ಹಾದಿಯೇ ತೋರಿದ ಹಾದಿ | Haadiye Torida Haadi : ಹೊರಜಗತ್ತಿಗೆ ಏನೂ ಗೊತ್ತಿಲ್ಲದೆ, ಅಡವಿಯೊಳಗೆ ನಿಗೂಢವಾಗಿ ಒಂದು ವಿಶ್ವವಿದ್ಯಾನಿಲಯವೂ ಕಲಿಸದಂತಹ ಅದೆಷ್ಟೋ ವಿಚಾರಗಳನ್ನು ತಿಳಿದುಕೊಂಡಿದ್ದಾರೆ ಸಿದ್ದಿ ಸಮುದಾಯದ ಸುರೇಶ್ ಕಾವೇರಿ ಸಿದ್ದಿ. ಇವರನ್ನು ಮಾತನಾಡಿಸುವ ಅವಕಾಶ ಸಿಕ್ಕಿದ್ದರಿಂದ ಬೆಂಗಳೂರಿನ ಗಾಂಧಿನಗರದಿಂದ ರಾತ್ರಿ 9:30 ಕ್ಕೆ ಖಾಸಗಿ ಬಸ್ ಏರಿ ಬೆಳಗ್ಗೆ ಯಲ್ಲಾಪುರಕ್ಕೆ ತಲುಪಿದೆ. ಅಲ್ಲಿಂದ ಬಸ್ ಹತ್ತಿ ಅರೆಬೈಲ್ನಲ್ಲಿ ಬೆಳಗ್ಗೆ 7:30ಕ್ಕೆ ಇಳಿದೆ. ಕೃಷ್ಣ ಸಿದ್ಧಿ ಎಂಬುವವರ ಸಹಾಯದಿಂದ ಸ್ಕೂಟರ್ನಲ್ಲಿ ಅರಣ್ಯದ ಹಾದಿಹಿಡಿದು ಸುಮಾರು 8.ಕಿ.ಮೀ ಕ್ರಮಿಸಿದಾಗ ಕೆಳಾಸೆ ಎಂಬ ಗ್ರಾಮ ಸಿಕ್ಕಿತು. ಇಡಗುಂದಿ ವಲಯದಲ್ಲಿ ಬರುವ ಈ ಗ್ರಾಮದಲ್ಲೇ ಸುರೇಶ್ ಅವರಿರುವುದು. ಅಡವಿಯ ಜ್ಞಾನ ಅಗಣಿತ ಎನ್ನುವಷ್ಟು ಕಾಡು- ಮೇಡು ಸುತ್ತಾಡಿದ್ದಾರೆ. ಯಾರ ಹಂಗಿಲ್ಲದೇ ಏಕಾಂಗಿಯಾಗಿರುವ ಇವರಿಗೆ ಸಂಸಾರವಿಲ್ಲ. ಅದೆಷ್ಟು ಸುಖಿ ಎಂದರೆ, ಎಷ್ಟೋ ವರ್ಷ ಅವರ ಮನೆಗೆ ಬಾಗಿಲೇ ಇರಲಿಲ್ಲ. ಹಾಗೆಯೇ ಗುಳ್ಳಾಪುರಕ್ಕೆ, ಅರೆಬೈಲಿಗೆ ಹೋಗಿಬರುತ್ತಿದ್ದರು.
ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್ (Jyothi S)
(ಹಾದಿ 11, ಭಾಗ 1)
ನಾಳೆಯ ಚಿಂತೆಯೇ ಇಲ್ಲದಂತೆ ಬದುಕುವ ಜಾಯಮಾನ ಸುರೇಶ್ ಅವರದು. ಹಣ ಮಾಡಬೇಕು, ಮನೆ ಕಟ್ಟಿಸಬೇಕು, ಆಸ್ತಿ ಮಾಡಬೇಕು, ಕಳ್ಳ ಬಂದರೆ? ಎಂಬ ಯಾವ ಗೊಡವೆಯೂ ಇಲ್ಲದ ಪರಮಸುಖಿ. ಬಹುಶಃ ನಗರ ಪ್ರದೇಶದ ಇಂದಿನ ಕೋಟ್ಯಾಧಿಪತಿಗೂ ಸಿಗದ ಖುಷಿ.
ನಾಲ್ಕೈದು ಕಿಲೋಮೀಟರ್ ಬೆಟ್ಟ ಹತ್ತಿಕೊಂಡು ಕೆಲಸಕ್ಕೆ ಹೋಗುವ ಸುರೇಶ್ ಅವರಿಗೆ ಕಾಡಿನ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು. ಕಾಡಿನೊಳಗಿದ್ದು ತಮ್ಮ ಬದುಕನ್ನೇ ಸಂಪೂರ್ಣ ಕಾಡಿನೊಳಗೆ ಕಟ್ಟಿಕೊಂಡಿದ್ದಾರೆ. ಅರಣ್ಯದ ಜ್ಞಾನ ಅವರಿಗೆ ಪುಸ್ತಕಗಳ ಓದಿನ ಪಾಂಡಿತ್ಯದಿಂದ ಬಂದಿರುವುದಲ್ಲ. ಕಾಡು ಅವರ ಅನಿವಾರ್ಯದ ಬದುಕು. ‘ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂದು ತೇಜಸ್ವಿಯವರು ಹೇಳುವಂತೆ ಇವರಿಗೆ ಕಾಡು ಬದುಕಿನ ಒಂದು ಭಾಗವಲ್ಲ. ಇವರ ಸಂಪೂರ್ಣ ಬದುಕೇ ಕಾಡು. ಹಾಗಾಗಿ ಸಕಲ ಪ್ರಾಣಿ, ಪಕ್ಷಿ, ಗಿಡ, ಮರ, ಸಸ್ಯ ಹೀಗೆ ಕಾಡಿನ ಎಲ್ಲ ಜೀವಸಂಕುಲ ಪ್ರತೀದಿನ ಅವರಿಗೆ ಒಂದೊಂದು ಪಾಠ ಕಲಿಸುವ ಗುರುಗಳು.
ಸುರೇಶ್ ಸಿದ್ಧಿಯವರು ನನ್ನೆದುರು ಅವರ ಬದುಕನ್ನು ಹರವಿದ್ದು ಹೀಗೆ…
ನಾನು ಒಂದು ವರ್ಷದ ಕೂಸು ಇರುವಾಗಲೇ ನನ್ನ ತಾಯಿ ಕಾವೇರಿ ಕಾಯಿಲೆಯಿಂದ ತೀರಿಕೊಂಡರು. ಅಮ್ಮನ ಪ್ರೀತಿಯನ್ನೇ ಕಾಣದ ನಾನು ಬೆಳೆದದ್ದು ನನ್ನ ಅಜ್ಜಿ ಲಕ್ಷ್ಮಿಯ ಆಶ್ರಯದಲ್ಲಿ. ಈಗ ಅವರೂ ತೀರಿ ಹೋಗಿದ್ದಾರೆ. ನಾನು ನಾಲ್ಕನೇ ತರಗತಿಯವರೆಗೆ ಕನ್ನಡ ಶಾಲೆಯಲ್ಲಿ ಓದಿದ್ದೇನೆ. ಹೊಳೆ, ಹೊಂಡಗಳಲ್ಲಿ ಸ್ನಾನ ಮಾಡುತ್ತೇನೆ. ಹಸಿವಾದಾಗ ಮೀನು, ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೆಂಜಿರುವೆಗಳನ್ನು ಹಿಡಿದು ಹುರಿದು ಚಟ್ನಿ ಮಾಡಿ ತಿನ್ನುತ್ತೇನೆ.
ನನಗೆ ಬೆತ್ತದ ಬುಟ್ಟಿ ಮಾಡುವುದು ಗೊತ್ತು. ಮೊದಲಾದರೆ ಬೆಟ್ಟ ಹತ್ತಿ ಹೋಗಿ ಬೆತ್ತ ಕಿತ್ತುಕೊಂಡು ಬರುತ್ತಿದ್ದೆ. ಈಗ ಅದನ್ನು ಕೀಳುವ ಹಾಗಿಲ್ಲ. ಹಾಗಾಗಿ ಆ ಕೆಲಸವನ್ನು ಬಿಟ್ಟಿದ್ದೇನೆ. ಅಡಿಕೆ ಕೊಯ್ಯುವುದು, ಗೊಬ್ಬರ ಹಾಕುವುದು, ಅಗಟೆ ಹೊಡೆಯುವುದು, ಬಾಳೆಗಿಡ, ಅಡಿಕೆ ಗಿಡ ನೆಡುವುದು, ಸೊಪ್ಪು ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತೇನೆ. ಒಂದು ದಿನಕ್ಕೆ 300 ರೂಪಾಯಿ ಕೂಲಿ ಮಧ್ಯಾಹ್ನದ ಊಟ ಕೊಡುತ್ತಾರೆ. ಹೀಗೆ ಕೆಲಸಕ್ಕೆ ಹೋದರೆ ಊಟವಾದರೂ ಸಿಗುತ್ತದೆ, ಹೊಟ್ಟೆ ತುಂಬುತ್ತದೆ. ಮನೆಯಲ್ಲಿದ್ದರೆ ಊಟವೂ ಸಿಗುವುದಿಲ್ಲ ಕೂಲಿ ಸಿಗಲಿಲ್ಲವೆಂದರೂ ಊಟ ಸಿಗುತ್ತದೆ ಎಂದು ಕೆಲಸಕ್ಕೆ ಹೋಗುತ್ತೇನೆ. ಎಷ್ಟೋ ಸಲ ಕೇವಲ ಒಂದು ಲೋಟ ಮಜ್ಜಿಗೆಗಾಗಿಯೂ ಕೆಲಸ ಮಾಡಿದ್ದುಂಟು. ಮನೆಗೆ ಬಾಗಿಲು ಇರಲಿಲ್ಲ.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
ಹಿಂದಿನ ಹಾದಿ : Woman: ಹಾದಿಯೇ ತೋರಿದ ಹಾದಿ; ಕುರಗೋಡಿನ ನಾಗವೇಣಿ ಬೆಂಗಳೂರಿಗೆ ಬಂದಿದ್ದು ಹೀಗೆ
ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/haadiye-torida-haadi
Published On - 1:57 pm, Thu, 24 March 22