ರಾಜ್ಯಸಭಾ ಚುನಾವಣೆ: ರೇವಣ್ಣ ಮತ ಸಿಂಧುಗೊಳಿಸಿದ ಚುನಾವಣಾ ಆಯೋಗ, 2 ಗಂಟೆ ತಡವಾಗಿ ಮತ ಎಣಿಕೆ ಆರಂಭ
ಕೇಂದ್ರ ಆಯೋಗದ ಸೂಚನೆಗೆ ಕಾಯುತ್ತಿದ್ದ ರಾಜ್ಯದ ಅಧಿಕಾರಿಗಳು ಈ ಸೂಚನೆ ಬಂದ ನಂತರವೇ ಮತ ಎಣಿಕೆ ಆರಂಭಿಸಿದರು.
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ರೇವಣ್ಣ (HD Revanna) ಚಲಾಯಿಸಿದ ಮತವನ್ನು ಸಿಂಧುಗೊಳಿಸಲು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಕೇಂದ್ರ ಆಯೋಗದ ಸೂಚನೆಗೆ ಕಾಯುತ್ತಿದ್ದ ರಾಜ್ಯದ ಅಧಿಕಾರಿಗಳು ಈ ಸೂಚನೆ ಬಂದ ನಂತರವೇ ಮತ ಎಣಿಕೆ ಆರಂಭಿಸಿದರು. ಸುಮಾರು 2 ಗಂಟೆ ತಡವಾಗಿ ಮತ ಎಣಿಕೆ ಆರಂಭವಾಯಿತು. ಕರ್ನಾಟಕದ ಎಚ್.ಡಿ.ರೇವಣ್ಣ ಮತ್ತು ರಾಜಸ್ಥಾನ, ಹರಿಯಾಣದ ಕೆಲ ಸದಸ್ಯರ ವಿರುದ್ಧ ಬಂದಿದ್ದ ದೂರುಗಳನ್ನು ಪೂರ್ಣ ಪ್ರಮಾಣದ ಸದಸ್ಯರ ಸಭೆ ನಡೆಸಿ, ಚುನಾವಣಾ ಆಯೋಗ ಪರಿಶೀಲಿಸಿತು. ನಂತರ ತೀರ್ಮಾನ ಪ್ರಕಟಿಸಿತು.
ರೇವಣ್ಣ ಚಲಾಯಿಸಿದ ಮತವನ್ನು ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಆದರೆ ಆಯೋಗವು ತೀರ್ಮಾನ ಕೈಗೊಳ್ಳುವುದು ತಡವಾದ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆಯ ಮತ ಎಣಿಕೆ ತಡವಾಯಿತು. ಕೇಂದ್ರ ಚುನಾವಣಾ ಆಯೋಗದ ಮಾಹಿತಿಗಾಗಿ ಚುನಾವಣಾಧಿಕಾರಿ ಕಾಯುತ್ತಿದ್ದರು. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಮತ ಎಣಿಕೆ ನಡೆಯಿತು.
ರೇವಣ್ಣ ಚಲಾಯಿಸಿರುವ ಮತವನ್ನು ಅಸಿಂಧುಗೊಳಿಸಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಮನವಿ ಮಾಡಿತ್ತು. ಮತದಾನದ ವಿಡಿಯೊ ಪರಿಶೀಲಿಸಿದ್ದ ಅವರು, ರೇವಣ್ಣಗೆ ಕ್ಲೀನ್ಚಿಟ್ ಕೊಟ್ಟಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಮೇಲ್ಮನವಿ ಸಲ್ಲಿಸಿ, ಚುನಾವಣಾಧಿಕಾರಿ ಆದೇಶ ರದ್ದುಗೊಳಿಸಲು ಮನವಿ ಮಾಡಿದ್ದರು.
ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ವಿಧಾನಸೌಧಕ್ಕೆ ಬಂದಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಆತುರ ತೋರಿದ ರೇವಣ್ಣ, ವಿವಾದಕ್ಕೆ ಕಾರಣ
ರಾಜ್ಯಸಭೆ ಚುನಾವಣೆಯಲ್ಲಿ ರೇವಣ್ಣ ಮತದಾನದ ವೇಳೆ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಮೊದಲ ಮತ ಹಾಕಲು ಸರದಿ ಸಾಲಿನಲ್ಲಿ ಮುಂದೆ ನಿಂತಿದ್ದ ಅಭಯ್ ಪಾಟೀಲ್ ಅವರನ್ನು ಪಕ್ಕಕ್ಕೆ ಸರಿಸಿದ ರೇವಣ್ಣ ಮತ ಹಾಕಲು ಮುಂದೆ ಬಂದರು. ಕೌಟುಂಬಿಕ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಹಿನ್ನಲೆಯಲ್ಲಿ ಅಭಯ್ ಪಾಟೀಲ್ ಸರದಿಯಲ್ಲಿ ಮುಂದೆ ನಿಂತಿದ್ದರು. ಮೂರು ಪಕ್ಷಗಳಿಗೆಂದು ಸೂಚಿಸಿದ್ದ ಪ್ರತ್ಯೇಕ ಕಂಪಾರ್ಟ್ಮೆಂಟ್ಗಳಲ್ಲಿ ಕುಳಿತಿದ್ದ ಪೋಲ್ ಏಜೆಂಟ್ಗಳು ಇದನ್ನು ಗಮನಿಸಿದರು.
ಮೊದಲ ಕಂಪಾರ್ಟ್ಮೆಂಟ್ನಲ್ಲಿ ಬಿಜೆಪಿಯ ಸಿ.ಟಿ.ರವಿ, 2ನೇ ಕಂಪಾರ್ಟ್ಮೆಂಟ್ನಲ್ಲಿ ಡಿ.ಕೆ.ಶಿವಕುಮಾರ್ ಇದ್ದರು. 3ನೇ ಕಂಪಾರ್ಟ್ಮೆಂಟ್ನಲ್ಲಿ ಪುಟ್ಟರಾಜುಗೆ ಕಂಪಾರ್ಟ್ಮೆಂಟ್ ಹಂಚಿಕೆ ಮಾಡಲಾಗಿತ್ತು. ಮತಪತ್ರ ಹಿಡಿದು ಮತ ಚಲಾವಣೆ ಮಾಡಲು ಪೋಲ್ ಏಜೆಂಟ್ ಕಂಪಾರ್ಟ್ಮೆಂಟ್ ಎದುರು ರೇವಣ್ಣ ಮೆಲ್ಲಗೆ ಸಾಗುತ್ತಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಎದುರು ಬಂದಾಗ, ‘ಏನ್ ರೇವಣ್ಣಾ’ ಎಂದು ಡಿಕೆಶಿ ಮಾತಿಗೆ ಎಳೆದರು. ಆಗ ಡಿ.ಕೆ.ಶಿವಕುಮಾರ್ ಕಡೆಗೆ ತಿರುಗಿ ಕೈಲಿ ಹಿಡಿದಿದ್ದ ಮತಪತ್ರದೊಂದಿಗೆ ವೋಟು ಎಂದು ರೇವಣ್ಣ ಹೇಳಿದರು.
‘ರೇವಣ್ಣ ನನಗೆ ಮತ ತೋರಿಸಿದ್ರು, ನನಗೆ ಮತ ತೋರಿಸಿದ್ರು’ ಎಂದು ಡಿ.ಕೆ.ಶಿವಕುಮಾರ್ ವಾದ ಆರಂಭಿಸಿದರು. ಶಿವಕುಮಾರ್ ವರ್ತನೆಯಿಂದ ರೇವಣ್ಣ ಕಂಗಾಲಾದರು. ಶಿವಕುಮಾರ್ಗೆ ಪ್ರಕಾಶ್ ರಾಥೋಡ್ ಸಹ ದನಿಗೂಡಿಸಿದರು. ‘ನಾನು ಮತಪತ್ರ ತೋರಿಸಿಲ್ಲ, ಎಲ್ಲಾ ಸುಳ್ಳು’ ಎಂದು ರೇವಣ್ಣ ವಾದಿಸಿದರು. ಕಾಂಗ್ರೆಸ್ ನಾಯಕರನ್ನ ಶಪಿಸುತ್ತಲೇ ಮತ ಚಲಾವಣೆ ಮಾಡಿದರು. ಈ ವೇಳೆ ರೇವಣ್ಣ ಮತವನ್ನು ಅಸಿಂಧು ಎಂದು ಘೋಷಿಸಲು ಲಿಖಿತ ದೂರು ನೀಡುವಂತೆ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.
ಈವೇಳೆಗೆ ಅಲರ್ಟ್ ಆದ ಬಿಜೆಪಿ ಏಜೆಂಟ್ ಸಿ.ಟಿ.ರವಿ, ಸತೀಶ್ ರೆಡ್ಡಿಗೆ ಚೀಟಿ ಬರೆದು ಕಳಿಸಿದರು. ರೇವಣ್ಣ ವಿರುದ್ಧ ನೀವು ದೂರು ಕೊಡಿ ಎಂದು ಅದರಲ್ಲಿ ಸೂಚನೆಯಿತ್ತು. ಕಾಂಗ್ರೆಸ್ ನಾಯಕರನ್ನು ಶಪಿಸುತ್ತಲೇ ರೇವಣ್ಣ ಮತಗಟ್ಟೆಯಿಂದ ಹೊರಗೆ ನಡೆದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Fri, 10 June 22