ನೆಟ್ ಲೋಕದಲ್ಲಿ ಪ್ರೀತಿ ಪ್ರೇಮ ಪ್ರಣಯ.. ವರ್ಚುವಲ್ ಡೇಟಿಂಗ್ನತ್ತ ಹೆಚ್ಚಿದ ಒಲವು
ಲಾಕ್ಡೌನ್ ತರುವಾಯ ಡೇಟಿಂಗ್ ಆ್ಯಪ್ಗಳಲ್ಲಿ ಭಾರತೀಯರ ಆಸಕ್ತಿ ಹೆಚ್ಚಿದೆ. ಪ್ರಸ್ತುತ ಶೇ.2.2 ಭಾರತೀಯರು ಡೇಟಿಂಗ್ ಆ್ಯಪ್ ಬಳಸುತ್ತಿದ್ದು, 2024ರ ವೇಳೆಗೆ ಬಳಕೆದಾರರ ಸಂಖ್ಯೆ ಶೇ.3.6ಕ್ಕೆ ಏರುವ ಸಾಧ್ಯತೆಯಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಪಿಜಿಯೊಂದರಲ್ಲಿ ವಾಸವಿರುವ ಸೌಮ್ಯಾ ಸಾಫ್ಟ್ವೇರ್ ಎಂಜಿನಿಯರ್. ಲಾಕ್ಡೌನ್ನಲ್ಲಿ ಅತ್ತ ಊರಿಗೂ ತೆರಳಲಾಗದೆ, ಇತ್ತ ಸರಿಯಾಗಿ ಕೆಲಸವನ್ನೂ ಮಾಡಲಾಗದೇ ಒಬ್ಬಂಟಿತನ ಅನುಭವಿಸುತ್ತಿದ್ದರು. ಗೆಳೆಯರ ಜೊತೆ ಹೊರಗೆ ಸುತ್ತಾಡಲಾಗದೆ ರೂಮಲ್ಲೇ ಇದ್ದು ಬೇಸತ್ತಿದ್ದರು. ಅದುವರೆಗೆ ಬಳಸಿದ್ದ ಫೇಸ್ಬುಕ್, ಇನ್ಸ್ಟಾಗ್ರಾಂ ಬೇಸರ ತರಿಸಿತ್ತು. ಹೊಸ ಸಂಬಂಧವೊಂದರ ಅಗತ್ಯ ಕಾಡಿತು. ಆಗಲೇ, ಅವರು ಡೇಟಿಂಗ್ ಆ್ಯಪ್ ಡೌನ್ಲೋಡ್ ಮಾಡಿದ್ದು.
ಶೇ.140ರಷ್ಟು ಹೆಚ್ಚಳ! ಲಾಕ್ಡೌನ್ ಜಾರಿಯ ನಂತರ ಭಾರತದಲ್ಲಿ ಡೇಟಿಂಗ್ ಆ್ಯಪ್ಗಳ ಬಳಕೆ ಶೇ.140ರಷ್ಟು ಹೆಚ್ಚಳ ಕಂಡಿದೆ! ಕೊರೊನಾ ನಂತರ ವರ್ಚುವಲ್ ಜಗತ್ತಿನಲ್ಲಿ ಸಾಮೀಪ್ಯ ಪಡೆಯಲು ಭಾರತೀಯರಲ್ಲಿ ಆಸಕ್ತಿ ಹೆಚ್ಚುತ್ತಿದೆ.
ಟಿಂಡರ್, ಬಂಬಲ್, ಟ್ರುಲಿ ಮ್ಯಾಡ್ಲಿ ಮುಂತಾದ ಆ್ಯಪ್ಗಳು ಗಣನೀಯವಾಗಿ ಡೌನ್ಲೋಡ್ ಆಗಿದೆ. ಪ್ರಿಯಾಂಕಾ ಚೋಪ್ರಾ ಹೂಡಿಕೆ ಮಾಡಿರುವ ಅಮೆರಿಕ ಮೂಲದ ಆ್ಯಪ್ ಬಂಬ್ಲ್ನ ಬಳಕೆದಾರರ ಸಂಖ್ಯೆ ಜುಲೈನಲ್ಲೇ 40 ಲಕ್ಷ ದಾಟಿತ್ತು. ಅಲ್ಲದೆ, ಡೇಟಿಂಗ್ ಆ್ಯಪ್ಗಳಲ್ಲಿ ಇತರರ ಪ್ರೊಫೈಲ್ ವೀಕ್ಷಣೆ, ಸಂದೇಶ ವಿನಿಮಯ, ವಿಡಿಯೊ ಕಾಲ್ಗಳ ಬಳಕೆ ಸಮಯವೂ ಹೆಚ್ಚಾಗಿದೆ.
ನೇರ ಭೇಟಿಗೂ ಮುನ್ನ.. ಕೊರೊನಾದಿಂದಾಗಿ ಆಪ್ತರ ಭೇಟಿ ಸಾಧ್ಯವಾಗದ ಕಾರಣ, ಡೇಟಿಂಗ್ ಆ್ಯಪ್ಗಳಲ್ಲಿ ವಿಡಿಯೊ ಕಾಲ್ ಮಾಡುವ ಪ್ರಮಾಣವೂ ಹೆಚ್ಚಾಗಿದೆ. ನೇರವಾಗಿ ಭೇಟಿಯಾಗುವ ಮುನ್ನ ಇತರರ ಆಪ್ತ ಪರಿಚಯ ಮಾಡಿಕೊಳ್ಳಲು ವಿಡಿಯೊ ಕಾಲ್ ಬಳಕೆಯಾಗುತ್ತಿದೆ. ಮಾರ್ಚ್ನಿಂದ ಮೇ ಅವಧಿಯಲ್ಲಿ ಬಂಬ್ಲ್ನಲ್ಲಿ ವಿಡಿಯೋ ಕಾಲ್ ಬಳಸುವವರ ಸಂಖ್ಯೆ ಶೇ.38ರಷ್ಟು ಹೆಚ್ಚಾಗಿದೆ.ಆನ್ಲೈನ್ನಲ್ಲೇ ಅಪರಿಚಿತರಿಂದ ಆಪ್ತರಾಗುವ ಪದ್ಧತಿಗೆ ಭಾರತೀಯರು ಹೊರಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಬಂಬ್ಲ್ ಆ್ಯಪ್ನ ಪ್ರೀತಿ ಜೋಷಿ ವಿವರಿಸುತ್ತಾರೆ.
ಎರಡು, ಮೂರನೇ ಹಂತದ ನಗರಗಳಲ್ಲೂ ಹೆಚ್ಚಿದ ಒಲವು ಮಹಾನಗರಗಳಲ್ಲಿ ಮಾತ್ರವಲ್ಲ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಡೇಟಿಂಗ್ ಆ್ಯಪ್ಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ 10 ತಿಂಗಳಲ್ಲಿ ಈ ಹಂತದ ನಗರಗಳಿಂದ ಮೂರು ಪಟ್ಟು ಹೆಚ್ಚು ಆದಾಯವನ್ನು ಟ್ರೂಲಿಮ್ಯಾಡ್ಲಿ ಆ್ಯಪ್ ಗಳಿಸಿದೆ.
ಕ್ವಾಕ್ ಕ್ವಾಕ್ ಎಂಬ ಭಾರತೀಯ ಡೇಟಿಂಗ್ ಆ್ಯಪ್ನ ಶೇ.70 ಬಳಕೆದಾರರು ಎರಡು ಮತ್ತು ಮೂರನೇ ಹಂತದ ನಗರದವರೇ ಆಗಿದ್ದಾರೆ.
Published On - 5:38 pm, Thu, 26 November 20