- Kannada News Photo gallery Special Pooje in Karnataka Artists Association here is the details Entertainment News In Kannada
ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ; ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಾಹಿತಿ - ಖ್ಯಾತ ಜ್ಯೋತಿಷಿ, ಪ್ರಕಾಶ್ ಅಮ್ಮಣ್ಣಾಯ, ಕಾಪು: ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಪೂಜೆ ನಡೆಯುತ್ತಿದೆ. ಈ ಪೂಜೆಯ ಬಗ್ಗೆ ಅವರು ಟಿವಿ9ಕನ್ನಡ ವೆಬ್ ಸೈಟ್ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ. ‘ಚಲನಚಿತ್ರ ರಂಗವು ಚೈತನ್ಯವನ್ನು ಕಳೆದುಕೊಂಡಂತೆ ಆಗಿದೆ. ಅದಕ್ಕೆ ಮತ್ತೆ ಜೀವ ಚೈತನ್ಯ ಬರಬೇಕು. ಹಾಗೆ ಬರಬೇಕು ಅಂತಾದರೆ ಆ ಉದ್ಯಮಕ್ಕೆ ಅಧಿ ದೇವತೆಯಾದಂಥ ನಾಗದೇವರ ಆರಾಧನೆ ಆಗಬೇಕು’ ಎಂಬುದು ಅವರ ಮಾತು.
Updated on:Aug 14, 2024 | 9:00 AM

ಕರ್ನಾಟಕ ಕಲಾವಿದರ ಸಂಘದಿಂದ ಹೋಮ ಹಾಗೂ ದೇವತಾರಾಧನೆಯನ್ನು ಮಾಡಲಾಗುತ್ತಿದೆ. ಆಗಸ್ಟ್ ಹದಿನಾಲ್ಕನೇ ತಾರೀಕಿನ ಬುಧವಾರ ಕಾರ್ಯಕ್ರಮಗಳು ಇದ್ದು, ಅದರ ಹಿಂದಿನ ದಿನ, ಅಂದರೆ ಆಗಸ್ಟ್ ಹದಿಮೂರನೇ ತಾರೀಕು ಪೂಜಾ ಸ್ಥಳಕ್ಕೆ ಭೇಟಿ ನೀಡಿದ ಟಿವಿ9ಕನ್ನಡ ವೆಬ್ ಸೈಟ್ ಪ್ರತಿನಿಧಿಗೆ ಮಾತಿಗೆ ಸಿಕ್ಕವರು ಇಡೀ ಕಾರ್ಯಕ್ರಮದ ಉಸ್ತುವಾರಿ, ಅಂದರೆ ಪೂಜೆಯನ್ನು ಮಾಡಿಸಿಕೊಡುವಂಥ ಜವಾಬ್ದಾರಿ ಹೊತ್ತಿರುವಂಥ ಜ್ಯೋತಿಷಿ- ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ. ಅವರ ಬಳಿ ಕೇಳುವುದಕ್ಕೆ ಪ್ರಶ್ನೆಗಳು ಇದ್ದರೂ ಅದೇನನ್ನೂ ಕೇಳದೆ ಅವರಿಗೇ ಮಾತನಾಡುವಂತೆ ಕೇಳಿಕೊಳ್ಳಲಾಯಿತು. ಅವರದೇ ಮಾತನ್ನು ಇಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗಿದೆ. ಮಾತು- ವಿವರಣೆ ಅವರದೇ.

ಚಲನಚಿತ್ರ ರಂಗವು ಚೈತನ್ಯವನ್ನು ಕಳೆದುಕೊಂಡಂತೆ ಆಗಿದೆ. ಅದಕ್ಕೆ ಮತ್ತೆ ಜೀವ ಚೈತನ್ಯ ಬರಬೇಕು. ಹಾಗೆ ಬರಬೇಕು ಅಂತಾದರೆ ಆ ಉದ್ಯಮಕ್ಕೆ ಅಧಿ ದೇವತೆಯಾದಂಥ ನಾಗದೇವರ ಆರಾಧನೆ ಆಗಬೇಕು. ಇದನ್ನೇ ನಾನು ಲೇಖನ ರೂಪದಲ್ಲಿ ಬರೆದಿದ್ದೆ. ಅದನ್ನು ಗಮನಿಸಿದಂತಹ ಚಿತ್ರರಂಗದ ಹಿರಿಯರು ನನ್ನ ಬಳಿ ಬಂದು, ಪೂಜಾ- ಕೈಂಕರ್ಯದ ಮಾಹಿತಿ ಪಡೆದರು. ಅದರಂತೆಯೇ ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಹಾಗೂ ನಾಗದರ್ಶನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಹಿಂದಿನ ದಿನವೇ ಮಾಡಲಾಗುತ್ತಿದೆ. ಇಲ್ಲಿಗೆ ಬಂದಿರುವಂಥ ಪುರೋಹಿತರು ಉಡುಪಿ ಜಿಲ್ಲೆಯವರು. ಘನವಾದ ಅಧ್ಯಯನ ಆಗಿರುವಂಥವರು ಮತ್ತು ಅಧ್ಯಯನಶೀಲರು ಹೌದು.

ತ್ರಯಾಕ್ಷರಿ ಸಂಜೀವಿನಿ ಮೃತ್ಯುಂಜಯ ಹೋಮವನ್ನು ಮಾಡಲಾಗುತ್ತದೆ. ಇದು ಚಿತ್ರರಂಗಕ್ಕೆ ಚೈತನ್ಯವನ್ನು ನೀಡುತ್ತದೆ. ಚಿತ್ರರಂಗ ಎಂಬ ಉದ್ಯಮಕ್ಕೆ ನಾಗದೇವರು ಅಧಿಪತಿ. ಅಂಥ ನಾಗದೇವರನ್ನು ಆರಾಧನೆ ಮಾಡುವುದಕ್ಕಾಗಿ ಆಶ್ಲೇಷಾ ಬಲಿ ಹಾಗೂ ನಾಗದರ್ಶನ ಮಾಡಲಾಗುತ್ತದೆ. ಇದಕ್ಕಾಗಿಯೇ ನಾಗಪಾತ್ರಿಗಳು ಭಾಗವಹಿಸುತ್ತಾರೆ. ಅವರ ಜೊತೆಗೆ ಮೂರ್ನಾಲ್ಕು ಜನ ಸಹಾಯಕರು ಸಹ ಬರುತ್ತಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳಬೇಕು ಅಂತಾದರೆ, ಇಲ್ಲಿರುವ ಪ್ರತಿಭೆಗಳು, ಪಡುವ ಶ್ರಮ, ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯನ್ನು ತುಲನೆ ಮಾಡಿದರೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ವಾಣಿಜ್ಯ ದೃಷ್ಟಿಯಿಂದ ತುಂಬ ಮುಖ್ಯವಾದ ನಾಯಕ ನಟರುಗಳಿಗೆ ಸಹ ನಾನಾ ರೀತಿಯ ತೊಂದರೆ, ಸಮಸ್ಯೆಗಳು ಎದುರಾಗುತ್ತಾ ಇವೆ. ಇದರ ನಿವಾರಣೆಗೆ ಅಂತಲೇ ನಾಗಾರಾಧನೆ ಆಗಬೇಕು ಅಂತ ಹೇಳಿದ್ದೆ.

ಈಗ ಅದನ್ನೇ ಮಾಡುತ್ತಿರುವುದು. ಇದು ಇಡೀ ಚಿತ್ರರಂಗದ ಏಳ್ಗೆಗಾಗಿ ಮಾಡುತ್ತಿರುವಂಥ ಪೂಜಾ ಕೈಂಕರ್ಯ. ಚಿತ್ರರಂಗ ಅಂದಾಕ್ಷಣ ಅದರಲ್ಲಿ ಬರುವಂಥ ಪ್ರತಿಯೊಬ್ಬರಿಗೂ ಒಳಿತಾಗಬೇಕು. ನಟರು- ನಟಿಯರು, ನಿರ್ದೇಶಕರು, ನಿರ್ಮಾಪಕರು ಅಂತ ಮಾತ್ರವಲ್ಲದೇ ಪ್ರದರ್ಶಕರು, ವಿತರಕರು ಹಾಗೂ ಅದೇ ವೇಳೆ ಸಿನಿಮಾ ನೋಡಲು ಬರುವಂಥ ಪ್ರೇಕ್ಷಕರಿಗೂ ಭರಪೂರ ಮನರಂಜನೆ ಸಿಗುವಂಥ ಚಿತ್ರಗಳ ನಿರ್ಮಾಣ ಆಗಬೇಕು ಎಂದು ಬೇಡಿಕೊಂಡು ಆ ನಾಗನ ಆರಾಧನೆಯನ್ನು ಮಾಡಲಾಗುತ್ತಿದೆ. ಲೈಟ್ ಬಾಯ್ ನಿಂದ ಮೊದಲುಗೊಂಡು ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವವರ ತನಕ. ಸೌಂಡ್ ಎಂಜಿನಿಯರ್ ನಿಂದ ಮೊದಲುಗೊಂಡು ಸಂಗೀತದ ನಿರ್ದೇಶಕರ ತನಕ ಈ ಚಲನಚಿತ್ರ ಪರಿಶ್ರಮದಲ್ಲಿ ಇರುವ ಎಲ್ಲರಿಗೂ ಒಳಿತಾಗಲಿ ಎಂಬ ಉದಾತ್ತ ಧ್ಯೇಯದಿಂದ ಈ ಪೂಜಾ ಕೈಂಕರ್ಯವನ್ನು ಮಾಡಲಾಗುತ್ತಿದೆ.

ಈ ಪೂಜೆಯನ್ನು ನಟ ದರ್ಶನ್ ಅವರಿಗಾಗಿಯೇ ಮಾಡಲಾಗುತ್ತಿದೆ ಎಂಬ ಚರ್ಚೆ ವಿಪರೀತ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಚಲನಚಿತ್ರ ಅಂದಾಕ್ಷಣ ಅದನ್ನು ನಂಬಿ ಬದುಕುತ್ತಿರುವ ಸಾವಿರಾರು ಜನರು ಇದ್ದಾರೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅದರಿಂದ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಜೂನಿಯರ್ ಆರ್ಟಿಸ್ಟ್ ಗಳೋ, ಡ್ಯೂಪ್ ಕಲಾವಿದರೋ, ಕಂಠದಾನ ಮಾಡುವವರಿಂದ ನಾಯಕ ನಟ- ನಟಿಯರು, ನಿರ್ಮಾಪಕರು, ಸಾಹಸ ಕಲಾವಿದರು ಹೀಗೆ ಎಷ್ಟೋ ವಿಭಾಗದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಈ ರಂಗದಿಂದ ಹಣ ಬರುತ್ತಿದೆ, ಬದುಕು ಸಾಗುತ್ತಿದೆ. ಗೌರವ-ಮನ್ನಣೆ ದೊರೆಯುತ್ತಿದೆ. ಅಂಥ ಎಲ್ಲರಿಗೂ ಒಳ್ಳೆಯದೇ ಅಗಲಿ. ದರ್ಶನ್ ಕೂಡ ಇದೇ ಚಿತ್ರರಂಗದ ಕಲಾವಿದರು. ಅವರಿಗೂ ಒಳ್ಳೆಯದಾಗಲಿ. ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಿಲ್ಲ.

ಕರ್ನಾಟಕದಲ್ಲಿ ಇರುವ ನಾವು ಸುಬ್ರಹ್ಮಣ್ಯನ ಆರಾಧನೆ ಅವಶ್ಯವಾಗಿ ಮಾಡಲೇಬೇಕು. ಅದನ್ನೇ ಈಗ ಚಿತ್ರರಂಗಕ್ಕಾಗಿ ಮಾಡಲಾಗುತ್ತಿದೆ. ಕೆಲವರಿಗೆ ಈ ಕಾರ್ಯಕ್ರಮ ಮಾಡುತ್ತಿರುವ ಸ್ಥಳದ ಬಗ್ಗೆ ಆಕ್ಷೇಪ ಇರಬಹುದು. ಆದರೆ ನಾವು ಪೂಜೆಯ ಆರಂಭದಲ್ಲಿಯೇ ಸಂಕಲ್ಪ ಮಾಡುತ್ತೇವೆ; ಈ ಪೂಜೆ ಸಂಪೂರ್ಣ ಆಗುವ ತನಕ ದೇವರ ಸಾನ್ನಿಧ್ಯ ಇರಲಿ ಎಂದು ಪ್ರಾರ್ಥಿಸುತ್ತೇವೆ. ಉದ್ವಾಸನೆಯನ್ನು ಮಾಡುವ ತನಕ ಈ ಸ್ಥಳದಲ್ಲಿ ಆ ದೇವರ ಸಾನ್ನಿಧ್ಯ ಖಂಡಿತಾ ಇರುತ್ತದೆ. ಇನ್ನು ಕನ್ನಡ ಚಲನಚಿತ್ರರಂಗಕ್ಕೆ ಎದುರಾದಂಥ ಸವಾಲು, ಸಮಸ್ಯೆಗಳು ಶೀಘ್ರದಲ್ಲಿಯೇ ಬಗೆಹರಿಯುತ್ತದೆ ಎಂಬುದು ನಮ್ಮ ನಂಬಿಕೆ. - ಹೀಗೆ ಹೇಳಿ ತಮ್ಮ ಮಾತನ್ನು ಅವರು ನಿಲ್ಲಿಸಿದರು.
Published On - 6:37 am, Wed, 14 August 24




