India on 3 Wheels: ವಿದ್ಯುತ್ ಚಾಲಿತ ಆಟೋದಲ್ಲಿ ಒಂದು ವರ್ಷ ದೇಶ ಪರ್ಯಟನೆ! ಯಾಕೀ ಸಾಹಸ? ಇಲ್ಲಿದೆ ವಿವರ

ಈ ರಿಕ್ಷಾ ಯಾನ ಸುದೀರ್ಘ ಒಂದು ವರ್ಷಗಳ ಕಾಲ ನಡೆಯಲಿದೆ. ಮುಂದಿನ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಇಂಡಿಯಾ ಆನ್ ಥ್ರೀ ವ್ಹೀಲ್ಸ್ ಪ್ರಯಾಣ ಮತ್ತೆ ಬೆಂಗಳೂರಿನಲ್ಲೇ ಕೊನೆಗೊಳ್ಳಲಿದೆ.

India on 3 Wheels: ವಿದ್ಯುತ್ ಚಾಲಿತ ಆಟೋದಲ್ಲಿ ಒಂದು ವರ್ಷ ದೇಶ ಪರ್ಯಟನೆ! ಯಾಕೀ ಸಾಹಸ? ಇಲ್ಲಿದೆ ವಿವರ
ಜೋತಿ ವಿಕ್ನೇಷ್
Follow us
|

Updated on:Dec 19, 2021 | 3:43 PM

‘India on Three Wheels, ಇಂಡಿಯಾ ಆನ್ ಥ್ರೀ ವ್ಹೀಲ್ಸ್’- ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ (Electrical Auto Rikshaw) ಸುಮಾರು 30,000 ಕಿಲೋ ಮೀಟರ್ ಪ್ರಯಾಣ. ಗಿನ್ನೆಸ್ ವಿಶ್ವ ದಾಖಲೆಯ ಸಾಹಸ (Guinness World Record). ಇದು ಸ್ವಚ್ಛ ಸಂಪನ್ಮೂಲ, ಕಡಿಮೆ ಮಾಲಿನ್ಯ ಮತ್ತು ಭೂಮಿಯ ಸಂರಕ್ಷಣೆಯ ಉದ್ದೇಶ ಇಟ್ಟುಕೊಂಡ ರೋಡ್ ಟ್ರಿಪ್ ಕೂಡ ಹೌದು. ಇಂತಹ ಸಾಹಸಕ್ಕೆ ಮುಂದಾಗಿರುವುದು ತಮಿಳುನಾಡು ಮೂಲದ ಹಾಗೂ ಬೆಂಗಳೂರಿನಲ್ಲಿ ವಾಸವಿರುವ ಯುವಕ ಜೋತಿ ವಿಕ್ನೇಷ್ (Jothi Viknesh). ಅವರು ಮಹೀಂದ್ರಾ ಟ್ರಿಯೋ (Mahindra Treo) ಎಲೆಕ್ಟ್ರಿಕ್ ಆಟೋ ರಿಕ್ಷಾದ ಮೂಲಕ ಭಾರತವನ್ನು ಏಕಾಂಗಿಯಾಗಿ ಪ್ರಯಾಣಿಸಲಿದ್ದಾರೆ.

ಸುಮಾರು 30 ಸಾವಿರ ಕಿಲೋ ಮೀಟರ್​ಗಳಷ್ಟು ದೀರ್ಘ ಪ್ರಯಾಣ ಇದಾಗಿರಲಿದ್ದು ಇದೇ ಡಿಸೆಂಬರ್ 5ರಂದು ಬೆಂಗಳೂರಿನಿಂದ ಜೋತಿ ವಿಕ್ನೇಷ್ ಪ್ರಯಾಣ ಆರಂಭಿಸಿದ್ದಾರೆ. ಈ ರಿಕ್ಷಾ ಯಾನ ಸುದೀರ್ಘ ಒಂದು ವರ್ಷಗಳ ಕಾಲ ನಡೆಯಲಿದೆ. ಮುಂದಿನ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಇಂಡಿಯಾ ಆನ್ ಥ್ರೀ ವ್ಹೀಲ್ಸ್ ಪ್ರಯಾಣ ಮತ್ತೆ ಬೆಂಗಳೂರಿನಲ್ಲೇ ಕೊನೆಗೊಳ್ಳಲಿದೆ.

ಜೋತಿ ವಿಕ್ನೇಷ್ ಯಾರು? ಅವರ ಈ ಮೊದಲ ಸಾಹಸಗಳೇನು? ಜೋತಿ ವಿಕ್ನೇಶ್ 32 ವರ್ಷದ ಯುವಕ. ಮೂಲತಃ ತಮಿಳುನಾಡಿನ ಮಧುರೈನವರು. ಕಳೆದ ಸುಮಾರು 10 ವರ್ಷಗಳಿಂದ ಬೆಂಗಳೂರುರಿನಲ್ಲಿ ವಾಸವಿರುವ ಅವರು ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದಾರೆ. ಬೆಂಗಳೂರಿನಲ್ಲೇ 10 ವರ್ಷಗಳನ್ನು ಕಳೆದಿರುವುದರಿಂದ ಕನ್ನಡ ಭಾಷೆಯನ್ನೂ ಸೊಗಸಾಗಿಯೇ ಮಾತನಾಡುತ್ತಾರೆ. ಅಂದಹಾಗೆ, ಜೋತಿ ವಿಕ್ನೇಷ್​ಗೆ ಇದು ಮೊದಲ ಪ್ರಯಾಣ ಏನಲ್ಲ. ಈ ಮೊದಲು ಕೂಡ ಎರಡು ಬಾರಿ ಬೈಕ್ ಹಾಗೂ ಕಾರ್​ನಲ್ಲಿ ದೇಶ ಸುತ್ತಿದ್ದಾರೆ ವಿಕ್ನೇಷ್!

ಈ ಮೊದಲು, 2016 ರಲ್ಲಿ ಜೋತಿ ವಿಕ್ನೇಷ್ ಏಕಾಂಗಿಯಾಗಿ ಬೈಕ್ ಮೂಲಕ ದೇಶದ ವಿವಿಧ ಭಾಗಗಳಿಗೆ ಸಂಚರಿಸಿದ್ದರು. ಬಳಿಕ, 2019 ರಲ್ಲಿ ಇಬ್ಬರು ಗೆಳೆಯರ ಜೊತೆಗೆ ಮಾರುತಿ ಸುಜುಕಿ ಬಲೆನೊ ಕಾರ್​ನಲ್ಲಿ, 8 ತಿಂಗಳ ಅವಧಿಯಲ್ಲಿ ಸುಮಾರು 40 ಸಾವಿರ ಕಿಲೋ ಮೀಟರ್ ಪ್ರಯಾಣ ಮಾಡಿದ್ದರು. ಟೂ ವ್ಹೀಲರ್, ಫೋರ್ ವ್ಹೀಲರ್ ಬಳಿಕ ಥ್ರೀ ವ್ಹೀಲರ್​ನಲ್ಲಿ ವಿಕ್ನೇಷ್ ದೇಶ ಸುತ್ತಾಟಕ್ಕೆ ಹೊರಟಿದ್ದಾರೆ.

ಈ ಪ್ರಯಾಣದ ಉದ್ದೇಶಗಳೇನು? ಜೋತಿ ವಿಕ್ನೇಷ್ ಮೊದಲ ಬಾರಿಗೆ ಬೈಕ್​ನಲ್ಲಿ ದೇಶ ಸುತ್ತಾಟಕ್ಕೆ ಹೊರಟಾಗ ಭಾರತದ ವಿವಿಧ ಜಾನಪದ ಕಲಾಪ್ರಕಾರಗಳು, ವಿವಿಧ ಸ್ಥರದ, ಸಮುದಾಯದ, ವೈವಿದ್ಯಮಯ ಸಾಂಸ್ಕೃತಿಕತೆಯ ಜನರನ್ನು ನೋಡುವುದು, ಅವರ ಜನಜೀವನವನ್ನು ಅರ್ಥ ಮಾಡಿಕೊಳ್ಳುವುದು ಅವರ ಉದ್ದೇಶ ಆಗಿತ್ತು. ಆ ಸಂದರ್ಭ ಭಾರತದ ಹಲವು ಜಾನಪದ ಕಲಾಪ್ರಕಾರಗಳ ವಿಡಿಯೋ ದಾಖಲೀಕರಣವನ್ನು ಕೂಡ ಅವರು ಮಾಡಿದ್ದರು. ವಿಕ್ನೇಷ್ ಹೇಳುವಂತೆ ಕರ್ನಾಟಕದಲ್ಲಿ ಸುಮಾರು 30, 40 ಹಾಗೇ ದೇಶದಲ್ಲಿ ಒಂದು ಸಾವಿರದಷ್ಟು ಸ್ಥಳೀಯ ಕಲಾಪ್ರಕಾರಗಳನ್ನು ಅವರು ಗಮನಿಸಿದ್ದಾರೆ.

ಕಲಿಕೆಯೇ ಮೊದಲ ಆಸೆ. ಎಲ್ಲವನ್ನೂ ನೋಡಿ, ಕೇಳಿ, ಅನುಭವಿಸಿ ಅರ್ಥ ಮಾಡಿಕೊಳ್ಳುವುದು, ಕಲಿಯುವ ಉದ್ದೇಶದಿಂದ ಆ ಪ್ರಯಾಣ ನಡೆಯಿತು. ಜೊತೆಗೆ ದಾಖಲೀಕರಣವೂ ಆಯಿತು ಎಂದು ಜೋತಿ ವಿಕ್ನೇಷ್ ಹೇಳುತ್ತಾರೆ. ‘‘ಟ್ರಾವೆಲ್ ಮಾಡಿ ಕಲಿಯೋದು ಬಹಳಷ್ಟಿದೆ. ಜನರ ಜೀವನಶೈಲಿ, ಆಹಾರ, ಸಂಸ್ಕೃತಿ ಇತ್ಯಾದಿಗಳನ್ನು ಕಲಿಯಲು ನಿಧಾನವಾಗಿ ಆರಂಭಿಸಿದೆ. ಕರ್ನಾಟಕದಲ್ಲೇ ನೋಡುವುದಾದರೆ ವೀರಗಾಸೆ, ಡೊಳ್ಳು ಕುಣಿತ ಹೀಗೆ 30, 40ರಷ್ಟು ಕಲಾಪ್ರಕಾರಗಳನ್ನು ನೋಡಿದೆ. ದೇಶಾದ್ಯಂತ ವಿವಿಧ ಹಬ್ಬಗಳು, ಸಾವಿರಕ್ಕೂ ಅಧಿಕ ಕಲಾಪ್ರಕಾರಗಳನ್ನು ನೋಡಿದ್ದೇನೆ’’ ಎಂದು ಅವರು ವಿವರಿಸುತ್ತಾರೆ. ಅದನ್ನು Indian Dance Trail by Jothi Viknesh ಎಂಬ ಯೂಟ್ಯೂಬ್ ಚಾನಲ್ ಮೂಲಕ ದಾಖಲು ಮಾಡಿದ್ದರು.

ಬಳಿಕ, ಕಾರ್ ಪ್ರಯಾಣ ‘Longest Drive by Car in a Single Country (ಲಾಂಗೆಸ್ಟ್ ಡ್ರೈವ್ ಬೈ ಕಾರ್ ಇನ್ ಅ ಸಿಂಗಲ್ ಕಂಟ್ರಿ)’ ಎಂಬ ಗಿನ್ನೆಸ್ ದಾಖಲೆ ಆಯ್ತು. ಕಾರ್​ನಲ್ಲಿ, ಒಂದೇ ದೇಶದಲ್ಲಿ ಅತಿ ದೀರ್ಘ ಪ್ರಯಾಣ ಮಾಡಿದ ದಾಖಲೆ ಜೋತಿ ವಿಕ್ನೇಷ್​ ಹೆಸರಿಗೆ ಆಯ್ತು.

Longest journey by Electrical Auto (ಲಾಂಗೆಸ್ಟ್ ಜರ್ನಿ ಬೈ ಎಲೆಕ್ಟ್ರಿಕ್ ಆಟೋ) ಇದೀಗ ಲಾಂಗೆಸ್ಟ್ ಜರ್ನಿ ಬೈ ಎಲೆಕ್ಟ್ರಿಕ್ ಆಟೋ ಅಂದರೆ ವಿದ್ಯುತ್ ಚಾಲಿತ ಆಟೋ ರಿಕ್ಷಾದಲ್ಲಿ ಇಡೀ ವಿಶ್ವದಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿ ಇಷ್ಟು ದೀರ್ಘ ಪ್ರಯಾಣ ಮಾಡುತ್ತಿರುವುದು. ಈ ದಾಖಲೆ ಕೂಡ ಜೋತಿ ವಿಕ್ನೇಷ್ ಹೆಸರಿನಲ್ಲಿ ಆಗಲಿದೆ. ಈ ಡಿಸೆಂಬರ್ 5 ರಂದು ಪ್ರಯಾಣ ಶುರು ಮಾಡಿರುವ ವಿಕ್ನೇಷ್ ಬರೋಬ್ಬರಿ ಒಂದು ವರ್ಚಗಳನ್ನು ಆಟೋ ಪ್ರಯಾಣದಲ್ಲಿ ಕಳೆಯಲಿದ್ದಾರೆ. ಮುಂದಿನ ಡಿಸೆಂಬರ್ ವೇಳೆಗೆ ಮತ್ತೆ ಬೆಂಗಳೂರಿನಲ್ಲಿ ಈ ಪ್ರಯಾಣವನ್ನು ಸಮಾಪ್ತಿಗೊಳಿಸಲಿದ್ದಾರೆ.

ಫಿಟ್ನೆಸ್ ಟ್ರೈನರ್ ಕೂಡ ಆಗಿರುವ ಜೋತಿ ವಿಕ್ನೇಷ್ ಸೇವ್ ಅರ್ಥ್, ಬಿ ಪಾಸಿಟಿವ್ ಎಂಬ ಧ್ಯೇಯೋದ್ದೇಶವನ್ನು ಕೂಡ ಹೊಂದಿದ್ದಾರೆ. ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಅದರಲ್ಲೂ ಮುಖ್ಯವಾಗಿ ಆಟೋ ರಿಕ್ಷಾಗಳ ಬಳಕೆ ಗಣನೀಯವಾಗಿ ಹೆಚ್ಚಿದೆ. ಆದರೆ, ದಕ್ಷಿಣ ಭಾರತದಲ್ಲಿ ಇನ್ನೂ ಕೂಡ ಎಲೆಕ್ಟ್ರಿಕ್ ವಾಹನ ಅಥವಾ ಆಟೋ ರಿಕ್ಷಾ ಪರಿಣಾಮಕಾರಿಯಾಗಿ ಬಂದಿಲ್ಲ. ವಿದ್ಯುತ್ ಚಾಲಿತ ಆಟೋ ರಿಕ್ಷಾ ಬಳಸುವಂತೆ ಸ್ಫೂರ್ತಿ ನೀಡುವುದು. ಅದರ ಬಗ್ಗೆ ಅರಿವು ಮೂಡಿಸುವುದು ಹಾಗೂ ಜೊತೆಜೊತೆಗೆ ಸ್ಥಳೀಯವಾಗಿ ಫಿಟ್ನೆಸ್ ಟ್ರೈನಿಂಗ್ ಕೊಡುವುದು. ಕೊವಿಡ್ ಬಳಿಕದ ಕಾಲದಲ್ಲಿ ಧನಾತ್ಮಕ ಚಿಂತನೆಗಳ ಮೂಲಕ ಬದುಕುವಂತೆ ಪ್ರೇರೇಪಿಸುವುದು ಪ್ರಯಾಣದ ಆಶಯ ಎಂದು ಜೋತಿ ವಿಕ್ನೇಷ್ ತಿಳಿಸುತ್ತಾರೆ.

ಆಟೋ ಪ್ರಯಾಣ ಹೇಗೆ ಸಾಗಲಿದೆ? ‘‘ಹಲವರಿಗೆ ಎಲೆಕ್ಟ್ರಿಕ್ ಆಟೋ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ಅದರ ಬಗ್ಗೆ ನಂಬಿಕೆ ಕಡಿಮೆ ಅಥವಾ ಅನುಮಾನ ಹೆಚ್ಚಿದೆ. ರಸ್ತೆಯ ಪ್ರಯಾಣದಲ್ಲಿ ಆಟೋ ಕಂಡು ಹಲವು ರಿಕ್ಷಾ ಡ್ರೈವರ್​ಗಳು ಎಲೆಕ್ಟ್ರಿಕ್ ವಾಹನದ ವಿವರ ಕೇಳುತ್ತಾರೆ. ಬಳಕೆಯ ಅನುಭವ ಕೇಳುತ್ತಾರೆ. ಅವರೆಲ್ಲರಿಗೆ ಪೆಟ್ರೋಲ್ ಡಿಸೆಲ್ ಖರ್ಚು, ವಾಯುಮಾಲಿನ್ಯ ಮುಂತಾದ ಸಮಸ್ಯೆಗಳನ್ನು ತಿಳಿಸಿ ವಿದ್ಯುತ್ ಚಾಲಿತ ಆಟೋ ಬಳಸುವಂತೆ ಸ್ಫೂರ್ತಿ ನೀಡುತ್ತೇನೆ’’ ಎಂದು ಜೋತಿ ವಿಕ್ನೇಷ್ ಮಾಹಿತಿ ಹಂಚಿಕೊಳ್ಳುತ್ತಾರೆ.

ಡಿಸೆಂಬರ್ 5ರಂದು ಪ್ರಯಾಣ ಆರಂಭಿಸಿರುವ ವಿಕ್ನೇಷ್ ಈಗಾಗಲೇ ಸುಮಾರು 1,500 ಕಿಲೋ ಮೀಟರ್ ವ್ಯಾಪ್ತಿ ಕ್ರಮಿಸಿದ್ದಾರೆ. ಇದೀಗ ಅವರು ಬೆಂಗಳೂರಿನಲ್ಲಿದ್ದು ಮುಂದೆ ತುಮಕೂರು, ಹಂಪಿ, ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ, ಕಾಶ್ಮೀರ, ಪಂಜಾಬ್ ಮೂಲಕ ಮಧ್ಯ ಭಾರತ ಸುತ್ತಿ ಮತ್ತೆ ದಕ್ಷಿಣದ ಕಡೆಗೆ ಬರಲಿದ್ದಾರೆ. ಈ ಪ್ರಯಾಣವು ನೇರವಾಗಿರದೆ ಜಿಗ್ ಜ್ಯಾಗ್ ಮಾದರಿಯಲ್ಲಿ ಇರಲಿದೆ ಎಂದು ವಿಕ್ನೇಷ್ ತಿಳಿಸಿದ್ದಾರೆ. ಈ ಪ್ರಯಾಣವನ್ನು ಅವರು ExpertNomad Jo ಎಂಬ ಯೂಟ್ಯೂಬ್ ಚಾನಲ್​ನಲ್ಲಿ ದಾಖಲಿಸಲಿದ್ದಾರೆ.

ಪ್ರಯಾಣಕ್ಕೆ ಖರ್ಚು ವೆಚ್ಚ? ಜೀವನ ಹೇಗೆ? ಆಟೋ ರಿಕ್ಷಾ ಚಾರ್ಜ್ ಮಾಡೋದಕ್ಕೆ ಇಂಥದ್ದೇ ಸ್ಥಳ ಎಂದಿಲ್ಲ. ಬೇಕರಿ, ರೆಸ್ಟೋರೆಂಟ್, ಮನೆಗಳಲ್ಲಿ ಸಹಾಯ ಮಾಡುತ್ತಾರೆ. ಫ್ರಿಜ್​ಗೆ ಹಾಕೋ ಪಿನ್ ಸಾಕೆಟ್ ಇದ್ದರೆ ಸಾಕು. ಜಾಸ್ತಿ ವೋಲ್ಟ್ ಬೇಕಾಗುವುದಿಲ್ಲ. ಪ್ರಯಾಣ ಆರಂಭಿಸಿ 15 ದಿನದಲ್ಲಿ 15-16 ಕಡೆ ಹೀಗೇ ಚಾರ್ಜ್ ಮಾಡಿದ್ದೇನೆ. ಉದ್ಧೇಶ ತಿಳಿದು ಹಲವು ಕಡೆ ದುಡ್ಡು ತೆಗೆದುಕೊಂಡಿಲ್ಲ. ಉಳಿಯುವುದು ಸಾಮಾನ್ಯವಾಗಿ ಸ್ಥಳೀಯ ಪೆಟ್ರೋಲ್ ಬಂಕ್, ಮನೆ, ಅಥವಾ ಮನೆಯ ಹೊರಗಿನ ಭಾಗಗಳಲ್ಲಿ. ಟೆಂಟ್ ಕೂಡ ಇದೆ. ಊಟ, ಆಹಾರವೂ ಹೀಗೇ ಎಲ್ಲಾದರೂ ಆಗುತ್ತದೆ. ಕೆಲವು ಕಡೆ ತಂಗಿದ್ದಾಗ ಅಲ್ಲಿನ ಜಿಮ್​ನಲ್ಲಿ ವರ್ಕ್ ಶಾಪ್ ಮಾಡಿ ಆ ಮೂಲಕ ಹಣವನ್ನೂ ಸಂಪಾದಿಸುತ್ತೇನೆ. ಬಹುತೇಕ ಖರ್ಚು ಬರುವುದು ಉಳಿಯುವ ಸ್ಥಳ ಹಾಗೂ ಆಹಾರಕ್ಕೆ. ಆ ಖರ್ಚನ್ನು ಆದಷ್ಟು ಕಡಿಮೆ ಮಾಡುತ್ತೇನೆ ಎಂದು ವಿಕ್ನೇಷ್ ಹೇಳುತ್ತಾರೆ.

ಜೊತೆಗೆ ವಿಕ್ನೇಷ್ ಪ್ರಯಾಣ ಮಾಡುತ್ತಿರುವುದು ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ರಿಕ್ಷಾ ಆದ ಕಾರಣ ದೇಶಾದ್ಯಂತ ಅವರ ಸರ್ವೀಸ್ ಸೆಂಟರ್​ಗಳಲ್ಲಿ ಉಚಿತ ಸರ್ವೀಸ್ ನೀಡುತ್ತಿದ್ದಾರೆ. ಉಳಿದುಕೊಳ್ಳಲು ಕೂಡ ಕೆಲವು ಕಡೆ ಅವರು ಸಪೋರ್ಟ್ ಮಾಡುತ್ತಾರೆ ಎಂಬುದು ವಿಕ್ನೇಷ್ ಹೇಳಿಕೆ. ನಾವು ಬಹುತೇಕರು 30, 40 ವರ್ಷ ವಯಸ್ಸು ಕಳೆದ ಮೇಲೆ ಪ್ರವಾಸ, ಪ್ರಯಾಣ ಹೊರಡುತ್ತೇವೆ. ಟ್ರಾವೆಲ್ ಪ್ಯಾಷನ್ ಅಂತ ಇದ್ದಾಗ, ಕನಸು ಇದ್ದರೆ ಈಗಲೇ ಆ ಕನಸನ್ನು ನನಸು ಮಾಡಬೇಕು. ನಾಳೆ ಅನ್ನುವುದಕ್ಕಿಂತ ಇಂದೇ ಕಲಿಯಬೇಕು ಎನ್ನುವುದು ವಿಕ್ನೇಷ್ ಕಿವಿಮಾತು.

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ ಭರವಸೆ ನೀಡಿದ ಕೆಲವು ಫೀಚರ್​ಗಳಿಲ್ಲ, ಆದರೆ…

ಇದನ್ನೂ ಓದಿ: 2 ವರ್ಷಗಳಲ್ಲಿ ಪೆಟ್ರೋಲ್ ವಾಹನ- ಎಲೆಕ್ಟ್ರಿಕ್ ಕಾರುಗಳ ಬೆಲೆ ಒಂದೇ ಆಗಲಿದೆ; ಸಚಿವ ನಿತಿನ್ ಗಡ್ಕರಿ

Published On - 3:42 pm, Sun, 19 December 21

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್