Karnataka Politics: ಸರ್ಕಾರ ಬೀಳಿಸುವ ಹೇಳಿಕೆ ನರಿ ದ್ರಾಕ್ಷಿಗೆ ಆಸೆಪಟ್ಟಂತೆ; ಬಿಜೆಪಿ, ಜೆಡಿಎಸ್ ವಿರುದ್ಧ ಕಾಂಗ್ರೆಸ್ ವ್ಯಂಗ್ಯ
ಕರ್ನಾಟಕ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಸರ್ಕಾರ ಕೆಡವಲು ಸಿದ್ಧತೆ ನಡೆಯುತ್ತಿದೆ ಎಂಬ ಹೇಳಿಕೆಗಳಿಗೆ ಸಂಬಂಧಿಸಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಬೆಂಗಳೂರು: ಬಹುಮತದೊಂದಿಗೆ ರಚಿಸಿರುವ ಸರ್ಕಾರವನ್ನು ಬೀಳಿಸುತ್ತೇವೆ ಎಂಬುದು ಹಗಲುಗನಸು. ನರಿಯೊಂದು ದ್ರಾಕ್ಷಿಗೆ ಆಸೆಪಟ್ಟಂತೆ ಎಂದು ಪ್ರತಿಪಕ್ಷಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ (Congress) ವ್ಯಂಗ್ಯವಾಡಿದೆ. ಬಿಜೆಪಿ ಹಾಗೂ ಜೆಡಿಎಸ್ (BJP & JDS) ವಿರುದ್ಧ ಕಾಂಗ್ರೆಸ್ನ ಕರ್ನಾಟಕ ಘಟಕದ ಅಧಿಕೃತ ಟ್ವಿಟರ್ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಲಾಗಿದ್ದು, ಕನ್ನಡಿಗರು ಭರವಸೆಯಿಟ್ಟು ಗೆಲ್ಲಿಸಿದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಜನರೇ ದಂಗೆ ಏಳಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
‘ಕನ್ನಡಿಗರು ಅತೀವ ಭರವಸೆಯನ್ನಿಟ್ಟು ಗೆಲ್ಲಿಸಿದ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಜನರೇ ದಂಗೆ ಏಳುತ್ತಾರೆ. ಈಗ ಸಿಂಗಾಪುರಕ್ಕೆ ಹೋದವರು ನಂತರ ಮಂಗಾಪುರಕ್ಕೆ ಓಡುವ ಸ್ಥಿತಿ ಉಂಟಾಗಲಿದೆ. ಪದೇ ಪದೇ ಪ್ರಜಾಪ್ರಭುತ್ವದ ಆಶಯಗಳ ವಿರುದ್ಧ ಕೆಲಸ ಮಾಡುವ ಬಿಜೆಪಿ ಈಗಲಾದರೂ ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಲಿ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು. ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ದಮ್ಮು, ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು. ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು,
ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ದಮ್ಮು ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು.
ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ…
— Karnataka Congress (@INCKarnataka) July 25, 2023
ಇದನ್ನೂ ಓದಿ: ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸಿದ್ಯಾರು? ಸಿಎಂಗೆ ಪತ್ರ ಬರೆದಿದ್ಯಾರು? ಪತ್ರದಲ್ಲೇನಿದೆ? ಎಲ್ಲಾ ಅಂಶ ಬಿಚ್ಚಿಟ್ಟ ರಾಯರೆಡ್ಡಿ
ಜೆಡಿಎಸ್ ನಾಯಕರ ಹೆಚ್ಡಿ ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ತೆರಳಿದ್ದು, ಸರ್ಕಾರ ಅಸ್ಥಿರಗೊಳಿಸಲು ಸಂಚು ಹೂಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ದೂರಿದ್ದರು. ಈ ಮಧ್ಯೆ, ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರು ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನದ ಧಾಟಿಯಲ್ಲಿ ಮಾತನಾಡಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್ ಟೀಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಬಿಕೆ ಹರಿಪ್ರಸಾದ್ ಅವರ ಹೇಳಿಕೆಯಿಂದ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಸಿಂಗಾಪುರದ ಕಥೆಕಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ