ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್: ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಬೆಂಬಲಿಗರು
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಸಿಎಂ ಸಿದ್ದರಾಮಯ್ಯ ಮುಂದಿನ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ ಎಂಬರ್ಥದಲ್ಲಿ ಹೇಳಿದ್ದರು. ಇದಕ್ಕೆ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಕೌಂಟರ್ ಕೊಟ್ಟಿದ್ದಾರೆ.
ರಾಮನಗರ, ನವೆಂಬರ್ 08: ಕರ್ನಾಟಕದ (Karnataka) ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ (ByPoll) ಭರಾಟೆ ಜೋರಾಗಿದೆ. ಈ ಹೊತ್ತಿನಲ್ಲೇ ಮುಖ್ಯಮಂತ್ರಿ ಸ್ಥಾನ ಕುರಿತಾದ ಚರ್ಚೆ ಆರಂಭವಾಗಿದೆ. ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಪರ ಮತಯಾಚನೆ ವೇಳೆ ಸಿಎಂ ಸಿದ್ದರಾಮಯ್ಯ (Siddramaiah) ಮುಂದಿನ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ ಎಂಬರ್ಥದಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿಯೂ ಮುಖ್ಯಮಂತ್ರಿ ಕೂಗು ಕೇಳಿಬಂದಿದೆ. ಈ ಉಪಚುನಾವಣೆ ನಡೆಯುತ್ತಿರುವುದು ಕ್ಷೇತ್ರ ಶಾಸಕರ ಆಯ್ಕೆಗಾ? ಇಲ್ಲ ಮುಂದಿನ ಮುಖ್ಯಮಂತ್ರಿ ಆಯ್ಕೆಗಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ನ.08) ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಅವರ ಪರವಾಗಿ ಪ್ರಚಾರಕ್ಕೆ ತೆರಳಿದ್ದರು. ಚನ್ನಪಟ್ಟಣ ಕ್ಷೇತ್ರದ ಚೆಕ್ಕೆರೆಯಲ್ಲಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದಾಗ ಅವರ ಬೆಂಬಲಿಗರು “ಮುಂದಿನ ಸಿಎಂ ಡಿಕೆ ಶಿವಕುಮಾರ್” ಅಂತ ಘೋಷಣೆ ಕೂಗಿದರು. ಈ ವೇಳೆ ಡಿಕೆ ಶಿವಕುಮಾರ್ ಮಾತು ನಿಲ್ಲಿಸಿ ಬೆಂಬಲಿಗರಿಂದ ದೂರ ನಡೆದರು.
ಆದರೂ ಕೂಡ ಸುಮ್ಮನಾಗದ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜೈ ಅಂತ ಘೋಷಣೆ ಕೂಗಿದರು. ಇನ್ನು, ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭಾಷಣಕ್ಕೆ ಆಹ್ವಿಸುವ ವೇಳೆ ಕೂಡ ಮುಖ್ಯಮಂತ್ರಿ ಕೂಗು ಕೇಳಿಬಂತು. ಹೌದು, ಕಾಂಗ್ರೆಸ್ ಮುಖಂಡ ಪ್ರಮೋದ್ “ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಲು ಆಗಮಿಸುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಮೂರೂವರೆ ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಹೇಳಿಕೆಯಿಂದ ಶುರುವಾಯ್ತು ಹೊಸ ಚರ್ಚೆ
ಒಕ್ಕಲಿಗ ಕಾಂಗ್ರೆಸ್ ನಾಯಕರು ಚನ್ನಪಟ್ಟಣ ಗೆದ್ದರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಚನ್ನಪಟ್ಟಣ ಅಖಾಡದಲ್ಲಿ ಪ್ರಚಾರ ನಡೆಸುತ್ತಿರುವ ಬಹುತೇಕ ಒಕ್ಕಲಿಗ ನಾಯಕರು ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಇದಕ್ಕೆ ಈ ಉಪಚುನಾವಣೆಯೇ ಭೂಮಿಕೆ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಕರ್ನಾಟಕ ಕಾಂಗ್ರೆಸ್ನಲ್ಲಿ ಪೈಪೋಟಿ ಜೋರಾಗಿದೆ. ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಮುಖ್ಯಮಂತ್ರಿ ಕುರ್ಚಿ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಮುಖ್ಯಮಂತ್ರಿ ಆಗುವ ಅಭಿಲಾಶೆ ಹೊಂದಿದ್ದರುವ ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಕೈ ತಪ್ಪಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗುವ ಕನಸು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರ ಮುಂದಿನ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿ ಎಂಬರ್ಥದ ಹೇಳಿಕೆ ಪಕ್ಷದಲ್ಲಿ ಬಿನ್ನಾಭಿಪ್ರಾಯ ಮೂಡಿರುವುದಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ