Updated on:Jul 09, 2023 | 1:34 PM
ಸುತ್ತಲೂ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ಸಾಲುಗಳು, ಬೆಟ್ಟಕ್ಕೆ ಮುತ್ತಿಕ್ಕುತ್ತಿರುವ ಬೆಳ್ಳಿ ಮೋಡಗಳು. ಈ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಅಷ್ಟಕ್ಕೂ ಈ ಅದ್ಭುತ ಮನಮೋಹಕ ದೃಶ್ಯ ಸೃಷ್ಟಿಯಾಗಿರೋದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ.
ಕಳೆದೆ ಎರಡ್ಮೂರು ದಿನದಿಂದ ಜಿಲ್ಲೆಯಲ್ಲಿ ತುಂತುರು ಮಳೆ ಬೀಳುತ್ತಿದೆ. ಇದೀಗ ತುಂತುರು ಮಳೆ ಜೊತೆಗೆ ಮಂಜು ಮುಸುಕಿಕೊಂಡು ಹೊಸ ಲೋಕವೆ ಸೃಷ್ಟಿಯಾಗಿದೆ. ವರ್ಷದ ಬಹುತೇಕ ದಿನಗಳು ಹಸಿರು ರತ್ನಗಳನ್ನ ಹೊದ್ದು ಮಲಗಿರುವ ಬಿಳಿಗಿರಿರಂಗನ ಬೆಟ್ಟ, ಪೂರ್ವ ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳ.
ಈ ಬೆಟ್ಟದ ಸಾಲುಗಳಲ್ಲಿ ಮಂಜು ತುಂಬಿಕೊಂಡಾಗ ಮಂಜಿನಲ್ಲಿ ಹಸಿರು ಬೆಟ್ಟಗಳ ಸಾಲುಗಳನ್ನ ನೋಡೋಕೆ ಇನ್ನು ಅದ್ಭುತ. ಬೆಳ್ಳಿಮೋಡಗಳು ಬೆಟ್ಟದಲ್ಲಿ ಚಲಿಸುತ್ತಿದ್ರೆ, ಮತ್ತೆ ಕೆಲವೆಡೆ ಹಾಲಿನ ನೊರೆಯಂತೆ ಬೆಟ್ಟವನ್ನೆ ಮೋಡಗಳು ಆವರಿಸಿಕೊಂಡಿರುವುದು ಪ್ರವಾಸಿಗರಿಗೆ ಹಬ್ಬದಂತಿದೆ.
ಇನ್ನು ಇಡೀ ಕಾಡು ಮಳೆಯಿಂದಾಗಿ ಹಚ್ಚ ಹಸಿರಿನಿಂದನಿಂದ ಕಂಗೊಳಿಸುತ್ತಿದೆ. ಹುಲಿ ರಕ್ಷಿತಾರಣ್ಯದಲ್ಲಿ ಇರುವುದರಿಂದ ಜಿಂಕೆ, ಕಾಡೆಮ್ಮ, ಆನೆಯಂತಹ ಪ್ರಾಣಿಗಳು ರಸ್ತೆಯಲ್ಲೂ ಕಂಡು ಪುಳಕಿತರಾಗುತ್ತಿದ್ದಾರೆ.
ಇದು ಹುಲಿ ರಕ್ಷಿತಾರಣ್ಯವಾಗಿರೋದ್ರಿಂದ ವಾಹನಗಳನ್ನ ರಸ್ತೆಯಲ್ಲಿ ನಿಲ್ಲಿಸುವಂತಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವಾಗ ಕಣ್ತುಂಬಿಕೊಳ್ಳಬೇಕಿದೆ.
ಸದ್ಯ ಮಳೆಯ ನಡುವೆಯುವ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಮಂಜಿಗೆ ಪ್ರವಾಸಿಗರು ಮನಸೋತಿದ್ದಾರೆ.
ಒಟ್ಟಾರೆ, ಮಳೆಯಿಂದಾದಗಿ ಬೆಟ್ಟದ ಪ್ರಕೃತಿ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಈ ಪ್ರಕೃತಿ ಸೊಬಗು ಪ್ರವಾಸಿಗರನ್ನ ಸೂಜಿ ಗಲ್ಲಿನಂತೆ ಸೆಳೆಯುತ್ತಿದೆ.
ಕಾಲೇಜು ಕನ್ಯೆಯರಿಂದ ಹಿಡಿದು ಯುವಕ, ಯುವತಿಯರು ಕೂಡ ಆಗಮಿಸಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಇಲ್ಲಿಯ ವಾತಾವರಣ ಮತ್ತೊಮ್ಮೆ ಬರುವಂತೆ ಕೈ ಬೀಸಿ ಕರೆಯುತ್ತಿದೆ.
Published On - 1:34 pm, Sun, 9 July 23