ದಾರೆ.

ದಂಪತಿ ಅಡಿಕೆ ತೋಟದಲ್ಲಿನ ತ್ಯಾಜ್ಯ ವಸ್ತುಗಳನ್ನ ಬಳಸಿ ಅಲಂಕಾರಿಕ ವಸ್ತುಗಳನ್ನ ತಯಾರಿಸುತ್ತಿದ್ದಾರೆ. ಉದ್ಯಮ ಆರಂಭ ಮಾಡಿದ ಕೇವಲ ನಾಲ್ಕು ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ.

ತಮ್ಮ ನಾಲ್ಕು ಏಕರೆ ಅಡಿಕೆ ತೋಟದಲ್ಲಿ ಹೇರಳವಾಗಿದ್ದ ತ್ಯಾಜ್ಯ ವಸ್ತುಗಳನ್ನ, ವಿಲೆವಾರಿ ಮಾಡುವುದು ಇವರಿಗೆ ಭಾರಿ ದೊಡ್ಡ ಸವಾಲಾಗಿತ್ತು. ಸದ್ಯ ಇದನ್ನ ಏನು ಮಾಡಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದೆ ಅಡಿಕೆ ತ್ಯಾಜ್ಯದಿಂದ ಆಕರ್ಷಕ ವಸ್ತುಗಳನ್ನ ತಯಾರಿಸಿ ಹಣ ಗಳಿಸುತ್ತಿದ್ದಾರೆ.

ಅಡಿಕೆ ತೊಟದಲ್ಲಿನ ಪ್ರತಿಯೊಂದು ತ್ಯಾಜ್ಯವನ್ನ ಪೌಡರ ಮಾಡಿ, ಅದನ್ನ ಕೆಮಿಕಲ್ ಜೊತೆ ಮಿಶ್ರಣ ಮಾಡಿ ಅಚ್ಚದಲ್ಲಿ ಹಾಕಲಾಗುತ್ತದೆ. ಕೇವಲ 20 ನಿಮಿಷದಲ್ಲಿ ಸುಂದರವಾದ ಕಲಾಕೃತಿ ಸಿದ್ಧ ಆಗುತ್ತದೆ. ಅದಕ್ಕೆ ಸ್ವಲ್ಪ ಬಣ್ಣ ಹಾಕಿದರೆ ಗೋಡೆ ಹಾಗೂ ಅಲಂಕಾರಿಕ ಸ್ಥಳಗಳಲ್ಲಿ ಇಡಲು ಆಕರ್ಷಕ ಕಲಾಕೃತಿ ತಯಾರಾಗುತ್ತಿದೆ. ಸದ್ಯ ಶಿವಮೊಗ್ಗ ಮತ್ತು ಶಿರಸಿ ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಕೃಷಿಕ ವಿನಾಯಕ ಹೆಗಡೆ.

ನಿಸರ್ಗದಲ್ಲಿ ಬೆಳೆದ ಪ್ರತಿಯೊಂದಕ್ಕೂ ಸುಂದರವಾದ ರೂಪ ಕೊಟ್ಟರೆ ಅದಕ್ಕೆ ಬೆಲೆ ಇದೆ. ರೈತ ಬೆಳೆದ ಬೆಳೆಗೆ ಅಷ್ಟೇ ಅಲ್ಲ. ಆತನ ತೋಟದಲ್ಲಿನ ಕಳೆಗೂ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತೆ ಎಂಬುವುದಕ್ಕೆ ಇದು ಸಾಕ್ಷಿ ಆಗಿದೆ.



