
ಮೈಸೂರು, ಆ.28: “ಆರ್‌ಎಸ್‌ಎಸ್‌ನಿಂದ (RSS) ಈ ದೇಶಕ್ಕೆ ಯಾವುದೇ ಗಂಡಾಂತರವಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದಿಂದಲೇ ದೇಶಕ್ಕೆ ಗಂಡಾಂತರ ಎದುರಾಗಿದೆ” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿಷಯದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದರು.
“ಸಚಿವ ಪ್ರಿಯಾಂಕ್ ಖರ್ಗೆ ಅವರು ಪದೇ ಪದೇ ಆರ್‌ಎಸ್‌ಎಸ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುತ್ತಾರೆ. ಆರ್‌ಎಸ್‌ಎಸ್ ಮಾಡಿರುವ ತಪ್ಪು ಏನು ಎಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ” ಎಂದು ಸವಾಲೆಸೆದರು. “ಹೌದು, ನಾನು ಕೂಡ ಹಿಂದೆ ಆರ್‌ಎಸ್‌ಎಸ್ ಬಗ್ಗೆ ಟೀಕೆಗಳನ್ನು ಮಾಡಿದ್ದೆ. ಆದರೆ ನನಗೆ ಈಗ ಆರ್‌ಎಸ್‌ಎಸ್‌ನ ನೈಜ ಉದ್ದೇಶ ಮತ್ತು ಅವರ ಕಾರ್ಯವೈಖರಿ ಸಂಪೂರ್ಣವಾಗಿ ಅರ್ಥವಾಗಿದೆ” ಎಂದರು.
“ನನ್ನ ಸಿದ್ಧಾಂತದ ಬಗ್ಗೆ ಪ್ರಶ್ನೆ ಮಾಡುವ ಯಾವುದೇ ನೈತಿಕತೆ ಪ್ರಿಯಾಂಕ್ ಖರ್ಗೆ ಅವರಿಗೆ ಇಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚಕ್ಕಂದ ಆಡಿ, ಈಗ ಅಧಿಕಾರಕ್ಕಾಗಿ ಟಿವಿಕೆ ಜೊತೆಗೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್‌ಗೆ ಯಾವ ಸಿದ್ಧಾಂತವಿದೆ? ಕಾಂಗ್ರೆಸ್‌ನ ನಕಲಿ ಸಿದ್ಧಾಂತದ ಕಥೆಗಳು ಹಾಗೂ ಬೂಟಾಟಿಕೆಗಳೆಲ್ಲವೂ ನನಗೆ ಚೆನ್ನಾಗಿ ಗೊತ್ತಿದೆ” ಎಂದು ಕಿಡಿಕಾರಿದರು.
ಇದನ್ನೂ ಓದಿ; ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಬಿಗ್ ಬಾಂಬ್: ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ!
ಶಾಸಕ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಬಹಿರಂಗವಾಗಿಯೇ ಗಂಭೀರ ಎಚ್ಚರಿಕೆ ನೀಡಿದ್ದಾರೆ. “ಗನ್ ಹಿಡಿದುಕೊಂಡು ಬಿಡದಿಯಲ್ಲಿ ಒಬ್ಬರಿಗೆ ಹೆದರಿಸಿದ ಕಥೆಯನ್ನು ನಾನು ಓಪನ್ ಮಾಡಲಾ? ಸುಮ್ಮನೆ ನನ್ನ ತಂಟೆಗೆ ಬರಲು ಹೋಗಬೇಡಿ” ಎಂದು ನೇರವಾಗಿ ವಾರ್ನಿಂಗ್ ನೀಡಿದರು. “ನಾನಿನ್ನೂ ನಿಮ್ಮ ಮೇಲೆ ಯಾವುದೇ ರೀತಿಯ ಹೊಸ ಆರೋಪಗಳನ್ನು ಮಾಡಿಲ್ಲ. ಒಂದು ವೇಳೆ ನಾನು ಶುರು ಮಾಡಿದರೆ ನಿಮ್ಮ ಎಲ್ಲಾ ವಿಚಾರಗಳನ್ನು ಹಾಗೂ ಹಗರಣಗಳನ್ನು ಒಂದೊಂದಾಗಿ ತೆರೆದಿಡಬೇಕಾಗುತ್ತದೆ” ಎಂದು ಗುಡುಗಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.