ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ವಿಳಂಬವಾಗಲು ಕಾರಣವೇನು?; ಇಲ್ಲಿದೆ ಮಾಹಿತಿ
Afghanistan Government | ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳು ಶುಕ್ರವಾರವೇ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರೂ, ಇನ್ನೂ ಹೊಸ ಸರ್ಕಾರ ರಚನೆಯಾಗಿಲ್ಲ. ತಾಲಿಬಾನ್ ಸಂಘಟನೆಯಲ್ಲಿ ಅಧಿಕಾರ ಹಂಚಿಕೆಯಲ್ಲಿ ಮೇಲುಗೈ ಸಾಧಿಸಲು ವಿವಿಧ ಬಣಗಳ ನಡುವೆ ಕಚ್ಚಾಟ, ಆಂತರಿಕ ಸಂಘರ್ಷ ನಡೆಯುತ್ತಿದೆ.
ಕಾಬೂಲ್: ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳು ನಿನ್ನೆಯೇ ಹೊಸ ಸರ್ಕಾರ ರಚಿಸಬೇಕಾಗಿತ್ತು. ಆದರೆ, ಇದುವರೆಗೂ ಹೊಸ ಸರ್ಕಾರ ರಚಿಸಿ ಘೋಷಣೆ ಮಾಡಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಇದಕ್ಕೆ ಏನು ಕಾರಣ? ವಿದೇಶಿ ಶಕ್ತಿ ಅಮೆರಿಕ ದೇಶ ಬಿಟ್ಟು ಹೋದ ಮೇಲೂ ತಾಲಿಬಾನ್ ಸಂಘಟನೆಯೊಳಗೆ ನಡೆಯುತ್ತಿರುವ ಕಸರತ್ತು ಏನು? ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ.
ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳು ಶುಕ್ರವಾರವೇ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರೂ, ಇನ್ನೂ ಹೊಸ ಸರ್ಕಾರ ರಚನೆಯಾಗಿಲ್ಲ. ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳಿಂದ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಆದರೆ, ಇದಕ್ಕೆ ಕಾರಣವೇನು? ಎನ್ನುವ ಬಗ್ಗೆ ತಾಲಿಬಾನ್ ನಾಯಕರು ಯಾವುದೇ ವಿವರವನ್ನು ನೀಡಿಲ್ಲ. ಆದರೆ, ತಾಲಿಬಾನ್ ಸಂಘಟನೆಯನ್ನ ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಈಗ ತಾಲಿಬಾನ್ ಸಂಘಟನೆಯಲ್ಲಿ ಅಧಿಕಾರ ಹಂಚಿಕೆಯಲ್ಲಿ ಮೇಲುಗೈ ಸಾಧಿಸಲು ವಿವಿಧ ಬಣಗಳ ನಡುವೆ ಕಚ್ಚಾಟ, ಆಂತರಿಕ ಸಂಘರ್ಷ ನಡೆಯುತ್ತಿದೆ. ತಾಲಿಬಾನ್ ಸಂಘಟನೆಯಲ್ಲಿ ಅಫ್ಘಾನ್ ಮೂಲದ ತಾಲಿಬಾನ್ ನಾಯಕರಿದ್ದಾರೆ. ಮುಲ್ಲಾ ಹೇಬತುಲ್ಲಾ ಅಖುಂದಾಜಾ, ಮುಲ್ಲಾ ಅಬ್ದುಲ್ ಘನಿ ಬಾರದರ್, ಮುಲ್ಲಾ ಓಮರ್ ಪುತ್ರ ಮುಲ್ಲಾ ಯಾಕೂಬ್ ಓಮರ್, ಮೊಹಮ್ಮದ್ ಅಬ್ಬಾಸ್ ಸ್ಟಾನಕಜೈ ಸೇರಿದಂತೆ ಬಹುತೇಕರು ಅಫ್ಘನಿಸ್ತಾನ ಮೂಲದ ತಾಲಿಬಾನ್ ನಾಯಕರು. ಆದರೆ, ಹಕ್ಕಾನಿ ನೆಟ್ ವರ್ಕ್‌ನ ಅನಾಸ್ ಹಕ್ಕಾನಿ, ಸಿರಾಜುದ್ದೀನ್ ಹಕ್ಕಾನಿ ಸೇರಿದಂತೆ ಇನ್ನೂ ಕೆಲವರು ಪಾಕಿಸ್ತಾನ ಬೆಂಬಲಿತ ನಾಯಕರು. ಹೀಗೆ ತಾಲಿಬಾನ್ ಸಂಘಟನೆಯೊಳಗೆ ಈ ಎರಡು ಗುಂಪು, ಬಣಗಳೂ ಇವೆ.
ಜೊತೆಗೆ ಕೆಲವು ನಾಯಕರು ಕತಾರ್‌ನ ದೋಹಾದಲ್ಲಿ ತಾಲಿಬಾನ್ ಸಂಘಟನೆಯ ರಾಜಕೀಯ ವ್ಯವಹಾರಗಳ ಕಚೇರಿ ತೆರೆದು ಅಮೆರಿಕ, ಚೀನಾ, ಭಾರತದ ಜೊತೆಗೆ ರಾಜಿ ಸಂಧಾನ, ಮಾತುಕತೆ ಮಾಡಿಕೊಂಡಿದ್ದರು. ಮತ್ತೊಂದೆಡೆ ಹಕ್ಕಾನಿ ನೆಟ್ವರ್ಕ್ ಉಗ್ರರು ತಳಮಟ್ಟದಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೀಗಾಗಿ ಈ ಎರಡು ಗುಂಪುಗಳ ನಡುವೆಯೇ ಈಗ ಅಧಿಕಾರ ಹಂಚಿಕೆಗಾಗಿ ಆಂತರಿಕವಾಗಿ ಕಚ್ಚಾಟ, ಕಿತ್ತಾಟ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಅಮೆರಿಕಾ ಅಫ್ಘನಿಸ್ತಾನವನ್ನು ಬಿಟ್ಟು ಹೋದರೂ, ಇನ್ನೂ ಮಧ್ಯಂತರ ಸರ್ಕಾರ ರಚಿಸಲು ತಾಲಿಬಾನಿಗಳಿಗೆ ಸಾಧ್ಯವಾಗಿಲ್ಲ.
ತಾಲಿಬಾನ್ ಅಧಿಕಾರ ಹಂಚಿಕೆಯ ಅಂತರಿಕ ಸಂಘರ್ಷದ ಕಾರಣಕ್ಕಾಗಿಯೇ ತಾಲಿಬಾನ್ ನ ಸುಪ್ರೀಂ ಲೀಡರ್ ಮುಲ್ಲಾ ಹೇಬಿತುಲ್ಲಾ ಅಖುಂದಾಜಾ ಕೂಡ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಳೆದ ವಾರವೇ ತಾಲಿಬಾನ್ ಮಧ್ಯಂತರ ಸರ್ಕಾರ ರಚಿಸುವುದಾಗಿ ಹೇಳಿತ್ತು. ಮೂರು ದಿನಗಳ ಕಾಲ ಕಂದಹಾರ್ ನಲ್ಲಿ ತಾಲಿಬಾನ್ ನಾಯಕರು ಸರ್ಕಾರ ರಚನೆಯ ಬಗ್ಗೆ ಸಭೆಯನ್ನು ನಡೆಸಿದ್ದರು. ಆದರೆ, ಯಾರಿಗೆ ಯಾವ ಅಧಿಕಾರ, ಯಾರಿಗೆಲ್ಲಾ ಮಹತ್ವದ ಹುದ್ದೆ ನೀಡಬೇಕು ಎನ್ನುವ ಬಗ್ಗೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಇವುಗಳು ಬಗೆಹರಿದಿಲ್ಲ. ಹೀಗಾಗಿಯೇ ತಾಲಿಬಾನಿಗಳ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿದೆ.
ಮುಲ್ಲಾ ಓಮರ್ ಪುತ್ರ ಮುಲ್ಲಾ ಯಾಕೂಬ್ ಓಮರ್ ಕೂಡ ಈಗ ಮುಲ್ಲಾ ಅಬ್ದುಲ್ ಘನಿ ಬಾರದರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಫ್ಘನಿಸ್ತಾನದಲ್ಲಿ ಅಮೆರಿಕಾದ ಸೇನೆಯ ವಿರುದ್ಧ ಹೋರಾಡಿದವರಿಗೆ ಹೊಸ ಸರ್ಕಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕೇ ಹೊರತು, ಕತಾರ್‌ನ ದೋಹಾದಲ್ಲಿ ರಾಜಿ ಸಂಧಾನ, ಶಾಂತಿ ಮಾತುಕತೆ ಮಾಡಿಕೊಂಡಿದ್ದವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬಾರದು ಎಂದು ಯಾಕೂಬ್ ಓಮರ್ ಹೇಳಿದ್ದಾನೆ. ಈ ಮೂಲಕ ಮುಲ್ಲಾ ಅಬ್ದುಲ್ ಘನಿ ಬಾರದರ್ ಸೇರಿದಂತೆ ದೋಹಾದಲ್ಲಿದ್ದ ನಾಯಕರಿಗೆ ಹೆಚ್ಚಿವ ಪ್ರಾಮುಖ್ಯತೆಯನ್ನು ಸರ್ಕಾರದಲ್ಲಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾನೆ.
ಹಕ್ಕಾನಿ ನೆಟ್ವರ್ಕ್ ನಾಯಕರಿಗೆ ಪಾಕಿಸ್ತಾನದ ಬೆಂಬಲ ಇದೆ. ಹೀಗಾಗಿ ತಮಗೆ ಹೊಸ ಸರ್ಕಾರದಲ್ಲಿ ಹೆಚ್ಚಿನ ಪ್ರಾಮುಖ್ಯವಾದ ಹುದ್ದೆ ಸಿಗಬೇಕೆಂದು ಲಾಬಿ ನಡೆಸಿದ್ದಾರೆ. ತಾಲಿಬಾನ್ ವಿರೋಧಿ ದಾಳಿಗಳಲ್ಲಿ ಹಕ್ಕಾನಿ ನೆಟ್ ವರ್ಕ್ ಪಾತ್ರ ಪ್ರಮುಖವಾದದ್ದು. ಜೊತೆಗೆ ತಾಲಿಬಾನ್ನ ಹಣಕಾಸಿನ ಬೆನ್ನೆಲುಬುನ್ನು ಗಟ್ಟಿ ಮಾಡುವಲ್ಲಿ ಹಕ್ಕಾನಿ ನೆಟ್ವರ್ಕ್ ದೊಡ್ಡ ಪಾತ್ರ ವಹಿಸಿದೆ. ಹೀಗಾಗಿ, ತಮ್ಮ ದೊಡ್ಡ ಕೆಲಸಗಳಿಗೆ ತಕ್ಕಂತೆ ದೊಡ್ಡ ಜವಾಬ್ದಾರಿ ನೀಡಬೇಕೆಂದು ಹಕ್ಕಾನಿ ನೆಟ್ ವರ್ಕ್ ಪಟ್ಟು ಹಿಡಿದಿದೆ.
ತಾಲಿಬಾನ್ ನಾಯಕರ ಈ ಆಂತರಿಕ ಕಚ್ಚಾಟದ ಮಧ್ಯೆಯೇ ಇಂದು ತಾಲಿಬಾನ್ ಸಂಘಟನೆಯ ಪೋಷಕ ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಇಂದು ನಿಯೋಗದೊಂದಿಗೆ ಕಾಬೂಲ್‌ಗೆ ಬಂದಿಳಿದಿದ್ದಾನೆ. ತಾಲಿಬಾನ್ ನಾಯಕರ ಅಧಿಕಾರದ ಕಚ್ಚಾಟಕ್ಕೆ ಮುಲಾಮು ಹಚ್ಚಲು ಐಎಸ್ಐ ಮುಖ್ಯಸ್ಥ ಕಾಬೂಲ್‌ಗೆ ಬಂದಿಳಿದ್ದಿದ್ದಾನೆ. ಆದರೆ, ತಾನು ಪಾಕ್ ರಾಯಭಾರಿ ಭೇಟಿಯಾಗಲು ಬಂದಿದ್ದಾನೆ ಎಂದು ಹಸಿ ಸುಳ್ಳು ಹೇಳಿದ್ದಾನೆ. ತಾಲಿಬಾನಿಗಳ ಕಿತ್ತಾಟವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಐಎಸ್ಐ ಯತ್ನಿಸುತ್ತಿದೆ. ತಾಲಿಬಾನ್ ಸಂಘಟನೆಯೊಳಗೂ ಷರಿಯಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೇ ಅಥವಾ ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆಯಲು ಉದಾರವಾದಿ ಆಳ್ವಿಕೆ ನೀಡಬೇಕೇ ಎಂಬ ಬಗ್ಗೆ ಭಿನ್ನಾಭಿಪ್ರಾಯ ಇದೆ.
ತಾಲಿಬಾನಿಗಳಿಗೆ ಇರುವ ಸವಾಲುಗಳೇನು?: ಅಫ್ಘಾನಿಸ್ತಾನದ ಜನರು ಬಡತನ, ಹಸಿವಿನಿಂದ ಬಳಲುತ್ತಿದ್ದಾರೆ. ಸರ್ಕಾರದ ಬಳಿ ಹಣ ಇಲ್ಲ. ಹಣ ಇಲ್ಲದೆ ಸರ್ಕಾರವನ್ನು ನಡೆಸಲಾಗಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ನೀಡಬೇಕು. ಹೀಗಾಗಿ ವಿದೇಶಿ ನೆರವು ಅನ್ನೇ ಅವಲಂಬಿಸಬೇಕು. ಹೀಗಾಗಿ ವಿದೇಶಿ ನೆರವಿಗಾಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವುದೇ ಮೊದಲ ಸವಾಲು. ದೇಶದ ಜನರ ನಂಬಿಕೆ, ವಿಶ್ವಾಸ ಗಳಿಸಬೇಕು. ಅಫ್ಘಾನ್ ಜನರಿಗೆ ತಾಲಿಬಾನಿಗಳ ಮೇಲೆ ನಂಬಿಕೆ ಇಲ್ಲ. ಪ್ರತಿಭಾವಂತರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ, ಪ್ರತಿಭಾವಂತರ ಕೊರತೆ ಇದೆ.
ಅಫ್ಘನಿಸ್ತಾನದಲ್ಲಿ ದೊಡ್ಡ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಐಸಿಎಸ್ ಖೋರಸನಾ ಸಂಘಟನೆಯ ದಾಳಿಯ ಭೀತಿಯೂ ಇದೆ. ತಾಲಿಬಾನ್ ಈಗ ಚೀನಾ ದೇಶವೇ ತನ್ನ ಪ್ರಧಾನ ಪಾರ್ಟನರ್ ಎಂದು ಹೇಳಿದೆ. ಚೀನಾ ಬೇರೆ ದೇಶಗಳಿಗೆ ಸಾಲ ಕೊಟ್ಟು ಸಾಲದ ಸುಳಿಯಲ್ಲಿ ಸಿಲುಕಿಸಿ ಬಳಿಕ ಆ ದೇಶಗಳನ್ನೇ ಕಬಳಿಸುವ ಇತಿಹಾಸ ಹೊಂದಿದೆ, ಶ್ರೀಲಂಕಾಕ್ಕೆ ಸಾಲ ಕೊಟ್ಟು, ಬಳಿಕ ಶ್ರೀಲಂಕಾದ ಬಂದರು ಪ್ರದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡಿದೆ. ಈಗ ಚೀನಾ ತನ್ನ ಎಕಾನಾಮಿಕ್ ಕಾರಿಡಾರ್ ಅನ್ನು ಪೆಷಾವರ್ ನಿಂದ ಕಾಬೂಲ್ ವರೆಗೂ ವಿಸ್ತರಿಸುವ ಪ್ಲ್ಯಾನ್ ಹಾಕಿಕೊಂಡಿದೆ. ಇದೆಲ್ಲವೂ ಭಾರತದ ಹಿತಾಸಕ್ತಿಗೆ ಧಕ್ಕೆ ತರುವ ಬೆಳವಣಿಗೆಗಳು. ಜೊತೆಗೆ ಚೀನಾ ಅಫ್ಘಾನಿಸ್ತಾನದ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ. ಅಪ್ಘನಿಸ್ತಾನದಲ್ಲಿ ಗಣಿಗಾರಿಕೆ, ಗಣಿ ಸುಧಾರಣೆ, ಸಾಗಾಟವನ್ನು ಚೀನಾ ಮಾಡಲಿದೆ ಎಂದು ತಾಲಿಬಾನ್ ನಾಯಕರು ಹೇಳುತ್ತಿದ್ದಾರೆ. ಇದರಿಂದಾಗಿ ಅಫ್ಘಾನ್ ಖನಿಜ ಸಂಪತ್ತನ್ನು ಕಡಿಮೆ ಬೆಲೆಗೆ ಖರೀದಿಸಿ ಬಾರಿ ಲಾಭವನ್ನು ಚೀನಾ ಮಾಡಿಕೊಳ್ಳಲಿದೆ.
ಇದನ್ನೂ ಓದಿ: Afghanistan Government: ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ತಾಲಿಬಾನ್ ಸಹ- ಸಂಸ್ಥಾಪಕ ಮುಲ್ಲಾ ಬರಾದಾರ್
ಅಫ್ಘಾನಿಸ್ತಾನದಲ್ಲಿ ನಾಳೆ ನೂತನ ಸರ್ಕಾರ ರಚನೆ ಸಾಧ್ಯತೆ; ತಾಲಿಬಾನ್- ಹಕ್ಕಾನಿ ನೆಟ್ವರ್ಕ್ ನಡುವೆ ಪೈಪೋಟಿ
(Afghanistan Crisis why Taliban Government Formation Delaying in Afghanistan here is the Interesting Facts)