India strikes Pakistan: ಆಪರೇಷನ್ ಸಿಂಧೂರ್ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ನವದೆಹಲಿ, ಮೇ 7: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಒಟ್ಟು 9 ಪ್ರದೇಶಗಳಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭಾರತದ ಮೇಲಿನ ಅನೇಕ ದಾಳಿಗಳ ಹಿಂದೆ ಇದ್ದ ಈ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. 4 ಜೈಶ್-ಎ-ಮೊಹಮ್ಮದ್, 3 ಲಷ್ಕರ್-ಎ-ತೈಬಾ ಮತ್ತು 2 ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
Updated on: May 07, 2025 | 9:24 AM

ಭಾರತ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಅಡಗುತಾಣಗಳಲ್ಲಿ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯೂ ಸೇರಿದೆ. ಇದಲ್ಲದೆ, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಶಿಬಿರಗಳನ್ನು ಸಹ ನಾಶಪಡಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮತ್ತು ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿ ಇರುವ ಬಹವಾಲ್‌ಪುರದಲ್ಲಿ ಅತಿದೊಡ್ಡ ದಾಳಿ ನಡೆಸಲಾಯಿತು.

ಭಾರತದ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನವು ಆಕ್ರೋಶಗೊಂಡಿದ್ದು ದುಷ್ಟ ಚಟುವಟಿಕೆಗಳನ್ನು ಮುಂದುವರೆಸಿದೆ. ಪಾಕಿಸ್ತಾನ ಸೇನೆಯು ಸಾಮಾನ್ಯ ಭಾರತೀಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಾದ್ಯಂತ ಗುಂಡಿನ ದಾಳಿ ನಡೆಸಿದ್ದು, 3 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸಾಂಬಾ ಸೆಕ್ಟರ್ ಗಡಿಯಿಂದ 30 ಕಿ.ಮೀ ದೂರದಲ್ಲಿರುವ ಮುರಿಡ್ಕೆ ಎಂಬ ಸ್ಥಳದಲ್ಲಿ ಲಷ್ಕರ್-ಎ-ತಯ್ಬಾ ಶಿಬಿರವಿತ್ತು . ಅದೂ ಕೂಡ ದಾಳಿಯಲ್ಲಿ ಧ್ವಂಸಗೊಂಡಿದೆ. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಭಯೋತ್ಪಾದಕರು ಇಲ್ಲಿಂದಲೇ ಬಂದವರು ಎನ್ನಲಾಗಿದೆ.

ಮೂರನೇ ದಾಳಿ ಗುಲ್ಪುರದಲ್ಲಿ ನಡೆಸಲಾಯಿತು. ಇದು ಪೂಂಚ್-ರಾಜೌರಿಯ ಎಲ್‌ಒಸಿಯ ಒಳಗೆ ಸುಮಾರು 35 ಕಿ.ಮೀ ದೂರದಲ್ಲಿದೆ. 2023 ರ ಏಪ್ರಿಲ್ 20 ರಂದು ಪೂಂಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು 2024 ರ ಜೂನ್ನಲ್ಲಿ ಪ್ರಯಾಣಿಕರಿಂದ ತುಂಬಿದ್ದ ಬಸ್ ಮೇಲೆ ನಡೆದ ದಾಳಿಗೆ ಈ ಪ್ರದೇಶಗಳಿಂದಲೇ ಸಂಚು ಹೂಡಲಾಗಿತ್ತು ಮತ್ತು ಉಗ್ರರನ್ನು ಕಳುಹಿಸಲಾಗಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ ಬಳಿ ಭಾರತೀಯ ಸೇನೆಯ ಕ್ಷಿಪಣಿ ದಾಳಿಯಿಂದ ಹಾನಿಗೊಳಗಾದ ಕಟ್ಟಡವನ್ನು ಪಾಕಿಸ್ತಾನ ಸೇನಾ ಸೈನಿಕರು ಪರಿಶೀಲಿಸಿದರು. ಪಿಒಕೆ ವ್ಯಾಪ್ತಿಯ ಸುಮಾರು 5 ಉಗ್ರರ ತಾಣಗಳ ಮೇಲೆ ಭಾರತ ದಾಳಿ ನಡೆಸಿದೆ.




