Reservation: ಮೀಸಲಾತಿ ಎಂಬ ಬೆಂಕಿ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸರಸ
Political Analysis: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಾಳಯದ ಜಾತಿ ಲೆಕ್ಕಾಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಬುಡಮೇಲು ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರದ ಸಾಧನೆಗಳೇನು ಎಂದು ಪದೇಪದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸುತ್ತಲೇ ಇರುತ್ತಾರೆ. ಇದುವರೆಗೂ ಬಿಜೆಪಿಗರು ಹೊರ ಪ್ರಪಂಚಕ್ಕೆ ಏನೇ ಹೇಳಿಕೊಂಡರು ಒಳಗೊಳಗೆ ಮಾತ್ರ ಅಳುಕು ಇದ್ದೇ ಇತ್ತು. ಬೃಹತ್ ಎಂಬಂಥ ಮೈಲಿಗಲ್ಲು ಸಾಧನೆ ಬಿಜೆಪಿ ಬಳಿ ಇರಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಂದೇ ಏಟಿಗೆ ಸಾಮಾಜಿಕ ನ್ಯಾಯದ ಚಾಂಪಿಯನ್ಗಳು ನಾವೇ ಎಂದು ಓಡಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಪಾಳಯದ ಜಾತಿ ಲೆಕ್ಕಾಚಾರವನ್ನು ಬುಡಮೇಲು ಮಾಡಿದ್ದಾರೆ.
ವಿಶ್ಲೇಷಣೆ: ಪ್ರಮೋದ್ ಶಾಸ್ತ್ರಿ
ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ 17 ಕ್ಕೆ ಏರಿಸುವ ಮೂಲಕ ದೊಡ್ಡದೊಂದು ಸಮುದಾಯದ ಮನವನ್ನು ಸದ್ಯದ ಮಟ್ಟಿಗೆ ಗೆಲ್ಲುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ಶೇ 18ರಷ್ಟು ಎಸ್ಸಿ ಹಾಗೂ ಎಸ್ಟಿ ಸಮುದಾಯದವರಿದ್ದಾರೆ ಎಂಬ ಲೆಕ್ಕಾಚಾರವಿದೆ. ಇದನ್ನೇ ನಂಬುವುದಾದರೆ, ಬೊಮ್ಮಾಯಿ ಚುನಾವಣಾ ಪೂರ್ವ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಮೂಲಕವೇ ತಮ್ಮ ಖಾತೆ ತೆರೆದಿದ್ದಾರೆ.
ಆದರೆ ಈ ಖಾತೆಯೇ ಮುಂದಿನ ದಿನಗಳಲ್ಲಿ ದೊಡ್ಡ ಕ್ಯಾತೆಯಾಗುತ್ತಾ ಎನ್ನುವ ಆತಂಕವೂ ಸಹಜವಾಗಿಯೇ ಬಿಜೆಪಿ ನಾಯಕರಲ್ಲಿದೆ. ಕಾರಣ ಈ ವಿಚಾರದಲ್ಲಿ ಸಣ್ಣದೊಂದು ಪ್ರಮಾದವಾದರೂ ಮೀಸಲಾತಿ ಎಂಬ ಬೆಂಕಿಯ ಕಿಡಿಯು ಕೆನ್ನಾಲಿಗೆಯಾಗಿ ಸರ್ಕಾರವನ್ನು ಸುತ್ತುವರಿಯಬಹುದು. ಎಸ್ಸಿ ಎಸ್ಟಿ ಮೀಸಲಾತಿ ನೀಡುತ್ತಿದ್ದಂತೆ ಈಗಾಗಲೇ ಪಂಚಮಸಾಲಿ ಸಮುದಾಯ ಸ್ವಾಮಿಜಿಗಳು ಸಹ ದನಿ ಎತ್ತಿದ್ದಾರೆ. ಅತ್ತ ಜಯಮೃತ್ಯುಂಜಯ ಸ್ವಾಮಿಜಿ ಖುದ್ದು ಮುಖ್ಯಮಂತ್ರಿಗಳೇ ನಮಗೆ ಮೋಸ ಮಾಡಿದರು ಎಂದು ಅದಾಗಲೇ ಬೆಂಕಿ ಕಾರುತ್ತಿದ್ದರೆ, ಇತ್ತ ಅದೇ ಸಮುದಾಯದ ವಚನಾನಂದ ಸ್ವಾಮಿಜಿ ಸರ್ಕಾರವು ಪಂಚಮಸಾಲಿಗಳ ಮೀಸಲಾತಿಯನ್ನೂ ಹೆಚ್ಚಿಸುತ್ತದೆ ಎಂಬ ವಿಶ್ವಾಸ ನಂಬಿಕೆ ಇದೆ ಎನ್ನುವ ಮೂಲಕ ಮೆಲ್ಲುಸಿರು ಬಿಟ್ಟಿದ್ದಾರೆ. ಅಲ್ಲಿಗೆ ಪಂಚಮಸಾಲಿ ಸಮುದಾಯ ಸುಮ್ಮನೆ ಕೂರುವುದಿಲ್ಲ ಎಂಬುದು ದಿಟ.
ಪರಿಶಿಷ್ಟರಿಗೆ ಮೀಸಲಾತಿ ಘೋಷಣೆಯಾಗಿ ಗಂಟೆ ಕಳೆಯುವ ಮೊದಲೇ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸಹ ಮತ್ತೆ ಗುಟುರು ಹಾಕಿದ್ದಾರೆ. ಕುರುಬರನ್ನು ಪರಿಶಿಷ್ಟ ಪಂಗಡದವರಿಗೆ ಸೇರಿಸಬೇಕು. ಇದಕ್ಕಾಗಿ ನಮ್ಮ ಹೋರಾಟ ಮುಂದುವರಿದಿದೆ. ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಜಯ ಖಂಡಿತ ಸಿಗುತ್ತದೆ ಎಂಬುದು ಈಶ್ವರಪ್ಪ ಅವರ ಮಾತು. ಆದಾಗಲೇ ತಣ್ಣನೆಯ ಹೊರಾಟವೊಂದು ಕಾವಿಡಲು ಶುರು ಮಾಡಿದೆ.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಕೂಗಿನ ನಡವೆ ಮತ್ತೊಂದು ಮೀಸಲಾತಿ ಹೆಚ್ಚಳದ ಕೂಗು ಅಷ್ಟಾಗಿ ಹೊರ ಜಗತ್ತಿಗೆ ಕೇಳಲೇ ಇಲ್ಲ. ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರವರ್ಗ 1ರಲ್ಲಿರುವ 43 ಜಾತಿಗಳಿಗೆ ನೀಡಿರುವ ಮೀಸಲಾತಿ 1994ರಲ್ಲಿ ನೀಡಿದ್ದು. ಅಲ್ಲಿಂದ ಇಲ್ಲಿಗೆ ಈ ಜಾತಿಗಳ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಪ್ರವರ್ಗ 1 ರಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿಯಂತಹ ಸಮುದಾಯಗಳು ಇನ್ನೂ ಶಿಕ್ಷಣವನ್ನೇ ಕಂಡಿಲ್ಲ. ಸರ್ಕಾರಿ ಉದ್ಯೋಗದಲ್ಲಿ ಇಲ್ಲವೇ ಇಲ್ಲ ಎಂಬಷ್ಟರ ಮಟ್ಟಿಗೆ ಪ್ರವರ್ಗ 1ರಲ್ಲಿರುವ ಅನೇಕ ಜಾತಿ ಹಾಗೂ ಬುಡಕಟ್ಟುಗಳಿಗೆ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ ಪ್ರವರ್ಗ 1ರ ಶೇ 4ರಷ್ಟು ಮೀಸಲಾತಿಯನ್ನು ಕನಿಷ್ಠ 7ಕ್ಕೆ ಏರಿಸಬೇಕು ಎಂದು ಮಹಾಸಭಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದು, ಅದಾಗಲೇ ತನ್ನ ಹಕ್ಕು ಮಂಡಿಸಿದೆ.
ಇನ್ನೊಂದೆಡೆ ವಿಶ್ವಕರ್ಮ ಸಮಾಜ ಸಹ ಈಗ ಮೀಸಲಾತಿಯ ಬೆಂಕಿಯಾಟಕ್ಕೆ ಎಂಟ್ರಿ ಕೊಟ್ಟಿದೆ. ಇದೇ ಜನವರಿಯಿಂದ ಬೀದರ್ನಿಂದ ಚಾಮರಾಜನಗರದವರೆಗೆ ಒಟ್ಟು 230ಕ್ಕೂ ಹೆಚ್ಚು ಹೊಬಳಿ ಮಟ್ಟದಲ್ಲಿ ಸಂಘಟನೆ ಶುರು ಮಾಡಿದ್ದು, ದೊಡ್ಡದೊಂದು ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ವಿಶ್ವಕರ್ಮ ಸಮಾಜವನ್ನು ಎಸ್ಟಿಗೆ ಸೇರಿಸ ಬೇಕು ಎಂಬುದು ಈ ಸಮುದಾಯದ ಬೇಡಿಕೆ. ಅಲ್ಲಿಗೆ ಮತ್ತೊಂದು ಹೋರಾಟದ ಅಲೆ ಸುರುಳಿ ಸುತ್ತಿಕೊಳ್ಳುತ್ತಿದೆ.
ಈ ಕಾರಣಕ್ಕಾಗಿಯೇ ಹೇಳಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೀಸಲಾತಿ ಎಂಬ ಬೆಂಕಿಯ ಜೊತೆ ಸರಸವಾಡಿ, ತಮ್ಮ ರಾಜಕೀಯ ಭವಿಷ್ಯವನ್ನ ಉಜ್ವಲಗೊಳಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಸಣ್ಣದೊಂದು ತಪ್ಪು ನಡೆ, ಬೊಮ್ಮಾಯಿ ಅವರನ್ನು ಬೆಂಕಿಯ ಕೆನ್ನಾಲಿಗೆಯ ಮಧ್ಯದಲ್ಲಿ ತಂದು ನಿಲ್ಲಿಸ ಬಹುದು. ಈಗ ಪರಿಶಿಷ್ಟರಿಗೆ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ನೀಡಲು ಮುಂದಾದರು, ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದರೆ, ಸರ್ಕಾರಿ ಆದೇಶದ ಉದ್ದೇಶವೇ ಮಣ್ಣುಪಾಲಾಗಲಿದೆ. ಆಗ ಎಸ್ಸಿ ಎಸ್ಟಿ ಸದಾಯಗಳೇ ಬಿಜೆಪಿ ವಿರುದ್ದ ತಿರುಗಿ ಬಿದ್ದರೆ ಅಚ್ಚರಿಯೇನಿಲ್ಲ. ಇನ್ನು ಪರಿಶಿಷ್ಟರ ಮೀಸಲಾತಿ ಹೆಚ್ಚಳ ಖಂಡಿತವಾಗಿಯೂ ಬಡ್ತಿ ಮೀಸಲಾತಿ ಮೇಲೆಯೂ ಪರಿಣಾಮ ಬೀರಲಿದೆ.
ಈಗಾಗಲೇ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ಸರ್ಕಾರಿ ನೌಕರರು, ಅಹಿಂಸಾ ಎಂಬ ಸಂಘಟನೆ ಕಟ್ಟಿಕೊಂಡು, ಪರಿಶಿಷ್ಟರ ಬಡ್ತಿ ಮೀಸಲಾತಿಯನ್ನು ಪ್ರಶ್ನಿಸುತ್ತಿದ್ದಾರೆ. ಈಗ ಮಾಡಿರುವ ಮೀಸಲಾತಿ ಹೆಚ್ಚಳ ಖಂಡಿತವಾಗಿಯೂ ಈ ವರ್ಗದ ಕಣ್ಣು ಕೆಂಪಾಗಿಸಿದೆ. ಇದರ ಜೊತೆ ಪಂಚಮಸಾಲಿಗಳು ನಮಗೇಕಿಲ್ಲ ಮೀಸಲಾತಿ ಎಂಬ ಘೋಷಣೆಯೊಂದು ವಿಧಾನ ಸೌಧದ ಮಟ್ಟಿಲ ಬಳಿ ಬಂದು ಕೂತರೆ ಸಿಎಂ ಬೊಮ್ಮಾಯಿ ತಲೆನೋವು ಹೆಚ್ಚಾಗಬಹುದು. ಅತ್ತ ವಿಶ್ವಕರ್ಮರು ಹಾಗೂ ಕುರುಬರು ಎಸ್ಟಿ ಕೇಳಿದರೂ ಸದ್ಯಕ್ಕೆ ಸಿಗುವುದಿಲ್ಲ. ಆದರೆ ಅದರ ರಾಜಕೀಯ ಪರಿಣಾಮಗಳು ಮಾತ್ರ ಖಂಡಿತವಾಗಿಯೂ ಮುಖ್ಯಮಂತ್ರಿಗಳ ನಿದ್ದೆಗೆಡಿಸಬಹುದು. ಇದೆಲ್ಲವನ್ನು ನೋಡಿದಾಗ ‘ಚಿಂಗಾರಿ ಕಾ ಖೇಲ್ ಬಹುತ್ ಬೂರಾ ಹೋತಾ ಹೇ’ (ಬೆಂಕಿಯೊಡನೆ ಸರಸದ ಪರಿಣಾಮ ಕೆಟ್ಟದಾಗಿರುತ್ತೆ) ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಾತು ಮತ್ತೊಮ್ಮೆ ನೆನಪಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಆಲೋಚನೆಯಲ್ಲಿ ಅದೇನಡಗಿದೆಯೋ? ಅದ್ಯಾವ ಲೆಕ್ಕಾಚಾರವೋ?
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ.ಎಸ್.ದ್ವಾರಕಾನಾಥ್, ‘ಸರ್ಕಾರವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸುವುದು ತಪ್ಪಲ್ಲ. ಆದರೆ ಇದು ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿದೆಯೇ ಎಂಬುದೇ ಪ್ರಶ್ನೆ. ಈ ಆದೇಶವನ್ನು ಮುಂದಿನ ದಿನಗಳಲ್ಲಿ ನ್ಯಾಯಾಂಗ ಪ್ರಶ್ನೆ ಮಾಡಿದರೆ, ಸರ್ಕಾರದ ಮೀಸಲಾತಿ ಹೆಚ್ಚಳದ ಉದ್ದೇಶವೇ ಬುಡಮೇಲಾಗುತ್ತದೆ’ ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಪ್ರಸ್ತುತ ಪರಿಶಿಷ್ಟ ಜಾತಿ ಶೇ 15, ಪರಿಶಿಷ್ಟ ಪಂಗಡ ಶೇ 3, ಇತರ ಹಿಂದುಳಿದ ವರ್ಗಗಳು ಶೇ 32, ಆರ್ಥಿಕವಾಗಿ ಹಿಂದುಳಿದಿರುವರು ಶೇ 10ರ ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಪ್ರಮೋದ್ ಶಾಸ್ತ್ರಿ, ಪೊಲಿಟಕಲ್ ಬ್ಯೂರೋ ಚೀಫ್, ಟಿವಿನೈನ್
Published On - 3:10 pm, Sun, 9 October 22