ಸಿದ್ದರಾಮೋತ್ಸವ ರೀತಿ ಪರಮೋತ್ಸವ: ಹೈಕಮಾಂಡ್ಗೆ ಪರಮೇಶ್ವರ್ ಎಚ್ಚರಿಕೆ ಸಂದೇಶ ರವಾನೆ
2022ರಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ ಬಲಕ್ಕೆ ಸಾಕ್ಷಿಯಾಗಿತ್ತು. ಇದೀಗ, ಮೈಸೂರಿನಲ್ಲಿ ಪರಮೋತ್ಸವ ಮಾಡಿದ್ದು, ದಲಿತ ನಾಯಕ ಡಾ. ಜಿ ಪರಮೇಶ್ವರ್ ಹೈಕಮಾಂಡ್ಗೆ ಸಂದೇಶ ರವಾನಿಸಲಾ? ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಈ ಪರಮೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೈಕಮಾಂಡ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು, ಆಗಸ್ಟ್ 25: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ 75ನೇ ಹುಟ್ಟು ಹಬ್ಬಹಬ್ಬ ಹಿನ್ನೆಲೆಯಲ್ಲಿ 2022ರಲ್ಲಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddaramotsava) ಕಾರ್ಯಕ್ರಮ ನಡೆದಿತ್ತು. ಇದರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಪರಮೋತ್ಸವ ನಡೆದಿದ್ದು, ಅಚ್ಚರಿಗೆ ಕಾರಣವಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parameshwara) ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಅಭಿಮಾನಿಗಳು ಮೈಸೂರಿನಲ್ಲಿ ಪರಮೋತ್ಸವ ಸಮಾವೇಶ ಮಾಡಿದರು. ಈ ಪರಮೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಿ. ಪರಮೇಶ್ವರ್ ದಲಿತರು ಮುಖ್ಯಮಂತ್ರಿಯಾಗಬೇಕು ವಿಚಾರವಾಗಿ ಹೈಕಮಾಂಡ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಒಂದು ಸಮುದಾಯ ನಿಮ್ಮ ಜತೆ ನಿಂತಿದೆ, ಮೋಸ ಮಾಡಬೇಡಿ. ಅವರಿಗೆ ಮೋಸ ಮಾಡಿದರೆ ಬುದ್ಧಿ ಕಲಿಸುತ್ತಾರೆ ಎಂದು ಸ್ವಾಮೀಜಿ ಹೇಳಿದ್ದಾರೆ. ಸ್ವಾಮೀಜಿ ಹೇಳಿರುವ ಈ ಮಾತು ನಿಜ. ದಲಿತ ಸಮುದಾಯಕ್ಕೆ ಅವಕಾಶ ಕೊಡಿ ಅನ್ನುವ ಸ್ಥಿತಿ ಬಂದಿದೆ. ಹೃದಯ ಶ್ರೀಮಂತಿಕೆ ನಿಮಗೆ ಬೇಡ್ವಾ. ಸಮಾಜಕ್ಕೆ ಅನ್ಯಾಯವಾದಾಗ ಪಾಠ ಕಲಿಸಲು ಮತದಾನ ಎಂಬ ಅಸ್ತ್ರ ಇದೆ ನೆನಪಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಜ್ಜಾಗಿ. ಹೋರಾಟ ಮಾಡಿದರೇ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಅಪಮಾನಿಸಿದಂತೆ ಎಂದು ಪರೋಕ್ಷವಾಗಿ ಹೇಳಿದರು.
ಪರಮೋತ್ಸವ ನಡೆಸಲು ಆಯೋಜಕರಿಗೆ ಅನೇಕ ವಿಘ್ನ ಬಂದ್ವು. ಆದರೂ ಪರಮೋತ್ಸವ ಆಯೋಜಿಸಿದ್ದಾರೆ. ವಿದೇಶದಲ್ಲಿ ಭಾರತದಲ್ಲಿನ ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತಾರೆ. ಪ್ರಸ್ತುತ ಭಾರತದಲ್ಲಿ ಅಸ್ಪೃಶ್ಯತೆ ಇದೆ. ಯಾವ ದೇಶದಲ್ಲೂ ಇಲ್ಲದ ಅಸ್ಪೃಶ್ಯತೆ ನಮ್ಮ ದೇಶದಲ್ಲಿದೆ. ಭಾರತದಲ್ಲಿ ದಲಿತರಿಗೆ ಸಮಾಧಾನದ ತೃಪ್ತಿ ಬದುಕು ಸಿಕ್ಕಿಲ್ಲ. ಸಮಾನತೆ ಇಲ್ಲದ ಕಾರಣ ನಮಗೆ ಮೀಸಲಾತಿ ಬೇಕೇ ಬೇಕು. ಸಮಾನತೆ ಸ್ವಾಭಿಮಾನದ ಬದುಕಿಗೆ ಇನ್ನೆಷ್ಟು ಕಾಯಬೇಕು? ಎಂದು ಪ್ರಶ್ನಿಸಿದರು.
ಪರಮೇಶ್ವರ್ ಸಿಎಂ ಆಗಬೇಕು: ತನ್ವೀರ್ ಸೇಠ್ ಪರೋಕ್ಷ ಹೇಳಿಕೆ
ಪರಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ತನ್ವೀರ್ ಸೇಠ್ ಡಾ. ಪರಮೇಶ್ವರ್ ಸಿಎಂ ಆಗಬೇಕು ಎಂದು ಪರೋಕ್ಷವಾಗಿ ಹೇಳಿದರು. ಎತ್ತರದ ಸ್ಥಾನದಲ್ಲಿ ಡಾ.ಪರಮೇಶ್ವರ್ರನ್ನು ನೋಡುವ ಆಸೆ ಇದೆ. ಆದರೆ, ನಮ್ಮ ಆಸೆ ಆಸೆಯಾಗಿಯೇ ಉಳಿದಿದೆ. ರಾಜಕೀಯದಲ್ಲಿ ಮೇಲೆ ಬರಲು ಬಹಳ ಜನ ತುಳಿದಿದ್ದಾರೆ. ಆದರೆ, ಡಾ.ಪರಮೇಶ್ವರ್ ಯಾವತ್ತಿಗೂ ಆ ಕೆಲಸ ಮಾಡಲಿಲ್ಲ. ತಮ್ಮ ನೆರಳಿನಲ್ಲಿ ಬಹಳ ಜನರನ್ನು ಪರಮೇಶ್ವರ್ ಬೆಳೆಸಿದ್ದಾರೆ. ಪರಮೇಶ್ವರ್ ಎದ್ದು ಗಟ್ಟಿಯಾಗಿ ನಿಂತರೆ ಎತ್ತರಕ್ಕೆ ಹೋಗುತ್ತಾರೆ. ಡಾ.ಜಿ.ಪರಮೇಶ್ವರ್ ಅವರ ಜೊತೆಗೆ ನಾವು ಹೆಜ್ಜೆ ಹಾಕುತ್ತೇವೆ ಎಂದರು.
ಇದನ್ನೂ ಓದಿ: ಸಿಎಂ ಎದುರೇ ಕೈ ಶಾಸಕನ ಜಾತಿ ಸರ್ಟಿಫಿಕೇಟ್ ಬಗ್ಗೆ ಪ್ರಸ್ತಾಪಿಸಿದ ಸಚಿವ
ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರು ಕೂತಿದ್ದರೂ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಲಾಭಿ ನಡೆಯುತ್ತಲೇ ಇದೆ. ಅಧಿಕಾರ ಹಂಚಿಕೆ, ಸೆಪ್ಟೆಂಬರ್ ಕ್ರಾಂತಿ ನಡೆಯುತ್ತೆ ಎಂಬ ಆಸೆಯೊಂದಿಗೆ ಹಲವರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆ ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Mon, 25 August 25



