ಬ್ಯಾನರ್ಜಿ ಕುಟುಂಬದಲ್ಲಿ ಸಂಘರ್ಷ: ಮಮತಾ, ಅಭಿಷೇಕ್ ನಡುವಣ ಅಂತರ ಹೆಚ್ಚಲು ಪ್ರಶಾಂತ್ ಕಿಶೋರ್ ಹೇಗೆ ಕಾರಣವಾದರು
ತಮ್ಮ ವರ್ತಮಾನ ಮತ್ತು ಭವಿಷ್ಯ ಎರಡೂ ಮಮತಾ ಬ್ಯಾನರ್ಜಿ ಅವರ ಕೃಪೆಯಿಂದ ರೂಪುಗೊಂಡಿರುವುದು ಎಂಬ ಎಚ್ಚರವೂ ಅಭಿಷೇಕ್ ಅವರಲ್ಲಿ ಇದೆ. ಹೀಗಾಗಿ ಸದ್ಯಕ್ಕೆ ಅವರು ಏನೂ ಮಾಡುವುದಿಲ್ಲ ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ.
ಮಾನವ ಸಂಪನ್ಮೂಲ ನಿರ್ವಹಣೆ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಎದುರಿಸುವ ಸಾಮಾನ್ಯ ದೊಡ್ಡ ಸಮಸ್ಯೆ. ಸಾಧನೆಗೆ ಗಮನ ಕೊಡುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪಕ್ಷದಲ್ಲಿ ಆಂತರಿಕವಾಗಿಯೂ ಸಂಸದೀಯ ಪದ್ಧತಿಯನ್ನು ಅನುಸರಿಸುವ ಕಮ್ಯುನಿಸ್ಟ್ ಪಕ್ಷಗಳ ಕಾರ್ಯನಿರ್ವಹಣೆ ಬೇರೆ ರೀತಿ ಇರಬಹುದು. ಇನ್ನು ಕುಟುಂಬಗಳೇ ಮುನ್ನಡೆಸುವ ಕಾಂಗ್ರೆಸ್, ಡಿಎಂಕೆ, ಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ನಂಥ ಪಕ್ಷಗಳ ಕಾರ್ಯನಿರ್ವಹಣೆಯಲ್ಲಿ ಭಿನ್ನ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೊಸ ತಲೆಮಾರಿನ ನಾಯಕರು ಪ್ರವರ್ಧಮಾನಕ್ಕೆ ಬಂದು, ಹೊಸ ಕನಸುಗಳನ್ನು ಬಿತ್ತಿದಂತೆ ಹಳೆಯ ತಲೆಮಾರಿನ ನಾಯಕರು ಬದಿಗೆ ಸರಿಯಬೇಕಾಗುತ್ತದೆ. ಇದು ಸಹಜವಾಗಿಯೇ ಪಕ್ಷಗಳ ಆಂತರ್ಯದಲ್ಲಿ ಹಲವು ತಾಕಲಾಟಗಳು ಕಂಡುಬರುತ್ತವೆ.
ಕಾಂಗ್ರೆಸ್ನ ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ನಿರ್ವಹಿಸುವುದಕ್ಕಿಂತಲೂ ಮಮತಾ ಬ್ಯಾನರ್ಜಿಗೆ ಅಭಿಷೇಕ್ ಬ್ಯಾನರ್ಜಿ ಅವರನ್ನು ನಿರ್ವಹಿಸುವುದು ಸುಲಭ. ಯೌವನದ ಹುಮ್ಮಸ್ಸು ತುಳುಕುತ್ತಿರುವ ಅಭಿಷೇಕ್ ಅವರನ್ನು ಮಮತಾರ ಉತ್ತರಾಧಿಕಾರಿ ಎನ್ನುವಂತೆ ಬಿಂಬಿಸಲಾಯಿತು. ಸ್ವತಃ ಪಕ್ಷದ ಸಂಸ್ಥಾಪಕಿ ಹಾಗೂ ಯಶಸ್ವಿ ನಾಯಕಿ ಆಗಿರುವ ಮಮತಾ ಬ್ಯಾನರ್ಜಿ ಅವರ ಪಕ್ಷದಲ್ಲಿ ಅವರ ಬಗ್ಗೆ ಸಂಪೂರ್ಣ ನಿಷ್ಠೆ ಹೊಂದಿರುವವರು ಸಂಖ್ಯೆ ದೊಡ್ಡಮಟ್ಟದಲ್ಲಿ. ಇದೇ ಕಾರಣಕ್ಕೆ ಕಾಂಗ್ರೆಸ್ ಸೇರಿದಂತೆ ಉಳಿದ ಯಾವುದೇ ಪಕ್ಷಗಳು ತೆಗೆದುಕೊಳ್ಳಲು ಸಾಧ್ಯವೇ ಇಲ್ಲದ ತೀರ್ಮಾನಗಳನ್ನೂ ಮಮತಾ ಬ್ಯಾನರ್ಜಿ ತೆಗೆದುಕೊಳ್ಳಬಲ್ಲರು.
ಅಭಿಷೇಕ್ ಎನ್ನುವ ಸಮಸ್ಯೆ ಮತ್ತು ಭರವಸೆ ಪಕ್ಷದ ಸಂಘಟನೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಒಂದು ಸಮಸ್ಯೆಯಾಗಬಹುದು ಎಂದು ಮನವರಿಕೆಯಾದ ತಕ್ಷಣ ಮಮತಾ ಕಾರ್ಯಪ್ರವೃತ್ತರಾದರು. ತಮ್ಮ ಅಧಿಕಾರ ಬಳಸಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಾರ್ಯಕಾರಿ ಸಮಿತಿ ವಿಸರ್ಜಿಸಿದರು. ಪಕ್ಷದ ಸಂಘಟನೆಯಲ್ಲಿದ್ದ ವಿವಿಧ ಹಂತಗಳ ಹುದ್ದೆಗಳನ್ನು ತೆರವುಗೊಳಿಸಿದರು. ಈ ತಮ್ಮನ್ನು ತಾವು ಪಕ್ಷದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸಿಕೊಂಡು, ಪಾರ್ಥ ಚಟ್ಟೋಪಾಧ್ಯಾಯ ಅವರನ್ನು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಳಿಸಿಕೊಂಡರು. ಮಮತಾ ಬ್ಯಾನರ್ಜಿ ಅವರ ಈ ಜಾಣ ನಡೆಯಿಂದ ಪಕ್ಷ ಒಡೆಯುವುದು ತಪ್ಪಿದ್ದಲ್ಲದೆ ಅಭಿಷೇಕ್ ಬ್ಯಾನರ್ಜಿ ಅವರ ಪ್ರಭಾವವೂ ತಕ್ಕಮಟ್ಟಿಗೆ ಉಳಿದುಕೊಂಡಿತು.
ಹೊಸದಾಗಿ ರಚಿಸಿದ 20 ಜನರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಅಭಿಷೇಕ್ ಅವರಿಗೆ ಸದಸ್ಯ ಸ್ಥಾನವಿದೆ. ಆದರೆ ಅವರ ಬೆಂಬಲಿಗರು ಮತ್ತು ಅನುಯಾಯಿಗಳನ್ನು ಮಮತಾ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಈ ಮೂಲಕ ಮಮತಾ ಒಂದು ಸರಳ ಸಂದೇಶ ರವಾನಿಸಲು ಯತ್ನಿಸಿದ್ದಾರೆ. ‘ಅಭಿಷೇಕ್ ನಮ್ಮ ಪಕ್ಷಕ್ಕೆ ಬೇಕಾಗಿರುವ ಆಸ್ತಿ. ಅವರನ್ನು ನಾನು ರಕ್ಷಿಸುತ್ತೇನೆ. ಆದರೆ ಸದ್ಯದ ಮಟ್ಟಿಗೆ ಅವರಿಗೆ ನಿಷ್ಠೆ ಹೊಂದಿರುವವರನ್ನು ರಕ್ಷಿಸುವ ಬಗ್ಗೆ ಖಾತ್ರಿ ನೀಡಲು ಆಗುವುದಿಲ್ಲ’ ಎಂಬ ವಿಚಾರವನ್ನು ಮಮತಾ ಸಾರಿ ಹೇಳಿದ್ದಾರೆ. ರಾಜಕೀಯದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಹಿರಿಯ ನಾಯಕರಾದ ಸುಗತಾ ರಾಯ್ ಮತ್ತು ಡೆರೆಕ್ ಒ ಬ್ರಯಾನ್ ಅವರನ್ನು ನೂತನ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ. ಪಕ್ಷದಲ್ಲಿ ಆತಂರಿಕ ಭಿನ್ನಮತ ಹೆಚ್ಚಾಗಲು ಇವರಿಬ್ಬರ ಕೊಡುಗೆ ಇದೆ. ಅದನ್ನು ಮಮತಾ ಅರಿತಿದ್ದಾರೆ ಮತ್ತು ಅದೇ ಕಾರಣಕ್ಕೆ ಅವರಿಬ್ಬರಿಗೂ ಶಿಕ್ಷೆ ನೀಡಲಾಗಿದೆ ಎನ್ನುವ ಸಂದೇಶವನ್ನು ಈ ಮೂಲಕ ನೀಡಲಾಗಿದೆ.
ಹಳಬರು ಹೊಸಬರ ಸಂಘರ್ಷ ತೃಣಮೂಲ ಕಾಂಗ್ರೆಸ್ನಲ್ಲಿ ಹಳೇ ಹುಲಿಗಳು ಮತ್ತು ಹೊಸ ನಾಯಕರ ನಡುವಣ ಸಂಘರ್ಷ ಹೊಸದೇನು ಅಲ್ಲ. ಈ ಹಿಂದೆಯೂ ಎಷ್ಟೋ ಸಲ ಬಹಿರಂಗವಾಗಿ ಸಂಘರ್ಷಗಳು ಆಗಿವೆ. ಆದರೆ ಹಿಂದೆ ಮಮತಾ ಬ್ಯಾನರ್ಜಿ ತುಂಬಾ ತಡವಾಗಿ ಮತ್ತು ತುಸು ಸಮಾಧಾನದಿಂದ ಪ್ರತಿಕ್ರಿಯಿಸುತ್ತಿದ್ದರು. ಆದರೆ ಈ ಬಾರಿ ಅವರು ಕಟುವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಬಿಜೆಪಿಯಲ್ಲಿರುವ ಸುವೇಂದು ಅಧಿಕಾರಿ ಮತ್ತು ಬಿಜೆಪಿಯಿಂದ ಟಿಎಂಸಿಗೆ ಬಂದ ಮುಕುಲ್ ರಾಯ್ ಅವರ ನಡುವೆ ಸುದೀರ್ಘ ಅವಧಿಗೆ ಸಂಘರ್ಷವಿತ್ತು. ಟಿಎಂಸಿಯಿಂದ ಹೊರನಡೆಯಲು ಸುವೇಂದು ಅಧಿಕಾರಿ ಕೊಟ್ಟ ಕಾರಣದಲ್ಲಿ ಅಭಿಷೇಕ್ ಬ್ಯಾನರ್ಜಿಯ ಪ್ರಭಾವ ಅತ್ಯಲ್ಪ ಅವಧಿಯಲ್ಲಿ ಹೆಚ್ಚಾದ ವಿಚಾರವೂ ಇತ್ತು. ಸುವೇಂದು ಅಧಿಕಾರಿ ಅವರ ತಂದೆ ಸಿಸಿರ್ ಅಧಿಕಾರಿ ಮಿಡ್ನಾಪುರ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದವರು. 1998ರಲ್ಲಿ ತೃಣಮೂಲ ಕಾಂಗ್ರೆಸ್ಗೆ ಸಾಕಷ್ಟು ಸಂಖ್ಯೆಯ ಬೆಂಬಲಿಗರನ್ನು ಸೆಳೆದಿದ್ದ ಪ್ರಭಾವಿ ಅವರು. ಅಭಿಷೇಕ್ ಅವರನ್ನು ಮಮತಾ ಉತ್ತರಾಧಿಕಾರಿ ಎಂದು ಬಿಂಬಿಸಿದ್ದರಿಂದ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸುವೇಂದು ಅಧಿಕಾರಿಗೆ ಸಹಜವಾಗಿಯೇ ಬೇಸರವಾಗಿತ್ತು.
ಸುಗತ ರಾಯ್ ಸಹ ಒಂದು ಕಾಲದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಮುನ್ನೆಲೆ ತಂದ ರೀತಿಯನ್ನು ವಿರೋಧಿಸಿದ್ದವರು. ಆದರೆ ನಂತರದ ದಿನಗಳಲ್ಲಿ ಯುಟರ್ನ್ ಹೊಡೆದು ಅಭಿಷೇಕ್ ಬೆನ್ನಿಗೆ ನಿಂತರು. ಅಭಿಷೇಕ್ ಪರವಾಗಿ ಟಿಎಂಸಿಯಲ್ಲಿರುವ ಅತಿದೊಡ್ಡ ಪ್ರಭಾವಿ ಎಂದರೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್. 2021ರಲ್ಲಿ ಟಿಎಂಸಿಯನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ ಶ್ರೇಯಸ್ಸು ಹೊಂದಿರುವ ಪ್ರಶಾಂತ್ ಮಾತನ್ನು ಟಿಎಂಸಿಯಲ್ಲಿ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಿದೆ.
ತೃಣಮೂಲ ಕಾಂಗ್ರೆಸ್ಗೆ ಅಭಿಷೇಕ್ ತುಂಬಾ ತಡವಾಗಿ ಪ್ರವೇಶ ಪಡೆದವರು. ಮಮತಾ ಬ್ಯಾನರ್ಜಿಯ ಉತ್ತರಾಧಿಕಾರಿ ಎಂದು ಅವರನ್ನು ಬಿಂಬಿಸಲಿಲ್ಲವಾದರೂ ಟಿಎಂಸಿಯ ಯುವರಾಜ ಎಂದು ಕೊಂಡಾಡಲಾಯಿತು. ಅಭಿಷೇಕ್ ಬ್ಯಾನರ್ಜಿ ಅವಿರಗಾಗಿ ತೃಣಮೂಲ ಯುವ ಸಂಘಟನೆಯನ್ನು ಹುಟ್ಟುಹಾಕಲಾಯಿತು. ಅದಾಗಲೇ ಅಸ್ತಿತ್ವದಲ್ಲಿದ್ದ ತೃಣಮೂಲ ಕಾಂಗ್ರೆಸ್ನ ವಿದ್ಯಾರ್ಥಿ ಘಟಕಕ್ಕಿಂತಲೂ ಭಿನ್ನವಾದ ರೀತಿಯಲ್ಲಿ ಇದರ ಕಾರ್ಯನಿರ್ವಹಣೆ ಆರಂಭವಾಯಿತು. ಪಶ್ಚಿಮ ಬಂಗಾಳದಲ್ಲಿ 38 ವರ್ಷಗಳ ಸುದೀರ್ಘ ಕಮ್ಯುನಿಸ್ಟ್ ಪಕ್ಷದ ಆಡಳಿತವನ್ನು ಮಮತಾ ಅಂತ್ಯುಗೊಳಿಸಿದ ತಕ್ಷಣಕ್ಕೆ ಟಿಎಂಸಿ ಯುವ ಘಟಕ ಕಾರ್ಯಾರಂಭ ಮಾಡಿತು. ಅಭಿಷೇಕ್ 2021ರ ಮೇ ತಿಂಗಳಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆದರು. ಚುನಾವಣೆಯಲ್ಲಿ ಟಿಎಂಸಿಗೆ ಗೆಲುವು ದಕ್ಕಿಸಿಕೊಟ್ಟಿದ್ದಕ್ಕೆ ಕೊಟ್ಟ ಉಡುಗೊರೆ ಇದು ಎಂದೇ ವ್ಯಾಖ್ಯಾನಿಸಲಾಯಿತು. ಮಮತಾ ಬ್ಯಾನರ್ಜಿ ನಂತರದ ಸ್ಥಾನದಲ್ಲಿದ್ದು ಪ್ರತಿ ಕ್ಷೇತ್ರದಲ್ಲಿಯೂ ಕಾರ್ಯತಂತ್ರ ರೂಪಿಸಿದ್ದು ಅಭಿಷೇಕ್. ಹೀಗಾಗಿಯೇ ಅವರ ನಾಯಕತ್ವಕ್ಕೆ ಪಕ್ಷವು ಮಾನ್ಯತೆ ನೀಡಿತ್ತು.
ಪ್ರಶಾಂತ್ ಕಿಶೋರ್ರ ಐ-ಪ್ಯಾಕ್ ವಿರುದ್ಧ ಆಕ್ರೋಶ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಟಿಎಂಸಿ ಪಕ್ಷವು ಐ-ಪ್ಯಾಕ್ ಸಹಯೋಗದಲ್ಲಿಯೇ ಎದುರಿಸಿತು. ದೊಡ್ಡಮಟ್ಟದ ನಾಯಕತ್ವ ಹೊಂದಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಪರಿಣಾಮಕಾರಿ ನಾಯಕತ್ವದ ಹೋರಾಡುವ ಯಂತ್ರವಾಗಿ ರೂಪಿಸಿದ್ದು ಅಭಿಷೇಕ್ ಬ್ಯಾನರ್ಜಿ. ಈ ಹಂತದಲ್ಲಿ ಅಭಿಷೇಕ್ ತೆಗೆದುಕೊಂಡ ಎರಡು ನಿರ್ಧಾರಗಳು ಪಕ್ಷದಲ್ಲಿ ತಳಮಳ ಮತ್ತು ಸಂಘರ್ಷ ಹುಟ್ಟುಹಾಕಿದವು. ಒಬ್ಬ ವ್ಯಕ್ತಿಗೆ ಒಂದು ಸ್ಥಾನ ಮತ್ತು ಎಲ್ಲರಿಗೂ ನಿವೃತ್ತಿ ವಯಸ್ಸು ಇರಬೇಕು ಎಂಬ ಅವರ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಮುಂದಿನ ತಲೆಮಾರಿನ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಅಭಿಷೇಕ್ ಈ ನಿಲುವಿಗೆ ಬಂದಿದ್ದರು. ಪಕ್ಷದಲ್ಲಿ ವ್ಯಕ್ತವಾಗುತ್ತಿರುವ ಅಸಹನೆ ಗಮನಿಸಿದ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿ, ಐ-ಪ್ಯಾಕ್ನಿಂದ ಪಕ್ಷವು ಅಂತರ ಕಾಯ್ದುಕೊಳ್ಳಲಿದೆ ಎಂದು ಘೋಷಿಸಿದರು. ಆದರೆ ಆವರು ಈ ಹೇಳಿಕೆ ನೀಡಿದ ತಕ್ಷಣಕ್ಕೆ ತಲೆಮಾರುಗಳ ಅಂತರ ಕಡಿಮೆಯಾಗುವುದೂ ಇಲ್ಲ, ಹಳಬರು ಮತ್ತು ಹೊಸಬರ ನಡುವಿನ ಸಂಘರ್ಷ ನಿವಾರಣೆ ಆಗುವುದೂ ಇಲ್ಲ.
ಮಮತಾಗೆ ಎದುರಾಳಿ ಅಭಿಷೇಕ್ ಮಮತಾ ಬ್ಯಾನರ್ಜಿ ಮತ್ತು ಅವರ ನಂಬುಗೆಯ ಹತ್ತಿರದ ಸಂಬಂಧಿ ಅಭಿಷೇಕ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಅವರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡದ ಹಂತಕ್ಕೆ ಮುಟ್ಟಿದ್ದಾರೆ ಎನ್ನಲು ಹಲವು ಸಂದರ್ಭಗಳಲ್ಲಿ ಅವರು ನಡೆದುಕೊಂಡಿರುವ ರೀತಿಯನ್ನೇ ಸಾಕ್ಷಿಯಾಗಿ ತೋರಿಸಲಾಗುತ್ತದೆ. ಆದರೆ ಈ ಸಂಘರ್ಷದ ಕಾರಣಗಳನ್ನು ಪರಿಹರಿಸಿಕೊಳ್ಳುವುದು ಅವರಿಬ್ಬರ ಹೊಣೆಗಾರಿಕೆಯೂ ಹೌದು. ಈವರೆಗೆ ಬಹಿರಂಗವಾಗಿ ಬಂಡಾಯದ ಮಾತುಗಳನ್ನು ಆಡದಂತೆ ಅಭಿಷೇಕ್ ಅವರನ್ನು ಮಮತಾ ಸಂಭಾಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಂದಿಗೂ ಮಮತಾ ಬ್ಯಾನರ್ಜಿ ಜನಪ್ರಿಯ ನಾಯಕಿ. ಪಕ್ಷದ ಒಳಗೆ ಮತ್ತು ಜನಮಾನಸದಲ್ಲಿ ದೊಡ್ಡಮಟ್ಟದ ಪ್ರಭಾವ ಹೊಂದಿದ್ದಾರೆ. ಪ್ರತಿಪಕ್ಷಗಳಲ್ಲಿಯೂ ಅವರಿಗೆ ಹೇಳಿಕೊಳ್ಳುವಂಥ ಎದುರಾಳಿಗಳು ಇಲ್ಲ. ಹೀಗಾಗಿಯೇ ಅಭಿಷೇಕ್ ಅವರಿಗೆ ಈವರೆಗೆ ಮಮತಾ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಿಲ್ಲ.
ತೃಣಮೂಲ ಕಾಂಗ್ರೆಸ್ನ ಸಂರಚನೆಯನ್ನು ಬದಲಿಸಬೇಕೆನ್ನುವ ಆಸೆಯೇನೋ ಅಭಿಷೇಕ್ ಅವರಿಗೆ ಇದೆ. ಪಕ್ಷದ ವಿವಿಧ ಘಟಕಗಳಲ್ಲಿ ತುಂಬಿರುವ ಗೊಂದಲಗಳನ್ನು ನಿವಾರಿಸುವ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ರಚಿಸುವ ಆಶಯವೇನೋ ಅಭಿಷೇಕ್ ಅವರಿಗೆ ಇದೆ. ತಮ್ಮ ವರ್ತಮಾನ ಮತ್ತು ಭವಿಷ್ಯ ಎರಡೂ ಮಮತಾ ಬ್ಯಾನರ್ಜಿ ಅವರ ಕೃಪೆಯಿಂದ ರೂಪುಗೊಂಡಿರುವುದು ಎಂಬ ಎಚ್ಚರವೂ ಅಭಿಷೇಕ್ ಅವರಲ್ಲಿ ಇದೆ. ಪರಿವಾರವಾದದ ಬಗ್ಗೆ ಬಿಜೆಪಿಯ ಆರೋಪವನ್ನು ಪುಷ್ಟೀಕರಿಸುವಂತೆ ಈ ಬೆಳವಣಿಗೆ ಇದೆಯಾದರೂ, ತಮ್ಮ ಸಾಮರ್ಥ್ಯ ನಿರೂಪಿಸಲು ಅಭಿಷೇಕ್ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕರನ್ನು ಸಂಭಾಳಿಸುವ ಕಲೆ ಕರಗತವಾಗುವವರೆಗೆ ಅಭಿಷೇಕ್ ಕಾಯಬೇಕು ಎನ್ನುವುದು ಮಮತಾರ ಇಂಗಿತ. ಮಮತಾ ಬ್ಯಾನರ್ಜಿ ಬಹುಕಾಲದ ಅನುಭವದ ನಂತರ ಹಿರಿಯರನ್ನು, ರಾಜಕೀಯ ಸಂಪನ್ಮೂಲಗಳನ್ನು ಸಂಭಾಳಿಸುವುದು ಕಲಿತರು. ಈಗ ಕಲಿಯುವ ಸರದಿ ಅಭಿಷೇಕ್ ಅಭಿಷೇಕ್ ಅವರದ್ದು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಂಬೈ ಕೋರ್ಟ್ನಿಂದ ಸಮನ್ಸ್; ಮಾ.2ರಂದು ವಿಚಾರಣೆಗೆ ಹಾಜರಾಗಲು ಸೂಚನೆ
ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನನ್ನ ಕರೆ ಸ್ವೀಕರಿಸುವುದಿಲ್ಲ: ರಾಜ್ಯಪಾಲರಿಂದ ಗಂಭೀರ ಆರೋಪ