Kalyan Singh: ಅಯೋಧ್ಯೆ ರಾಮ ಮಂದಿರದ ರಸ್ತೆಗೆ ಕಲ್ಯಾಣ್ ಸಿಂಗ್ ಹೆಸರು; ರಾಮ ಭಕ್ತನಿಗೆ ಸರ್ಕಾರಿ ಗೌರವ
Kalyan Singh Funeral: ಉತ್ತರ ಪ್ರದೇಶದ ಅಯೋಧ್ಯೆ, ಲಕ್ನೋ ಸೇರಿದಂತೆ 6 ಜಿಲ್ಲೆಗಳ ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಅವರ ಹೆಸರಿಡಬೇಕೆಂದು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಲಕ್ನೋ: ಅನಾರೋಗ್ಯದಿಂದ ಸಾವನ್ನಪ್ಪಿರುವ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (Kalyan Singh) ಅವರ ಅಂತ್ಯಸಂಸ್ಕಾರ ಇಂದು ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅಲಿಘಢ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಸಿಂಗ್ ಅವರ ಹೆಸರನ್ನಿಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಅದರ ಬದಲಾಗಿ ಉತ್ತರ ಪ್ರದೇಶದ ಅಯೋಧ್ಯೆ, ಲಕ್ನೋ ಸೇರಿದಂತೆ 6 ಜಿಲ್ಲೆಗಳ ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಅವರ ಹೆಸರಿಡಬೇಕೆಂದು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಇಂದು ಘೋಷಣೆ ಮಾಡಿದ್ದಾರೆ. ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಬಿಜೆಪಿಯ ಕ್ರಾಂತಿಕಾರಿ ನಾಯಕರಾಗಿದ್ದ ಕಲ್ಯಾಣ್ ಸಿಂಗ್ ಸ್ಮರಣಾರ್ಥ ಉತ್ತರ ಪ್ರದೇಶದ 6 ಜಿಲ್ಲೆಗಳ ಪ್ರಮುಖ ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಹೆಸರನ್ನಿಡಲು ಸರ್ಕಾರ ತೀರ್ಮಾನಿಸಿದೆ.
ಅಯೋಧ್ಯೆಯ ರಾಮಜನ್ಮಭೂಮಿಗೆ ತೆರಳುವ ರಸ್ತೆ ಮಾರ್ಗಕ್ಕೆ ಕಲ್ಯಾಣ್ ಸಿಂಗ್ ಹೆಸರಿಡಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಲ್ಯಾಣ್ ಸಿಂಗ್ ಅವರೇ ನಮಗೆ ಸ್ಫೂರ್ತಿ. ರಾಮ ಮಂದಿರಕ್ಕಾಗಿ ಕಲ್ಯಾಣ್ ಸಿಂಗ್ ಮಾಡಿದ ತ್ಯಾಗ ಮರೆಯಲಾಗದು. ಅವರ ನೆನಪಿನಲ್ಲಿ ರಸ್ತೆಗಳಿಗೆ ಅವರ ಹೆಸರನ್ನಿಡಲಾಗುವುದು ಎಂದು ಉತ್ತರ ಪ್ರದೇಶದ ಡಿಸಿಎಂ ತಿಳಿಸಿದ್ದಾರೆ.
89 ವರ್ಷವಾಗಿದ್ದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ಸಾವನ್ನಪ್ಪಿದ್ದರು. ಅವರು ಲಕ್ನೋದಲ್ಲಿರುವ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ನಲ್ಲಿದ್ದ ಅವರಿಗೆ ಮೂತ್ರ ವಿಸರ್ಜನೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಯಾಲಿಸಿಸ್ ಮಾಡಲಾಗುತ್ತಿತ್ತು. ಅದಾದ ಮರುದಿನವೇ ಅವರು ಮೃತಪಟ್ಟಿದ್ದರು. ಕಲ್ಯಾಣ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ನರೋರಾದಲ್ಲಿರುವ ಗಂಗಾ ನದಿಯ ದಡದಲ್ಲಿ ನಡೆಯಲಿದೆ.
The road leading to Ram Janmbhoomi in Ayodhya will be named after former UP CM Kalyan Singh (in file photo). Besides Ayodhya, one road each in Lucknow, Prayagraj, Bulandshahr and Aligarh will be named after him: UP Deputy CM KP Maurya pic.twitter.com/fJKDAApV1I
— ANI UP (@ANINewsUP) August 23, 2021
ಕಲ್ಯಾಣ್ ಸಿಂಗ್ ಅವರ ರಕ್ತದೊತ್ತಡ ಕಡಿಮೆಯಾಗಿದ್ದು, ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲ್ಲ. ಹೀಗಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಹಲವು ದಿನಗಳಿಂದ ಕಲ್ಯಾಣ್ ಸಿಂಗ್ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಅನೇಕರು ಆಸ್ಪತ್ರೆಗೆ ತೆರಳಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದರು. ಕಲ್ಯಾಣ್ ಸಿಂಗ್ ಅವರನ್ನು ಮೊದಲು ದೆಹಲಿಯ ಆರ್ಎಮ್ಎಲ್ ಇನ್ಸ್ಟಿಟ್ಯೂಟ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
89 ವರ್ಷದ ಕಲ್ಯಾಣ್ ಸಿಂಗ್ ಅವರ ದೇಹ ಇದ್ದಕ್ಕಿದ್ದಂತೆ ಊದಿಕೊಂಡು, ಪ್ರಜ್ಞಾ ಹೀನರಾದ ಹಿನ್ನೆಲೆಯಲ್ಲಿ ಜುಲೈ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಲಕ್ನೋಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನ ಪಡೆದಿದ್ದರು. ಬಾಬ್ರಿ ಮಸೀದಿ ಧ್ವಂಸದ ವೇಳೆ ಉತ್ತರ ಪ್ರದೇಶದ ಸಿಎಂ ಆಗಿದ್ದ ಕಲ್ಯಾಣ್ ಸಿಂಗ್ ಪ್ರಖರ ಹಿಂದೂವಾದಿ ಎಂದೇ ಹೆಸರಾಗಿದ್ದರು. ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: Kalyan Singh: ಕಲ್ಯಾಣ್ ಸಿಂಗ್ ಅಂತಿಮ ದರ್ಶನ; ರಾಷ್ಟ್ರಧ್ವಜದ ಮೇಲೆ ಪಕ್ಷದ ಬಾವುಟ ಹೊದಿಸಿ ಟೀಕೆಗೀಡಾದ ಬಿಜೆಪಿ
(Ayodhya Ram Temple Road to be Renamed after Kalyan Singh Uttar Pradesh Government announces)