ಶಾಸಕ ಸ್ಥಾನವನ್ನೂ ತ್ಯಜಿಸುವ ಮಾತನಾಡಿದ ಬಿ. ನಾಗೇಂದ್ರ: ಬಿಜೆಪಿಗರಿಗೆ ‘ಕೈ’ ನಾಯಕನಿಂದ ಬಹಿರಂಗ ಸವಾಲು
B Nagendra Resignation: ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಿಸಿದ್ದು, ಈ ವೇಲೆ ಭಾವುಕರಾಗಿ ಕಣ್ಣೀರಿಟ್ಟಿರುವ ಪ್ರಸಂಗ ನಡೆದಿದೆ. ಶಾಸಕ ಹುದ್ದೆಗೂ ರಾಜೀನಾಮೆ ನೀಡುವುದಾಗಿ ತಿಳಿಸಿದ ಅವರು, ಆರೋಪ ಮುಕ್ತನಾಗಿ ಬರುತ್ತೇನೆ ಎಂಬ ನಂಬಿಕೆ ಇದೆ ಎಂಬ ವಿಶ್ವಾಸವನ್ನೂ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಕಣ್ಣೀರು ಹಾಕಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ
- ಶಾಸಕ ಸ್ಥಾನವನ್ನೂ ತ್ಯಜಿಸುವ ಮಾತನಾಡಿದ ನಾಯಕ
- ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಹಾಕಿದ ನಾಗೇಂದ್ರ
ಬೆಂಗಳೂರು, ಆಗಸ್ಟ್ 28: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅವರು, ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿರುವ ಅವರು, ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಜನತಾ ನ್ಯಾಯಾಲಯಕ್ಕೆ ಬಂದು ಎಲ್ಲವನ್ನೂ ಎದುರಿಸಿ ಎಂದು ಬಿಜೆಪಿಗರಿಗೆ ಬಹಿರಂಗ ಸವಾಲು ಕೂಡ ಹಾಕಿದ್ದಾರೆ.
‘ಮನುವಾದಿಗಳ ಕುತಂತ್ರಕ್ಕೆ ಬಗ್ಗಲ್ಲ’
ವಿರೋಧ ಪಕ್ಷದವರಿಂದ ಕುತಂತ್ರ ರಾಜಕಾರಣ ನಡೆಯುತ್ತಿದೆ. ಸದನದಲ್ಲಿ ಹಲವು ಬಾರಿ ಮನವಿ ಮಾಡಿಕೊಂಡೆವು, ನೋಟಿಸ್ ಕೊಡಿ. ಚರ್ಚೆಗೆ ಬನ್ನಿ ಎಂದು ಕೇಳಿಕೊಂಡೆವು, ಆದರೂ ಅವರು ಚರ್ಚೆಗೆ ಬರಲಿಲ್ಲ. ಈಗ ಇಶ್ಯೂಲೆಸ್ ಇಶ್ಯೂ ಇಟ್ಟುಕೊಂಡು ಪಾದಯಾತ್ರೆಗೆ ಹೊರಟಿದ್ದಾರೆ. ಬಿಜೆಪಿಯವರು ಮನುಸ್ಮೃತಿಯ ವಾದ ಮಾಡುತ್ತಿದ್ದು, ಸಂವಿಧಾನ ನಮಗೆಲ್ಲಾ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ. ದಲಿತರು, ಬಡವರು ಹಾಗೂ ಆದಿವಾಸಿಗಳು ಬದುಕಬಾರದು ಎಂಬ ಮನಸ್ಥಿತಿಯನ್ನು ಬಿಜೆಬಿಗರು ಹೊಂದಿದ್ದಾರೆ. 2024ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ವಿನಾಕಾರಣ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿಗೆ ಹಾಕಿದ್ರು. ಬಳಿಕ ಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದೇನೆ. ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ; ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ. ನಾಗೇಂದ್ರ
ಜನಾರ್ದನರೆಡ್ಡಿ, ಶ್ರೀರಾಮುಲು ವಿರುದ್ಧ ಕಿಡಿ
ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ ಅಂತಾ ಬಿಜೆಪಿಯವರಿಗೆ ಸವಾಲು ಹಾಕಿರುವ ನಾಗೇಂದ್ರ, ಬಳ್ಳಾರಿಯಲ್ಲಿ ಸೋ ಕಾಲ್ಡ್ ಲೀಡರ್‌ಗಳಿದ್ದೀರಲ್ಲ ಬನ್ನಿ ಅಖಾಡಕ್ಕೆ ಎಂದು ಹೇಳುವ ಮೂಲಕ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ, ತಾಕತ್ತಿದ್ದರೆ ನಮ್ಮ ಪಕ್ಷವನ್ನು ಎದುರಿಸಿ. ಇಡಿ, ಸಿಬಿಐ ಬಿಟ್ಟು ಕೇಸ್ ಹಾಕಿಸ್ತಾರೆ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ. ರೆಡ್ಡಿ, ರಾಮುಲು ಬರಲಿ, ಜನತಾ ನ್ಯಾಯಾಲಯಕ್ಕೆ ಹೋಗೋಣ. ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು, ಚಲಾವಣೆ ಇಲ್ಲದ ನಾಣ್ಯಗಳು ಎಂದವರು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಆರೋಪ ಮುಕ್ತನಾಗಿ ಬರುತ್ತೇನೆ ಎಂಬ ನಂಬಿಕೆ ಇದೆ ಎಂಬ ವಿಶ್ವಾಸವನ್ನೂ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 pm, Fri, 28 August 26




