Stock Market Updates: ಅಲ್ಪ ಕುಸಿತದೊಂದಿಗೆ ವಾರದ ವಹಿವಾಟು ಮುಗಿಸಿದೆ ಷೇರುಪೇಟೆ; ಗಳಿಕೆ, ನಷ್ಟದ ವಿವರ ಹೀಗಿದೆ
Stock Market Updates; ಸೆನ್ಸೆಕ್ಸ್ನಲ್ಲಿ ಹಿಂದೂಸ್ತಾನ್ ಯುನಿಲೀವರ್, ಏಷ್ಯನ್ ಪೈಂಟ್ಸ್, ಎಚ್ಸಿಎಲ್ ಟೆಕ್ನಾಲಜೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿದವು.
ಮುಂಬೈ: ದಿನದ ಆರಂಭದ ವಹಿವಾಟಿನಲ್ಲಿ ತುಸು ಚೇತರಿಕೆಯೊಂದಿಗೆ ಭರವಸೆ ಮೂಡಿಸಿದ್ದ ದೇಶೀಯ ಷೇರುಪೇಟೆಗಳು (Stock Markets) ಅಲ್ಪ ಕುಸಿತದೊಂದಿಗೆ ದಿನದ ಮತ್ತು ವಾರದ ವಹಿವಾಟು ಮುಗಿಸಿವೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಮಿಶ್ರ ವಹಿವಾಟು ದೇಶೀಯ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ‘30-ಷೇರು ಬಿಎಸ್ಇ ಸೆನ್ಸೆಕ್ಸ್ (BSE Sensex)’ 87.12 ಅಂಶ ಕುಸಿತದೊಂದಿಗೆ ಶೇಕಡಾ 0.14ರಷ್ಟು ಇಳಿಕೆಯಾಗಿ 61,663.48 ರಲ್ಲಿ ವಹಿವಾಟು ಮುಗಿಸಿತು. ಒಂದು ಹಂತದಲ್ಲಿ ಇದು 61,337.43 ರ ವರೆಗೂ ಕುಸಿತ ಕಂಡಿತ್ತು. ಎನ್ಎಸ್ಇ ನಿಫ್ಟಿ (NSE Nifty) ಶೇಕಡಾ 0.20ಯಷ್ಟು ಕುಸಿದು 36.25 ಅಂಶ ಇಳಿಕೆಯಾಗಿ 18,307.65 ರಲ್ಲಿ ವಹಿವಾಟು ಕೊನೆಗೊಳಿಸಿತು.
ಸೆನ್ಸೆಕ್ಸ್ನಲ್ಲಿ ಮಹೀಂದ್ರಾ & ಮಹೀಂದ್ರಾ, ಮಾರುತಿ, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ಎನ್ಟಿಪಿಸಿ, ಭಾರ್ತಿ ಏರ್ಟೆಲ್, ಐಟಿಸಿ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ಗಳು ಹಿನ್ನಡೆ ಕಂಡವು. ಹಿಂದೂಸ್ತಾನ್ ಯುನಿಲೀವರ್, ಏಷ್ಯನ್ ಪೈಂಟ್ಸ್, ಎಚ್ಸಿಎಲ್ ಟೆಕ್ನಾಲಜೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 618.37 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾದೆಲ್ಲೆಡೆ ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ
ಏಷ್ಯಾದಾದ್ಯಂತ, ಟೋಕಿಯೊ, ಶಾಂಘೈ, ಹಾಂಗ್ಕಾಂಗ್ನಲ್ಲಿಯೂ ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂತು. ಸಿಯೋಲ್ ಮಾರುಕಟ್ಟೆಯಲ್ಲಿ ಮಾತ್ರ ತುಸು ಚೇತರಿಕೆ ಕಾಣಿಸಿತು. ಯುರೋಪ್‌ನಲ್ಲಿನ ಈಕ್ವಿಟಿ ಎಕ್ಸ್‌ಚೇಂಜ್‌ಗಳು ಮಧ್ಯಾಹ್ನದ ಅಧಿವೇಶನದಲ್ಲಿ ಉತ್ತಮ ವಹಿವಾಟು ನಡೆಸಿವೆ.
ಕಚ್ಚಾ ತೈಲೆ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.40 ಹೆಚ್ಚಳವಾಗಿ ಪ್ರತಿ ಬ್ಯಾರೆಲ್ಗೆ 90.09 ಡಾಲರ್ನಂತೆ ವಹಿವಾಟು ನಡೆಸಿತು.
ಮತ್ತೆ ಕುಸಿದ ರೂಪಾಯಿ ಮೌಲ್ಯ
ಕಳೆದ ಕೆಲವು ದಿನಗಳಿಂದ ಮತ್ತೆ ಕುಸಿಯಲಾರಂಭಿಸಿರುವ ರೂಪಾಯಿ ಮೌಲ್ಯ ಶುಕ್ರವಾರವೂ ಕುಸಿತ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ 6 ಪೈಸೆ ಇಳಿಕೆಯಾಗಿ 81.70ರಲ್ಲಿ ವಹಿವಾಟು ಕೊನೆಗೊಳಿಸಿತು. ಜಾಗತಿಕ ಮಾರುಕಟ್ಟೆಗಳ ಅನಿಶ್ಚಿತತೆ, ಕಚ್ಚಾ ತೈಲ ಬೆಲೆ ಹೆಚ್ಚಳ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ಹಿಂದಿನ ದಿನದ ವಹಿವಾಟಿನ ಕೊನೆಯಲ್ಲಿ ರೂಪಾಯಿ ಮೌಲ್ಯ 81.64 ಆಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ