Explainer | ಪೌರತ್ವ ತಿದ್ದುಪಡಿ ಕಾಯ್ದೆ ಎಂದು ಅನುಷ್ಠಾನ? ಏಕಿಷ್ಟು ವಿರೋಧ?
ಪೌರತ್ವ ತಿದ್ದುಪಡಿ ಕಾಯ್ದೆ ಇಂದಿಗೂ ಬೂದಿಮುಚ್ಚಿದ ಕೆಂಡ. ಕೊರೊನಾ ಲಸಿಕೆ ವಿತರಣೆ ಆರಂಭವಾಗಿ, ಸಾಮಾಜಿಕ ಬದುಕು ಒಂದು ಹಂತಕ್ಕೆ ಬಂದ ತಕ್ಷಣ ಮತ್ತೊಮ್ಮೆ ಪ್ರತಿಭಟನೆಗಳು ಗರಿಗೆದರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪೌರತ್ವ ತಿದ್ದುಪಡಿ ಮಸೂದೆ Citizenship (Amendment) Bill ಲೋಕಸಭೆಯಲ್ಲಿ ಅನುಮೋದನೆಗೊಂಡು ಇಂದಿಗೆ (ಡಿ.10) ಒಂದು ವರ್ಷ. ಡಿ.12ಕ್ಕೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು ಕಾಯ್ದೆಯಾಗಿ ಊರ್ಜಿತಕ್ಕೆ ಬಂತು. ಸಾಕಷ್ಟು ಚರ್ಚೆ, ವಿವಾದ, ಸುದೀರ್ಘ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾದ ಈ ಕಾಯ್ದೆಯನ್ನು ದೊಡ್ಡ ಸಂಖ್ಯೆಯ ಜನರು ಪ್ರಬಲವಾಗಿ ವಿರೋಧಿಸಿದ್ದರು. ಆಡಳಿತಾರೂಢ ಬಿಜೆಪಿ ಮತ್ತು ಕೆಲ ಸಂಘಟನೆಗಳು ಈ ಕಾಯ್ದೆಯ ಔಚಿತ್ಯವನ್ನು ಸಮರ್ಥಿಸಿಕೊಂಡಿದ್ದರು.
ಡಿಸೆಂಬರ್ನಿಂದ ಮಾರ್ಚ್ವರೆಗೆ, ಅಂದರೆ ಸುಮಾರು ನಾಲ್ಕು ತಿಂಗಳು ಪ್ರತಿದಿನ ಎಂಬಂತೆ ಹೋರಾಟಗಳು ನಡೆದಿದ್ದವು. ಅಸ್ಸಾಂ, ಉತ್ತರ ಪ್ರದೇಶ, ಕರ್ನಾಟಕ, ಮೇಘಾಲಯ ಮತ್ತು ದೆಹಲಿಗಳಲ್ಲಿ ನಡೆದಿದ್ದ ಪ್ರತಿಭಟನೆಗಳಲ್ಲಿ ಸುಮಾರು 83 ಮಂದಿ ಮೃತಪಟ್ಟಿದ್ದರು. ಕೊರೊನಾ ಸೋಂಕಿನಿಂದ ದೇಶದ ಸಾಮಾಜಿಕ ಬದುಕು ಏರುಪೇರಾಗುವುದರೊಂದಿಗೆ ಈ ಪ್ರತಿಭಟನೆಗಳು ತಣ್ಣಗಾದವು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಇಂದಿಗೂ ಬೂದಿಮುಚ್ಚಿದ ಕೆಂಡ. ಕೊರೊನಾ ಲಸಿಕೆ ವಿತರಣೆ ಆರಂಭವಾಗಿ, ಸಾಮಾಜಿಕ ಬದುಕು ಒಂದು ಹಂತಕ್ಕೆ ಬಂದ ತಕ್ಷಣ ಮತ್ತೊಮ್ಮೆ ಪ್ರತಿಭಟನೆಗಳು ಗರಿಗೆದರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು
ವಿದೇಶಗಳಲ್ಲೂ ಪ್ರಸ್ತಾಪ ಕೃಷಿ ಸುಧಾರಣಾ ಕಾಯ್ದೆಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಪ್ರಭಾವಿಸುವ ಅಂಶಗಳನ್ನು ಭೇಷರತ್ ಹಿಂದಕ್ಕೆ ಪಡೆಯಬೇಕೆಂದು ಕೇಂದ್ರದ ವಿರುದ್ಧ ಎದೆಸೆಟೆಸಿ ನಿಂತಿರುವ ಪಂಜಾಬ್ ರೈತರ ದೆಹಲಿ ಚಲೋ ಚಳವಳಿಯ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇ ಮಾತನಾಡಿದ್ದಕ್ಕೆ ‘ದೇಶದ ಆಂತರಿಕ ವಿಚಾರದ ಬಗ್ಗೆ ಮೂಗುತೂರಿಸಬೇಡಿ’ ಎಂದು ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು ನಿಮಗಿನ್ನೂ ನೆನಪಿರಬಹುದು.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿಯೂ ಭಾರತದ ಬಗ್ಗೆ ವಿದೇಶಿ ಸರ್ಕಾರಗಳು ಮಾತನಾಡಿದ್ದವು. ಪೌರತ್ವ ತಿದ್ದುಪಡಿ ಕಾಯ್ದೆ ಒಳಗೊಂಡಿರುವ ಅಂಶಗಳು ಮತ್ತು ಅದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯ ಬಗ್ಗೆ ಹಲವು ದೇಶಗಳು ದನಿ ಎತ್ತಿದ್ದವು. ಮಲೇಷಿಯಾ ಅಧ್ಯಕ್ಷರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ ಆ ದೇಶದಿಂದ ತಾಳೆ ಎಣ್ಣೆ ಆಮದಿಗೆ ನಿರ್ಬಂಧ ವಿಧಿಸಿತ್ತು. ಪ್ರತಿಭಟನೆಯ ಕಾವಿಗೆ ಹೆದರಿದ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅಸ್ಸಾಂ ಭೇಟಿಯಿಂದ ಹಿಂದೆ ಸರಿದರು. ಈ ಕಾಯ್ದೆಯ ಬಗ್ಗೆ ಪ್ರಸ್ತಾಪಿಸಿದ ಕಾರಣಕ್ಕೆ ಟರ್ಕಿ ಜೊತೆಗಿನ ಸಂಬಂಧವೂ ಹಳಸುವಂತಾಗಿತ್ತು. ಚಳವಳಿ ತಣ್ಣಗಾಗದಿದ್ದರೆ ವಿದೇಶಗಳಲ್ಲಿ ಭಾರತದ ಪ್ರಭಾವ ಕಾಪಾಡಿಕೊಳ್ಳಲು ಪೌರತ್ವ ಕಾಯ್ದೆ ದೊಡ್ಡ ತೊಡಕಾಗುವ ಎಲ್ಲ ಸಾಧ್ಯತೆಗಳೂ ಕಂಡುಬಂದಿದ್ದವು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಬೆಳವಣಿಗೆಗಳ ಮುಂದುವರಿದ ಭಾಗ ಎನ್ನುವಂತೆ ಇದೀಗ ಅಮೆರಿಕ ಇದೇ ಕಾಯ್ದೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಂಥ ವಿಚಾರಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ಅಮೆರಿಕ ತನ್ನ ಆಕ್ಷೇಪಗಳನ್ನು ಪ್ರಸ್ತಾಪಿಸುತ್ತಲೇ ಇರುತ್ತದೆ ಎಂದು ನಿನ್ನೆಯಷ್ಟೇ (ಡಿ.9) ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಸ್ಯಾಮ್ ಬ್ರೌನ್ಬ್ಯಾಕ್ ಪ್ರತಿಕ್ರಿಯಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಭಾರತದ ಒಳಗೆ ಮತ್ತು ಹೊರಗೆ ಕಾವು ಇನ್ನೂ ಆರಿಲ್ಲ, ಅದು ಕೇವಲ ಮರೆಮಾಚಿದಂತೆ ಇದೆ ಎಂಬ ಅನಿಸಿಕೆಗೆ ಬ್ರೌನ್ಬ್ಯಾಕ್ ಹೇಳಿಕೆಯನ್ನು ಆಧಾರವಾಗಿ ತೆಗೆದುಕೊಳ್ಳಬಹುದು.
ಇದನ್ನೂ ಓದಿ: Google Search | ಗೂಗಲ್ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?
ಎಂದು ಜಾರಿ? ಪಶ್ಚಿಮ ಬಂಗಾಳದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ಆ ರಾಜ್ಯದ ವಿಧಾನಸಭಾ ಚುನಾವಣೆ ವಿಚಾರವಾಗಿಸುವ ಹುಮ್ಮಸ್ಸಿನಲ್ಲಿದೆ. ‘ಜನವರಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತೇವೆ’ ಎಂಬ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಲಾಗುತ್ತಿದೆ.
ಆದರೆ ಈ ಕಾಯ್ದೆಯ ಅನುಷ್ಠಾನಕ್ಕೆ ಕೇಂದ್ರ ಗೃಹ ಸಚಿವಾಲಯ ಇನ್ನೂ ತಕ್ಕ ಸಿದ್ಧತೆ ಮಾಡಿಕೊಂಡಿಲ್ಲ. ‘ಕಾಯ್ದೆಯನ್ನು ಜಾರಿಗೊಳಿಸುವ ಸಂಬಂಧ ನಿಯಮಗಳನ್ನು ಇನ್ನೂ ರೂಪಿಸಲಾಗುತ್ತಿದೆ. ನಿಯಮಗಳನ್ನು ಪ್ರಕಟಿಸುವ ಮೊದಲು ಕಾಯ್ದೆಯ ಜಾರಿ ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಬಿ.ಸಿ.ಜೋಶಿ ‘ದಿ ಹಿಂದೂ’ ಪತ್ರಿಕೆ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.
ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ಇದು ಬಾಂಗ್ಲಾದೇಶ, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಕಾಯ್ದೆ. 1955ರ ಪೌರತ್ವ ಕಾಯ್ದೆಗೆ ಹೊಸ ತಿದ್ದುಪಡಿಗಳನ್ನು ಸೇರಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಕಾಯ್ದೆಯ ಪ್ರಕಾರ ಈ ಧರ್ಮೀಯರು ಭಾರತದಲ್ಲಿ 6 ವರ್ಷ ವಾಸವಿದ್ದರೂ ಸಾಕು; ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಆದರೆ ಇದೇ ದೇಶಗಳ ಮುಸ್ಲಿಮರಿಗೆ ಈ ಕಾಯ್ದೆಯಲ್ಲಿ ಭಾರತ ಪೌರತ್ವ ನೀಡಲು ಆಗದು.
ಇದನ್ನೂ ಓದಿ: I can’t breath | ಮನುಷ್ಯರು ಮನುಷ್ಯರಾಗಿ ಬಾಳಲು ಅದೆಷ್ಟು ಸವಾಲುಗಳು?
ಏಕೆ ಬೇಕಿತ್ತು ಈ ಕಾಯ್ದೆ? ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಸ್ತಾಪಿಸಿತ್ತು. ‘ನೆರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವು ಅವರು ಭಾರತದ ಆಶ್ರಯ ಕೋರುವಂತೆ ಮಾಡಿದೆ. ಆರು ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಆಶ್ರಯ ನೀಡುವುದು ಮೋದಿ ಸರ್ಕಾರದ ವಚನ’ ಎಂದು ಈ ಹಿಂದೆ ಗೃಹಸಚಿವರಾಗಿದ್ದ ರಾಜನಾಥ್ ಸಿಂಗ್ ಚುನಾವಣೆ ವೇಳೆ ಆಶ್ವಾಸನೆ ನೀಡಿದ್ದರು. ಮುಸ್ಲಿಮರಿಗೆ ಅವರದೇ ಬಾಹುಳ್ಯದ ದೇಶಗಳಿವೆ, ಆದರೆ ಇತರ ಧರ್ಮೀಯರಿಗೆ ಭಾರತದ ಆಶ್ರಯ ಅಗತ್ಯವಿದೆ ಎಂಬುದು ಕಾಯ್ದೆಯ ಔಚಿತ್ಯದ ಬಗ್ಗೆ ಸರ್ಕಾರ ತಳೆದ ನಿಲುವು.
ಎನ್‌ಆರ್‌ಸಿ, ಸಿಎಎ ನಡುವೆ ಏನಿದೆ ವ್ಯತ್ಯಾಸ? ಈ ಎರಡೂ ಕಾಯ್ದೆಗಳನ್ನು ಸಮಾನಾರ್ಥ ಎಂಬಂತೆ ಕೆಲವೊಮ್ಮೆ ಬಳಸಲಾಗುತ್ತದೆ. ವಾಸ್ತವವಾಗಿ ಇವರೆಡೂ ಬೇರೆಬೇರೆ. ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (National Register of Citizens – NRC) ಅಸ್ಸಾಂನಲ್ಲಿ ಅನುಷ್ಠಾನ ಮಾಡಲಾಗಿತ್ತು. ಅದರ ಪ್ರಕಾರ ಓರ್ವ ವ್ಯಕ್ತಿಯು ತಾನು ಅಥವಾ ತನ್ನ ಪೂರ್ವಜರು 1971ರ ಮಾರ್ಚ್ 24 ಅಥವಾ ಅದಕ್ಕೂ ಮೊದಲು ಅಸ್ಸಾಂನಲ್ಲಿದ್ದರು ಎಂದು ಸಾಬೀತುಪಡಿಸಬೇಕಾಗಿತ್ತು. ಇದನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act – CAA) ಇದಕ್ಕಿಂತ ಸಂಪೂರ್ಣ ಭಿನ್ನ. ಎನ್ಆರ್ಸಿಯಲ್ಲಿ ಎಲ್ಲ ಧರ್ಮೀಯರೂ ತಾವು ಇಲ್ಲಿನ ಸ್ಥಳೀಕರು ಎಂದು ನಿರೂಪಿಸಬೇಕು. ಆದರೆ ಪೌರತ್ವ ಕಾಯ್ದೆಯು ವಿದೇಶಗಳಿಂದ ಬಂದ ಕೆಲವೇ ಧರ್ಮೀಯರಿಗೆ ಭಾರತದ ಪೌರತ್ವ ನೀಡುವ ನಿಯಮಗಳನ್ನು ಹೇಳುತ್ತದೆ.
ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
ಸಿಎಎಗೆ ಏಕಿಷ್ಟು ವಿರೋಧ? ಪೌರತ್ವ (ತಿದ್ದುಪಡಿ) ಕಾಯ್ದೆಯು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಕಾಯ್ದೆಯನ್ನು ವಿರೋಧಿಸುವವರು ಹೇಳುತ್ತಾರೆ. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದು ಎನ್ನುವುದು ಇಂಥವರ ನಿಲುವು. ಇತರ ದೇಶಗಳಿಂದ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಿದರೆ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ನಿರ್ದಿಷ್ಟ ಧರ್ಮಗಳಿಗೆ ಸೇರಿದವರ ಪ್ರಮಾಣದಲ್ಲಿಯೂ ಏರುಪೇರಾಗುತ್ತದೆ. ಇದು ಮುಸ್ಲಿಮರ ಹಿತಕ್ಕೆ ಮಾರಕ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಪೌರತ್ವ ಕಾಯ್ದೆಯ ಬಗ್ಗೆ ಬಿಜೆಪಿ ನಾಯಕರು ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಏಕಾಏಕಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಬಿಜೆಪಿ ನಾಯಕರ ನಡೆಯನ್ನು ಗಮನಿಸಿದರೆ, ಸರ್ಕಾರ ಒಂದು ವೇಳೆ ಈ ಕಾಯ್ದೆಯನ್ನು ತತ್ಕ್ಷಣಕ್ಕೆ ಜಾರಿ ಮಾಡಿದರೆ, ದೇಶದ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿದುಕೊಳ್ಳಲು ಅವರು ಪ್ರಯತ್ನಪಡುತ್ತಿರುವಂತೆ ಕಾಣಿಸುತ್ತದೆ.
ಜನವರಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಕೈಲಾಶ್ ವಿಜಯ್ ವರ್ಗಿಯಾ ಘೋಷಣೆ
CAA -ಪೌರತ್ವ ತಿದ್ದುಪಡಿ ಕಾಯಿದೆ, ಕೇಂದ್ರದ ಉನ್ನತಾಧಿಕಾರಿಗಳಿಂದ ಸ್ಪಷ್ಟನೆ
Published On - 10:48 am, Thu, 10 December 20