AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka CM News Live: ನವದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಲೈವ್​ ಸುದ್ದಿ: ಕರ್ನಾಟಕದ ಕುರ್ಚಿ ಸಮರಕ್ಕೆ ತೆರೆಬಿದ್ದಿದೆ. ನಿನ್ನೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರೇ ಮುಂದಿನ ಸಿಎಂ ಎನ್ನುವುದರ ಸುಳಿವು ನೀಡಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎನ್ನುವುದು ಬಹುತೇಕ ಖಚಿತಗೊಂಡಂತಿದ್ದರೂ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕವೇ ಸಿಎಂ ಯಾರೆಂಬುದು ಬಹಿರಂಗವಾಗಲಿದೆ.ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Karnataka CM News Live: ನವದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಸಿದ್ದರಾಮಯ್ಯ
ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಭಾವನಾ ಹೆಗಡೆ
| Edited By: |

Updated on:May 29, 2026 | 6:37 PM

Share

LIVE NEWS & UPDATES

  • 29 May 2026 06:37 PM (IST)

    ದೆಹಲಿಯಿಂದ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್

    ರಾಜೀನಾಮೆ ಬಳಿಕ ದೆಹಲಿಗೆ ಹಾರಿದ್ದ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದಿಲ್ಲಿಯಿಂದ ಹೆಚ್ಎಎಲ್ ಏರ್‌ಪೋರ್ಟ್‌ ಬಂದಿಳಿದ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಖಾಸಗಿ ಕಾರಿನಲ್ಲಿ ಕುಮಾರಕೃಪಾ ರಸ್ತೆಯಲ್ಲಿನ ಕಾವೇರಿ ನಿವಾಸಕ್ಕೆ ತೆರಳಿದರು.

  • 29 May 2026 05:40 PM (IST)

    ಡಿಕೆಶಿ ಪ್ರಮಾಣವಚನಕ್ಕೆ 3 ದಿನಾಂಕ ನೀಡಿದ ಗುರೂಜಿ

    ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಭರ್ಜರಿ ತಯಾರಿಗಳು ನಡೆದಿವೆ. ಇದರ ಮಧ್ಯೆ ಪ್ರಮಾಣವಚನಕ್ಕೆ ಸಮಯ ದಿನಾಂಕ ಕೇಳಿದ್ದ ಡಿಕೆ ಶಿವಕುಮಾರ್ ಅವರಿಗೆ ರಾಜಗುರು ದ್ವಾರಕನಾಥ್ ಗುರೂಜಿ 3 ಡೇಟ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಅಂದರೆ ಜೂನ್ 5, 6 ಮತ್ತು 7ರಂದು ನಾನು ದಿನಾಂಕ ಕೊಟ್ಟಿದ್ದೇನೆ ಎಂದು ಸ್ವತಃ ರಾಜಗುರು ದ್ವಾರಕನಾಥ್ ಗುರೂಜಿ ಅವರು ಟಿವಿ9 ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

  • 29 May 2026 04:57 PM (IST)

    ಖರ್ಗೆ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್‌

    ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆಯೇ ಅತ್ತ ದೆಹಲಿಯಲ್ಲಿ ಹೈವೋಲ್ಟೇಜ್ ಮೀಟಿಂಗ್‌ ನಡೆದಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಇದ್ದು, ಸಿಎಲ್‌ಪಿ ಸಭೆ ಹಾಗೂ ನೂತನ ಸಚಿವರ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ.

  • 29 May 2026 04:16 PM (IST)

    ಸಿಎಲ್‌ಪಿ ಸಭೆ ಬಳಿಕ ಪ್ರಮಾಣವಚನ ಕಾರ್ಯಕ್ರಮ ನಿಗದಿ

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾಳೆ (ಮೇ 30) ಸಂಜೆ ಸಿಎಲ್‌ಪಿ ಮೀಟಿಂಗ್ ಕರೆಯಲಾಗಿದೆ. ಸಿಎಲ್‌ಪಿ ಸಭೆಯಲ್ಲಿ ಸುರ್ಜೇವಾಲ, ವೇಣುಗೋಪಾಲ್ ಭಾಗಿಯಾಗ್ತಾರೆ. ಸಿಎಲ್‌ಪಿ ಮೀಟಿಂಗ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಳಿಕ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

  • 29 May 2026 04:08 PM (IST)

    ವೇಣುಗೋಪಾಲ್‌ ಭೇಟಿಯಾದ ಡಿಕೆ ಶಿವಕುಮಾರ್

    ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೈಕಮಾಂಡ್ ನಾಯಕರನ್ನ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಇದೀಗ ವಾಪಸ್ ಬೆಂಗಳೂರಿನತ್ತ ಹೊರಟ್ಟಿದ್ದಾರೆ. ಇನ್ನೊಂದೆಡೆ ದೆಹಲಿಯಲ್ಲೇ ಬೀಡುಬಿಟ್ಟಿರುವ ಡಿಕೆ ಶಿವಕುಮಾರ್, ಹೊಸ ಸರ್ಕಾರ ರಚನೆ ಬಗ್ಗೆ ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  • 29 May 2026 03:10 PM (IST)

    ಸಿದ್ದರಾಮಯ್ಯ ಮೂಲಕವೇ ಡಿಕೆಶಿ ಹೆಸರು ಪ್ರಸ್ತಾವನೆ ಸಾಧ್ಯತೆ

    ನಾಳೆ(ಮೇ 30) ಸಿಎಲ್​​​ಪಿ ಸಭೆ ನಡೆಯಲಿದ್ದು,ಹೊಸ ಶಾಸಕಾಂಗ ಸಭೆಯ ನಾಯಕನ ಆಯ್ಕೆ ಪ್ರತಿಕ್ರಿಯೆ ನಡೆಯಲಿದೆ. ಹೀಗಾಗಿ ಸಿದ್ದರಾಮಯ್ಯ ಮೂಲಕವೇ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾವನೆ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಸಿದ್ದರಾಮಯ್ಯ ಮೂಲಕ ಡಿಕೆಶಿ ಹೆಸರು ಪ್ರಸ್ತಾಪಿಸಿ ಅನುಮೋದನೆಗೆ ಚಿಂತನೆ ನಡೆದಿದೆ. ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಯಾದ ಬಳಿಕ ಲೋಕಭವನಕ್ಕೆ ಮಾಹಿತಿ ರವಾನಿಸಲಾಗುತ್ತದೆ.

  • 29 May 2026 03:01 PM (IST)

    ಸಿದ್ದರಾಮಯ್ಯ ಮೂಲಕವೇ ನೂತನ ಸಿಎಂ ಹೆಸರು ಪ್ರಸ್ತಾವನೆ ಸಾಧ್ಯತೆ

    ರಾಜೀನಾಮೆ ಘೊಷಿಸುವ ಸಮಯದಲ್ಲೇ ಡಿ.ಕೆ ಶಿವಕುಮಾರ್ ಮುಂದಿನ ಸಿಎಂ ಎಂದಿದ್ದ ಸಿದ್ದರಾಮಯ್ಯನವರಿಂದಲೇ ನಾಳೆ ನಡೆಯಲಿರುವ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಹೆಸರನ್ನು ಪ್ರಸ್ತಾಪಿಸಲು ಹೈಕಮಾಂಡ್ ನಿರ್ಧರಿಸಿದೆ. ಸಭೆಯಲ್ಲಿ ಧನ್ಯವಾದ ಭಾಷಣದ ಬಳಿಕ ಸಿದ್ದರಾಮಯ್ಯ ಈ ಹೆಸರು ಸೂಚಿಸಲಿದ್ದು, ಶಾಸಕರ ಅನುಮೋದನೆ ಪಡೆದು ಶಿಷ್ಟಾಚಾರದ ಪ್ರಕಾರ ಒಗ್ಗಟ್ಟಿನಿಂದ ನೂತನ ನಾಯಕನನ್ನು ಆಯ್ಕೆ ಮಾಡಿ ರಾಜಭವನಕ್ಕೆ ಮಾಹಿತಿ ನೀಡಲಾಗುತ್ತದೆ.

  • 29 May 2026 02:51 PM (IST)

    ತಮ್ಮದೇ ಆಪ್ತರ ಪಟ್ಟಿ ಹಿಡಿದು ದೆಹಲಿಗೆ ಹಾರಿದ್ದ ಡಿ.ಕೆ.ಶಿವಕುಮಾರ್

    ಡಿ.ಕೆ.ಶಿವಕುಮಾರ್, ತಮ್ಮ ಕ್ಯಾಬಿನೆಟ್ ಸಚಿವರ ಅಂತಿಮ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದರು. ವಿಮಾನದಲ್ಲೇ ಕುಳಿತು ಆಪ್ತ ಶಾಸಕರ ಪಟ್ಟಿಯನ್ನು ಪರಿಶೀಲಿಸಿರುವ ಅವರು, ಹೈಕಮಾಂಡ್ ನಾಯಕರಿಗೆ ಇದನ್ನೇ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ, ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರದ ಜೊತೆ ಜೊತೆಯಲ್ಲೇ ಸಚಿವರ ಪದಗ್ರಹಣವೂ ನಡೆಯುವ ಸಾಧ್ಯತೆಯಿದೆ.

  • 29 May 2026 02:24 PM (IST)

    ಖಾಸಗಿ ಹೋಟೆಲ್​ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಲಂಚ್

    ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್, ಅವರೊಂದಿಗೆ ಊಟ ಸವಿದಿದ್ದಾರೆ. ಜೊತೆಗೆ ಯತೀಂದ್ರ ಮತ್ತುಕೆ. ಹೆಚ್. ಮುನಿಯಪ್ಪ ಸಹ ಉಪಸ್ಥಿತರಿದ್ದು, ಈ ವೇಳೆ ಮಹತ್ವದ ಚರ್ಚೆಯಾಗುವ ಸಾಧ್ಯತೆಯಿದೆ.

  • 29 May 2026 01:29 PM (IST)

    ನೂತನ ಸಿಎಂ ಪದಗ್ರಹಣದ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ

    ರಾಜ್ಯದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜಂಟಿ ಆಯುಕ್ತರು ಹಾಗೂ ಡಿಸಿಪಿಗಳು ಭಾಗಿಯಾಗಿದ್ದು, ಡಿಪಿಎಆರ್ (DPAR) ಸೂಚನೆ ಮೇರೆಗೆ ಯಾವುದೇ ಸ್ಥಳದಲ್ಲಾದರೂ ಪದಗ್ರಹಣ ನಡೆದರೂ ಕಟ್ಟುನಿಟ್ಟಿನ ಹೈ ಅಲರ್ಟ್ ಭದ್ರತೆ ಒದಗಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.

  • 29 May 2026 01:03 PM (IST)

    ನಾಳೆ ನಾಲ್ಕು ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿ

    ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮರಳಿದ ಬಳಿಕ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಿಗದಿಪಡಿಸಲಾಗಿದೆ. ಭಾನುವಾರ ಸಂಜೆ ನಾಲ್ಕು ಗಂಟೆಗೆ ಸಭೆ ನಡೆಯಲಿದ್ದು, ಸದ್ಯ ದೆಹಲಿಗೆ ಹೋಗಿರುವ ಶಾಸಕರಿಗೆ ನಾಳೆ ಬೆಂಗಳೂರಿಗೆ ಬರುವಂತೆ ತಿಳಿಸಲಾಗಿದೆ.

  • 29 May 2026 12:52 PM (IST)

    ದೆಹಲಿಯಲ್ಲಿ ಸಿದ್ದರಾಮಯ್ಯ ತಂಗಿರುವ ಹೋಟೆಲ್​ಗೆ ಆಗಮಿಸಿದ ಡಿ.ಕೆ.ಶಿವಕುಮಾರ್

    ದೆಹಲಿಯ ಐಟಿಸಿ ಮೌರ್ಯ ಹೋಟೆಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಡಿ.ಕೆ ಶಿವಕುಮಾರ್ ಆಗಮಿಸಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡಲಿದ್ದು, ಹಲವು ವಿಷಯಗಳನ್ನು ಚರ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

  • 29 May 2026 12:36 PM (IST)

    ದೆಹಲಿಯತ್ತ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ದೌಡು

    ರಾಜ್ಯದಲ್ಲಿ ನೂತನ ಸಿಎಂ ಹಾಗೂ ಸಚಿವ ಸಂಪುಟ ರಚನೆಯ ಕಸರತ್ತು ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಾದ ಶ್ರೀನಿವಾಸ್ ಮಾನೆ, ಯಾಸೀರ್ ಅಹ್ಮದ್ ಖಾನ್ ಪಠಾಣ್ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಲು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIAB) ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

  • 29 May 2026 12:30 PM (IST)

    ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ವಾಪಸಾದ ಸಿದ್ದರಾಮಯ್ಯ

    ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಇದೀಗ ನಗರದ ಐಟಿಸಿ ಮೌರ್ಯ ಹೋಟೆಲ್​ಗೆ ತೆರಳಿದ್ದಾರೆ. ಈಗ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಸಿದ್ದರಾಮಯ್ಯ ದೆಹಲಿಯಿಂದ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ.

  • 29 May 2026 12:14 PM (IST)

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇಂದೇ ನಿರ್ಣಯ ಸಾಧ್ಯತೆ

    ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಇಂದೇ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ರಿಂದ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ. ತಮ್ಮನ್ನು ಕೆಪಿಸಿಸಿಗೆ ಪರಿಗಣಿಸಲು ಆಗ್ರಹಿಸಿರುವ ಸತೀಶ್ ಜಾರಕಿಹೊಳಿ, ಸಿಎಂ ಭೇಟಿ ವೇಳೆ ತಮ್ಮ ಹೆಸರು ಶಿಫಾರಸು ಮಾಡುವಂತೆ ಕೋರಿದ್ದಾರೆ.

  • 29 May 2026 12:11 PM (IST)

    ಡಿಸಿಎಂ ಸ್ಥಾನ ಪಡೆಯಲು ಕಾಂಗ್ರೆಸ್​ ನಾಯಕರಲ್ಲಿ ಫೈಟ್ ಶುರು

    ಡಿಸಿಎಂ ಸ್ಥಾನ ಅಲಂಕರಿಸಲು ಶಾಸಕರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಕೈ ನಾಯಕರು ಈಗಾಗಲೇ ಸಮುದಾಯದ ಶಾಸಕರ ಬೆಂಬಲ ಪಡೆಯಲು ಮುಂದಾಗಿದ್ದಾರೆ. ನಿನ್ನೆ ಲಿಂಗಾಯತ ಸಮಯದಾಯದ ಶಾಸಕರ ಜೊತೆ ಈಶ್ವರ ಖಂಡ್ರೆ ಸಭೆ ನಡೆಸಿದ್ದು, ಡಿಸಿಎಂ ಸ್ಥಾನ ಪಡೆಯಲು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

  • 29 May 2026 11:46 AM (IST)

    ಕೆ.ಸಿ.ವೇಣುಗೋಪಾಲ್​ಗೆ ಧನ್ಯವಾದ ಸಲ್ಲಿಸಿದ ಸಿದ್ದರಾಮಯ್ಯ

    ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ದೆಹಲಿಯ ಲೋದಿ ರಸ್ತೆಯಲ್ಲಿರುವ ಕೆ.ಸಿ.ವೇಣುಗೋಪಾಲ್ ನಿವಾಸಕ್ಕೆ ತೆರಳಿದ್ದಾರೆ. ವೇಣುಗೋಪಾಲರನ್ನು ಭೇಟಿಯಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

  • 29 May 2026 11:20 AM (IST)

    ಸಿದ್ದರಾಮಯ್ಯ ರಾಜೀನಾಮೆ ಕುರಿತು ಡಿ.ಕೆ.ಶಿವಕುಮಾರ್ ಭಾವನಾತ್ಮಕ ಎಕ್ಸ್ (X) ಪೋಸ್ಟ್

    “ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡುತ್ತಾನೆ. ಅದಕ್ಕೆ ಸಿದ್ದರಾಮಯ್ಯನವರೇ ಸಾಕ್ಷಿ. ಹಳ್ಳಿಯಿಂದ ಬಂದು ಸಾಮಾಜಿಕ ನ್ಯಾಯದ ಹರಿಕಾರರಾಗಿ, ಯಶಸ್ವಿ ಸಿಎಂ ಆಗಿ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಕೆಪಿಸಿಸಿ ಅಧ್ಯಕ್ಷನಾದಾಗಿನಿಂದ ಅವರು ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದು ನನ್ನ ಭಾಗ್ಯ. ಮುಂದೆಯೂ ಅವರ ಅನುಭವದ ಮಾರ್ಗದರ್ಶನ ನಮಗೆ ಸಿಗಲಿ” ಎಂದು ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

  • 29 May 2026 10:56 AM (IST)

    ನೂತನ ಸಂಪುಟ ಕಸರತ್ತು ಚುರುಕು

    ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ, ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಂಪುಟ ರಚನೆಗೆ ಚಟುವಟಿಕೆಗಳು ತೀವ್ರಗೊಂಡಿವೆ. ಹಳೆಯ ಸಂಪುಟದಲ್ಲಿದ್ದ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಸುಮಾರು 11 ರಿಂದ 13 ಹಿರಿಯ ಶಾಸಕರು ಹೈಕಮಾಂಡ್ ಒಪ್ಪಿಗೆಯೊಂದಿಗೆ ಮತ್ತೊಮ್ಮೆ ಸಚಿವರಾಗಿ ನೂತನ ಸಂಪುಟ ಸೇರುವ ಭಾರಿ ವಿಶ್ವಾಸದಲ್ಲಿದ್ದಾರೆ.

  • 29 May 2026 10:41 AM (IST)

    ನೂತನ ಸಚಿವ ಸಂಪುಟ ಸೇರಿಸಲು ರಾಜೇಂದ್ರ ರಾಜಣ್ಣ ಕಸರತ್ತು

    ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ನೂತನ ಸಂಪುಟ ಸೇರಲು ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಸಿದ್ದರಾಮಯ್ಯ ಬಣದ ಮಾಜಿ ಸಚಿವ ಕೆ.ಎನ್. ರಾಜಣ್ಣ ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸಚಿವ ಸ್ಥಾನಕ್ಕಾಗಿ ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಯೂತ್ ಕಾಂಗ್ರೆಸ್ ಅನುಭವ ಹೊಂದಿರುವ ಅವರು, ಎಸ್‌ಟಿ (ST) ಕೋಟಾದಡಿ ಸಚಿವಗಿರಿ ಪಡೆಯಲು ಇಂದು ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರು ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭಾರಿ ಲಾಬಿ ನಡೆಸಲಿದ್ದಾರೆ.

  • 29 May 2026 10:25 AM (IST)

    ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

    ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯರನ್ನು ಭೇಟಿ ಮಾಡಿದ ಬಳಿಕ, ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

  • 29 May 2026 10:11 AM (IST)

    ರಾಜ್ಯ ಸಚಿವ ಸಂಪುಟ ವಿಸರ್ಜನೆ ಹಿನ್ನೆಲೆ ಸಚಿವರ ಸರ್ಕಾರಿ ವಾಹನಗಳು ವಾಪಸ್

    ರಾಜ್ಯ ಸಚಿವ ಸಂಪುಟ ವಿಸರ್ಜನೆಗೊಂಡಿರುವ ಬಗ್ಗೆ ಗೆಜೆಟ್ ಅಧಿಸೂಚನೆ ಪ್ರಕಟವಾಗಿದ್ದು,  ಸಚಿವರಿಗೆ ಹಂಚಿಕೆಯಾಗಿದ್ದ ಸರ್ಕಾರಿ ವಾಹನಗಳನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಹೀಗಾಗಿ ಸರ್ಕಾರಿ ಮಾಜಿ ಶಾಸಕರೆಲ್ಲರೂ ಖಾಸಗಿ ವಾಹನಗಳಿಗೆ ಶಿಫ್ಟ್ ಆಗಿದ್ದಾರೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಹಾಕಿದ್ದ ಸರ್ಕಾರಿ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ.

  • 29 May 2026 09:20 AM (IST)

    ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ

    ರಾಜೀನಾಮೆ ಸಲ್ಲಿಸಿ ಇಂದು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದಾರೆ. ಸೋನಿಯಾ ಜೊತೆ ರಾಹುಲ್ ಗಾಂಧಿಯನ್ನೂ ಭೇಟಿ ಮಾಡಿದ ಸಿದ್ದರಾಮಯ್ಯ, ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

  • 29 May 2026 09:17 AM (IST)

    ನಾಳೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ

    ನಾಳೆ (ಮೇ 30) ಶಾಸಕಾಂಗದ ಸಭೆ ನಡೆಯಲಿದ್ದು, CLP ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದೆ. ಸದ್ಯಕ್ಕೆ ಸಭೆಯ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಮಾಹಿತಿ ನೀಡಲಾಗಿದ್ದು, ಶಾಸಕರು ಬೆಂಗಳೂರಿನಲ್ಲಿಯೇ ಇರುವಂತೆ ಸೂಚಿಸಲಾಗಿದೆ.

ಬೆಂಗಳೂರು, ಮೇ 29: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ನಿನ್ನೆ (ಮೇ 28) ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ್ದು, ಇಂದು ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದು, ಅಲ್ಲಿಂದ ವಾಪಸಾದ ನಂತರ ಸಿಎಲ್​​ಪಿ ಸಭೆ ನಡೆಯಲಿದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮರಳಿ ಐಟಿಸಿ ಮೌರ್ಯ ಹೋಟೆಲ್​ಗೆ ಆಗಮಿಸಿದ ಸಿದ್ದರಾಮಯ್ಯ ಜೊತೆ ಡಿ ಕೆ ಶಿವಕುಮಾರ್ ಜೊತೆ ಚರ್ಚೆ ನಡೆಸಲಿದ್ದಾರೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - May 29,2026 9:15 AM

Follow Us