ನಾನೆಂಬ ಪರಿಮಳದ ಹಾದಿಯಲಿ: ಯಾವುದೂ ಥಟ್ ಅಂತ ನಮ್ಮ ಉಡಿಗೆ ಬಂದು ಬೀಳದು

ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಆಪ್ತಸಲಹೆಯ ಮೂಲಕ ಆತ್ಮಸ್ಥೈರ್ಯ ತುಂಬುತ್ತ ಹೋದೆ. ಹೋದಲ್ಲೆಲ್ಲ ನನ್ನ ಮಗಳನ್ನು ಕರೆದುಕೊಂಡು ಹೋಗುತಿದ್ದ ಕಾರಣಕ್ಕೆ ಬದುಕಿನ ನಾನಾ ಮಜಲುಗಳು ಅವಳ ಪಾಲಿಗೆ ತೆರೆದುಕೊಂಡವು, ವಿವಿಧ ಮುಖಗಳ ಪರಿಚಯವೂ ಆಗತೊಡಗಿತು. ನನ್ನ ಬಳಿ ಉತ್ತರವಿಲ್ಲದ ಅವಳ ಅನೇಕ ಪ್ರಶ್ನೆಗಳಿಗೆ ಬದುಕೇ ಉತ್ತರಿಸಲಿ ಎನ್ನುವುದು ನನ್ನ ಆಶಯವಾಗಿತ್ತು.‘ ರೂಪಾ ಸತೀಶ್

ನಾನೆಂಬ ಪರಿಮಳದ ಹಾದಿಯಲಿ: ಯಾವುದೂ ಥಟ್ ಅಂತ ನಮ್ಮ ಉಡಿಗೆ ಬಂದು ಬೀಳದು
Follow us
|

Updated on:Jan 29, 2021 | 2:46 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ 

ಬೆಂಗಳೂರಿನ ರೂಪಾ ಸತೀಶ ಅವರ ಅನುಭವ ಕಥನ ನಿಮ್ಮ ಓದಿಗೆ

ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್​ನ ನಮ್ಮ ವಿಭಾಗದ ಕ್ಯಾಪ್ಟನ್ ಆಗಿ ನಾನು ಆಯ್ಕೆಗೊಂಡಿದ್ದು ನನ್ನ ಹನ್ನೆರಡನೇ ವಯಸ್ಸಿನಲ್ಲಿ. ಅಂದು ಕರ್ನಾಟಕ ತಂಡದಿಂದ ದಿಲ್ಲಿಯಲ್ಲಿ ನಡೆಯುತಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನಕ್ಕೆ ಆಯ್ಕೆಯಾದ ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳಲ್ಲಿ ನಾನೂ ಒಬ್ಬಳು. ಶಾಲೆಯಿಂದ ಒಂದೇ ಉಸಿರಿಗೆ ಮನೆ ತಲುಪಿ ಈ ವಿಷಯ ತಿಳಿಸಿದಾಗ, ಒಂದೇ ಮಾತಿಗೆ ನನ್ನ ಅಪ್ಪ-ಅಮ್ಮ ನನ್ನನು ದಿಲ್ಲಿಗೆ ಕಳಿಸಲು ಒಪ್ಪಿದ್ದರು. ಬಹಳಷ್ಟು ಹೆಣ್ಣುಮಕ್ಕಳು ಅವಕಾಶ ವಂಚಿತರಾಗುವುದು ಬೇರೆಲ್ಲೂ ಅಲ್ಲಾ, ತಮ್ಮ ಮನೆಯವರಿಂದಲೇ ಎಂದು ಅಪ್ಪ ಹೇಳುತಿದ್ದ ಮಾತದು. ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ, ಪಿಯೂಸಿ ಮೊದಲನೇ ವರ್ಷ ಮುಗಿಸದೆ ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಸೇರುವ ಅನಿವಾರ್ಯತೆ ಎದುರಾಗಿತ್ತು.

ನನ್ನ ಚೆಂದದ ಇಬ್ಬರು ತಂಗಿಯರು, ಮುದ್ದು ತಮ್ಮ, ದೇವರಂತ ಅಪ್ಪ, ಸದಾಕಾಲ ಲವಲವಿಕೆಯಿಂದ ಇರುತಿದ್ದ ಅಮ್ಮ, ನಮ್ಮದು ಸಂತೃಪ್ತ ಕುಟುಂಬ ಎಂದರೆ ತಪ್ಪಾಗಲಾರದು. ತಾವು ಮಾಡುತಿದ್ದ ವ್ಯವಹಾರ ನಷ್ಟ ಅನುಭವಿಸಿದಾಗ ಸಾಕಷ್ಟು ಆರ್ಥಿಕವಾಗಿ, ಮಾನಸಿಕವಾಗಿ ಅಪ್ಪ ಕುಗ್ಗಿದರು. ಅದರ ಪರಿಣಾಮ ಅವರ ಆರೋಗ್ಯದ ಮೇಲೂ ಆಯಿತು. ಒಂದರ ಹಿಂದೆ ಒಂದು ಅಪ್ಪಳಿಸುವ ಅಲೆಗಳ ಹಾಗೆ ಸಮಸ್ಯೆಗಳ ಮಹಾಪೂರ ಹರಿಯಿತು. ಆರ್ಥಿಕವಾಗಿ ಎಲ್ಲವನ್ನೂ ಕಳೆದುಕೊಂಡು ಆಗಿತ್ತು, ಬಡತನದ ಕಾರ್ಮೋಡ ಆವರಿಸಿ ಪಟ್ಟಂತ ಕಷ್ಟಗಳು ಎಷ್ಟೋ. ದುರ್ಗಿಯಂತಹ ನನ್ನ ಅಮ್ಮ ಸೋಲೊಪ್ಪುವವಳಲ್ಲ. ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸಿ ನಮ್ಮನ್ನೆಲ್ಲ ಸಲಹುವ ಮಹಾತಾಯಿ. ಇಷ್ಟಾದರೂ ಮನೆಯಲ್ಲಿ ಸದಾ ಸಂತಸ, ಮಾತು, ಹರಟೆ, ಪ್ರೀತಿ, ನಗು ಇದ್ಯಾವುದಕ್ಕೂ ಎಂದೂ ಕೊರತೆ ಇರಲಿಲ್ಲ. ಕಷ್ಟಗಳೆಲ್ಲ ಒಂದು ಕಡೆಯಾದರೆ ನಾವೆಲ್ಲರೂ ಸೇರಿ ಇದ್ದಷ್ಟು ಉಂಡು, ಪುಟ್ಟ ಗುಡಿಸಿಲಿನಂತ ಮನೆಯ ಸೂರಿನಡಿ ನಕ್ಕು ಮಲಗುತ್ತಿದ್ದದ್ದು ಮತ್ತೊಂದು ಕಡೆ. ಬದುಕಿನ ದೊಡ್ಡ ಪಾಠವೆಂದರೆ ಇದೇ ಇರಬೇಕು.

ಓದು ಮುಂದುವರೆಸಲಾಗದೆ ಕೆಲಸಕ್ಕೆ ಸೇರಿ, ಮನೆಪಾಠ ಹೇಳಿಕೊಡುವುದು ಕರ್ತವ್ಯ ಹಾಗೂ ಅನಿವಾರ್ಯ ಕೂಡ ಆಯಿತು. ಚಿಕ್ಕಂದಿನಿಂದಲೇ ಬಡತನದ ನೋವು ಸಂಕಟಗಳು ಕಂಡ ಅನುಭವ, ಜೊತೆಗೆ ಯಾವುದೇ ಕಾರಣಕ್ಕೂ ನಮ್ಮ ಧೈರ್ಯ ಕಳೆದುಕೊಳ್ಳಬಾರದು ಎನ್ನುವ ಜೀವನ ಪಾಠ ಕಲಿಸುತಿದ್ದ ಅಪ್ಪ ಅಮ್ಮ. ಕಷ್ಟದಲ್ಲಿದ್ದ ಯಾರೇ ಆಗಿರಲಿ ಅಂಥವರಿಗೆ ನಮ್ಮಿಂದ ಸಾಧ್ಯವಾಗುವ ಸಹಾಯ ಮಾಡಲೇಬೇಕು ಎಂದು ನೀತಿ ಪಾಠದಂತೆ ಬದುಕಿ ತೋರಿಸಿ, ಮೌಲ್ಯಗಳಿಗೆ ಅರ್ಥ ಒದಗಿಸುತಿದ್ದ ಗುರುವಿನಂಥ ನನ್ನ ಅಪ್ಪ. ಅಂತ ಕಷ್ಟದ ದಿನಗಳಲ್ಲೂ, ‘See what you can give back to the society’ ಅನ್ನುವ ಅಪ್ಪನ ಧ್ಯೇಯವಾಕ್ಯ ಅಪಾರವಾಗಿ ಪ್ರಭಾವ ಬೀರಿತ್ತು.

ನನ್ನ ಮೊದಲ ಕೆಲಸದ ಸಂದರ್ಶನಕ್ಕೆ ಹಾಜರಾದಾಗ ನನಗೆ ಹದಿನಾರು. ನಿಮ್ಮ ಭವಿಷ್ಯದ ಯೋಜನೆ ಏನು ಹೇಳಿ ಅಂತ ಕೇಳಿದಾಗ ಕಿಂಚಿತ್ತೂ ಅಳುಕದೆ ನಾನು ಗೃಹಿಣಿಯಾಗಿ, ಮೆಚ್ಚಿನ ಮಡದಿಯಾಗಿ, ಮುದ್ದು ಮಕ್ಕಳಿಗೆ ಗೆಳತಿಯಂತಹ ಅಮ್ಮನಾಗಬೇಕು ಎಂದು ಉತ್ತರಿಸಿದ್ದೆ. ಆ ಕಡೆಯಿಂದ ಒಂದು ಸಣ್ಣ ನಗು. ಹೌದು ಸರ್, ಅಷ್ಟೇ ನನ್ನಾಸೆ. ಮತ್ತೆ… ನನ್ನ ತಂದೆ ಹೇಳುವ ಹಾಗೆ ನಮಗಿಷ್ಟೆಲ್ಲ ಅನುಕೂಲ ಮಾಡಿಕೊಟ್ಟ ಸಮಾಜಕ್ಕೆ ನಮ್ಮಿಂದಾಗುವ ಕೆಲಸಗಳನ್ನು ಮಾಡಬೇಕು. ಇದೆಲ್ಲ ಹೇಗೋ ಏನೋ ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಉತ್ತರಿಸಿದ್ದೆ. ಕೆಲಸವಂತೂ ಕಾಯಂ ಆಗಿತ್ತು. ಅಪ್ಪ ನಮ್ಮನ್ನೆಲ್ಲಾ ಅನಿರೀಕ್ಷಿತವಾಗಿ ಅಗಲಿದಾಗ ಸಾಕಷ್ಟು ಸಾಲದ ಹೊರೆಯಿತ್ತು. ತಮ್ಮ ತಂಗಿಯರ ಓದು, ಮದುವೆಯ ಜವಾಬ್ದಾರಿ ಆ ಸಮಯದ ತುರ್ತು ಆಗಿತ್ತು. ಅವರ ಮದುವೆಯ ಸಲುವಾಗಿ ಪಿಎಫ್ ಹಣ ಹಿಂಪಡೆಯಲು ಕೆಲಸಗಳನ್ನು ಬದಲಾಯಿಸಬೇಕಾಯಿತು. ನಿನ್ನೊಂದಿಗೆ ನಾನಿರುತ್ತೇನೆ ಅಮ್ಮಾ ಎಂಬ ಭರವಸೆಯನ್ನು ಅವಳಲ್ಲಿ ತುಂಬಲೇಬೇಕಿತ್ತು.

ನಂತರ ಮದುವೆಯಾಯಿತು. ಮದುವೆಯ ನಂತರ ನಾನಿನ್ನು ಕೆಲಸಕ್ಕೆ ಹೋಗಬಾರದು, ನಾನಂದುಕೊಂಡಂತೆ ಗಂಡ-ಮನೆ-ಮಕ್ಕಳೊಂದಿಗಿದ್ದರಾಯಿತು, ಮತ್ತ್ಯಾಕೆ ಕೆಲಸ ನನಗೆ ಅನ್ನುವಷ್ಟರಲ್ಲಿ, Destiny played its role! Well, played for good ಅನ್ನುವುದು ನನ್ನ ಭಾವನೆ. ಸಂಸಾರ ಅದು ಸಾಗರ, ಅಷ್ಟು ಸುಲಭದ ಪಯಣವಲ್ಲ.

ಆಗ ನನಗಿದ್ದ ಭರವಸೆ ನನ್ನ ಮಗು ಮೇಘು. ನನ್ನ ಮಗಳು ಮಾತ್ರವಲ್ಲ, ನಾನವಳ ಸ್ನೇಹಿತಯಾಗುವ ಮೊದಲು ಅವಳೇ ನನ್ನ ಆಪ್ತಸ್ನೇಹಿತೆಯಾದವಳು. ನನ್ನ ಬದುಕಿನ ಅತ್ಯಂತ ಸಂತಸದ ದಿನಗಳಲ್ಲಿ, ಕ್ಷಣಗಳಲ್ಲಿ ಮೊದಲ ಸ್ಥಾನ ಎಂದರೆ ಇವಳು ಹುಟ್ಟಿದ ಕ್ಷಣ ಎಂದೇ ಹೇಳಬಹುದು. ಅಂತ ಹೆರಿಗೆ ನೋವಿನಲ್ಲೂ ಇವಳು ಹುಟ್ಟಿದ ಕೂಡಲೇ ಲೇಬರ್ ವಾರ್ಡಿನಲ್ಲಿ ಡಾಕ್ಟರಮ್ಮನ ಕೈಗೆ ಮುತ್ತು ಕೊಟ್ಟು ಸಂತಸದ ಕಣ್ಣೀರು ಸುರಿಸಿದ್ದೆ. ದಿನವಿಡೀ ಮನೆ ಹೊರಗೂ ಒಳಗೂ ಕೆಲಸ ಮುಗಿಸಿ ದಣಿದಾಗ ನನ್ನ ಕಿನ್ನರಿಯ ಮುದ್ದಾದ ಪಾದಗಳನ್ನು ಕಣ್ಣಿಗೆ ಒತ್ತಿಕೊಂಡು ಕೂರುತ್ತಿದ್ದೆ. ಬೆಳಗ್ಗೆ ಆರೂವರೆಗೆ ಆಫೀಸಿಗೆ ಹೊರಡಬೇಕಾದರೆ, ಆರಕ್ಕೆ ಅಡುಗೆ ಮುಗಿಸಿ, ಸುಖನಿದ್ರೆಯಲ್ಲಿದ್ದ ಮಗುವನ್ನು ಬೆಚ್ಚಗೆ ಮಾಡಿಕೊಂಡು ಅತ್ತೆ ಮಾವನವರ ಕೈಗೆ ಒಪ್ಪಿಸಲು ಅವರ ಮನೆಗೆ ಹೊರಡುತ್ತಿದ್ದೆ. ಗಾಢನಿದ್ರೆಯಲ್ಲಿದ್ದ ನನ್ನ ಕಂದಮ್ಮನನ್ನು ಹೀಗೆ ಚುಮು-ಚುಮು ಚಳಿ ಗಾಳಿ ಮಳೆ ಎನ್ನದೆ ಎಬ್ಬಿಸಿಕೊಂಡು ಹೋಗುವುದು ಕರುಳ ಸಂಕಟವೇ ಅದು. ಸಂಜೆ ಹಿಂದಿರುಗಿ ಅವಳ ಮುಖ ನೋಡುವ ಖುಷಿ ಅಷ್ಟಿಷ್ಟಲ್ಲ. ನನ್ನಂತೆ ಅದೆಷ್ಟು ಅಮ್ಮಂದಿರು ಈ ಸಂಕಟ ಅನುಭವಿಸುತ್ತಿರಬಹುದು ಅಂತ ಯೋಚಿಸುತ್ತಿದ್ದೆ.

ಸದ್ಯ, ನನ್ನ ಓದು ಮುಂದುವರೆಸಲು ಮಾವನವರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತ್ತು. ಒಂದು ಡಿಗ್ರಿ ಅಂತಾದರೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿರುತ್ತದೆ ಅನ್ನುವುದು ಅವರ ನಂಬಿಕೆ. ಅಪ್ಪನಂತಹ ಅಕ್ಕರೆ ತೋರುತ್ತಿದ್ದ ಅವರ ಪ್ರೀತಿಗೆ ನಾ ಶರಣು. ಮಾನಸ ಗಂಗೋತ್ರಿಯಲ್ಲಿ ದೂರ ಶಿಕ್ಷಣದ ಮೂಲಕ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ್ದೆ. ಆಗೆಲ್ಲಾ ನಾನು ನನ್ನ ಮಗಳು ಸೇರಿಯೇ ನನ್ನ ಅಸೈನ್​ಮೆಂಟ್ ಮಾಡುತ್ತಿದ್ದೆವು. ಅವಳಿಗೆ ನನ್ನ ಪುಸ್ತಕಗಳ ಗಾತ್ರ ಕಂಡು ಭಯವಾಗುತಿತ್ತು. ದೊಡ್ಡವಳಾದ ಮೇಲೆ ನಾನೂ ಕೂಡ ಇಷ್ಟೊಂದು ಓದಬೇಕೆ?! ಅದು ಅಂದಿನ ಅವಳ ಆತಂಕ.

ಸಾಕಷ್ಟು ಕಂಪೆನಿಗಳನ್ನು ಬದಲಾಯಿಸುತ್ತಿದ್ದಂತೆ ನನ್ನದೇ ಚೌಕಟ್ಟಿನಲ್ಲಿ ನಾನೇ ಬೆಳೆಸಿಕೊಂಡು ಬಂದಿದ್ದ ಕೆಲವು ನಂಬಿಕೆಗಳು ಬದಲಾಗುತ್ತಾ ಹೋದವು. ಆಲೋಚನೆಗಳು ವಿಚಾರಗಳು ವಿಸ್ತಾರಗೊಂಡಂತೆ ನನ್ನ ದೃಷ್ಟಿಕೋನವೂ ತನ್ನ ಹೊಸ ಹಾದಿಗಳನ್ನು ಹಿಡಿದಿತ್ತು. ಯಾವುದೇ ಕ್ಷೇತ್ರವಾಗಿರಲಿ, ಪುರುಷಪ್ರಧಾನ ವಾತಾವರಣದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಪ್ರತಿ ಹಂತದಲ್ಲೂ ಸಾಬೀತು ಪಡಿಸುತ್ತಲೇ ಇರಬೇಕು. ಸ್ವಲ್ಪವೂ ವಿರಮಿಸುವಂತಿಲ್ಲ. ಇಷ್ಟಾದರೂ ತನ್ನ ಸುತ್ತಲಿನ ಜಗತ್ತು ಮುಂದೆಮುಂದೆ ಓಡುತ್ತಲೇ ಇರುತ್ತದೆ. ಮತ್ತೆ ತೆವಳಿಕೊಂಡೋ, ಓಡಿಕೊಂಡೋ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಅವಳಿಗೆ ಅನಿವಾರ್ಯ. ಸದಾ ಕಾಲಿಗೆ ಯಂತ್ರ ಕಟ್ಟಿಕೊಂಡೇ ಇರಬೇಕು. ನಿಯಮಿತವಾಗಿ ಇಂಧನ ಹಾಕುತ್ತಲೇ ಇರಬೇಕು. ಯಾವುದೂ ಥಟ್ ಎಂದು ಬಂದು ಅವಳ ಉಡಿಗೆ ಬೀಳುವುದಿಲ್ಲ.

ಅಪ್ಪ ಹೇಳುತಿದ್ದ ಮಾತು ಆಗಾಗ ನೆನಪಾಗುತಿತ್ತು. ಇನ್ನು ತಡ ಮಾಡುವಂತಿರಲಿಲ್ಲ. ಮೊದಲಿಗೆ ಮನೆಗೆ ಹತ್ತಿರವಾಗುವ ಅನಾಥಾಶ್ರಮ ಯಾವುದಾದರೂ ಇದೆಯೇ ಅಂತ ಹುಡುಕಿದೆ. ಕೊಂಚ ದೂರವಾದರೂ ಹತ್ತಿರಕ್ಕೆ ಪರಿಚಯವಾಗಿದ್ದು ನರೇಂದ್ರ ನೆಲೆ. ಅವಕಾಶ ವಂಚಿತ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡುತಿದ್ದ ಸ್ವಯಂ ಸೇವಾ ಸಂಸ್ಥೆಯದು. ಅಲ್ಲಿಗೆ ಭೇಟಿ ಕೊಟ್ಟು ಅಲ್ಲಿದ್ದ ಮಕ್ಕಳನ್ನೆಲ್ಲ ಒಮ್ಮೆ ಮಾತನಾಡಿಸಿಕೊಂಡು, ಸಿಬ್ಬಂದಿಯೊಂದಿಗೆ ಚರ್ಚಿಸಿ ಬಂದೆ. ಹಿಂದಿರುಗಿ ಬಂದಮೇಲೆ ನಾನು ನಾನಾಗಿರಲಿಲ್ಲ. ಮುಗ್ಧ ಮಕ್ಕಳ ಪಿಳಿ ಪಿಳಿ ನೋಟಗಳು, ಒಂದಷ್ಟು ಪ್ರೀತಿಗೆ ಮಮತೆಗೆ ಹಂಬಲಿಸುತ್ತಿದ್ದ ನಿರ್ಮಲ ಮುಖಗಳು ನನ್ನನು ಅತಿಯಾಗಿ ಕಾಡತೊಡಗಿದವು. ಪ್ರತಿ ಶನಿವಾರ ಮಗಳನ್ನೂ ಕರೆದುಕೊಂಡು ನರೇಂದ್ರ ನೆಲೆಗೆ ಹೋಗಿ ಆ ಮಕ್ಕಳೊಂದಿಗೆ ಸಮಯ ಕಳೆಯತೊಡಗಿದೆ.

‘3K – ಕನ್ನಡ ಕವಿತೆ ಕಥನ’ ಕಾರ್ಯಕ್ರಮದಲ್ಲಿ ಸಾಹಿತಿ ಎಸ್​. ದಿವಾಕರ ಅವರೊಂದಿಗೆ ರೂಪಾ ಸತೀಶ್

ಹೀಗಿರುವಾಗಲೇ ಹೊಸ ಕಂಪನಿಗೆ ಸೇರಿದೆ. ಅಲ್ಲಿ Corporate Social Responsibility ವಿಭಾಗವನ್ನು ರಚಿಸಲು ಮುಂದಾದೆ. ಅನೇಕ ಸ್ವಯಂ ಸೇವಾಸಂಸ್ಥೆಗಳು ಪರಿಚಯವಾದವು. ಮಕ್ಕಳ ಮುಗ್ಧ ಮನಸು ಘಾಸಿಯಾಗುವುದಕ್ಕೆ ಯಾವುದೇ ಕ್ಷಣ ಸಾಕು. ಮತ್ತವರ ಮಾತುಗಳನ್ನು ಆಲಿಸಲು, ಅವರನ್ನು ತೆಕ್ಕೆಗೆಳೆದುಕೊಳ್ಳಲು ಅವರ ಸಣ್ಣ ಪುಟ್ಟ ಗೆಲುವುಗಳನ್ನ ಸಂಭ್ರಮಿಸಲು ಅವರಿಗೆ ಪ್ರೀತಿ ತೋರುವ ಹೃದಯಗಳ ಕೊರತೆ ಇದೆ ಎಂಬ ವಿಷಯ ಕಂಡುಬಂದಿತು. ಹೀಗಾಗಿ ಮಕ್ಕಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸಗಳತ್ತ ನಾನು ಗಮನ ಹರಿಸಬೇಕು ಎಂದು ತೀರ್ಮಾನಿಸಿದೆ. ಸ್ವಯಂ ಸೇವಾ ಸಂಸ್ಥೆಗಳ ಮಕ್ಕಳಿಗೆ ಆಪ್ತಸಲಹೆ ಕೊಡುವ ಮೂಲಕ ಅವರೊಂದಿಗೆ ಇನ್ನಷ್ಟು ಬೆರೆಯಲು ಹತ್ತಿರವಾಗಲು ಸಾಧ್ಯವಾಯಿತು. ನಾನು ಹೋದಲ್ಲೆಲ್ಲ ಮಗಳನ್ನು ಕರೆದುಕೊಂಡು ಹೋಗುತಿದ್ದ ಕಾರಣ ಬದುಕಿನ ವಿವಿಧ ಮಜಲುಗಳು ಅವಳ ಪಾಲಿಗೆ ತೆರೆದುಕೊಂಡವು ಹಾಗೂ ಬಾಳಿನ ವಿವಿಧ ಮುಖಗಳ ಪರಿಚಯವಾಗತೊಡಗಿದವು. ಅವಳ ಅನೇಕ ಪ್ರಶ್ನೆಗಳಿಗೆ ಆ ಸಮಯದಲ್ಲಿ ನನ್ನ ಬಳಿ ಉತ್ತರಗಳಿರಲಿಲ್ಲ, ಬದುಕೇ ಉತ್ತರಿಸಲಿ ಎಂದು ಕಾಯುತಿದ್ದೆ.

ನನ್ನ ತಂದೆಯ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಮಾಡುವ ದಿನ ಬಂದೇ ಬಿಟ್ಟಿತು. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಅಪ್ಪನ ಹೆಸರಿನ ಟ್ರಸ್ಟ್ ಚಾಲನೆಗೊಂಡಿತು. ಅಪ್ಪನ ಕನಸುಗಳು ನನ್ನ ಕನಸುಗಳಾದವು. ಅವರು ನೆಟ್ಟ ಆಶಯಗಳು ಹೊಸ ಹೆಜ್ಜೆಗಳೆಡೆಗೆ ಆಧಾರ ಸ್ತಂಭವಾದವು. ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸವಿದ್ದ ನನಗೆ, ನನ್ನ ಕೆಲವು ಭಾವನೆಗಳನ್ನು ಕಲ್ಪನೆಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸಲು ಅನುವಾಯಿತು. ಅದರ ಪರಿಣಾಮವಾಗಿ ಇಂದು ‘3K – ಕನ್ನಡ ಕವಿತೆ ಕಥನ’ ಎಂಬ ಫೇಸ್​ಬುಕ್​ ಸಾಹಿತ್ಯ ಬಳಗ ಸೃಷ್ಟಿಯಾಯಿತು. ಈ ಮೂಲಕ ಸಾಹಿತಿ, ಕಲಾವಿದರು ಮತ್ತು ಚಿಂತಕರನ್ನು ಕರೆದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಒಂದು ದಶಕವೇ ಕಳೆದುಹೋಯಿತು. ಭಾವಸಿಂಚನ, ಶತಮಾನಂ ಭವತಿ, ಹೊಂಗೆಮರದಡಿ ನಮ್ಮ ನಿಮ್ಮ ಕತೆಗಳು ಎಂಬ ಮೂರು ಕವನ/ಕಥನ ಸಂಕಲನಗಳನ್ನು ಪ್ರಕಟಿಸಲಾಯಿತು. ಇದಕ್ಕೆ ಕಾರಣ ಅಲ್ಲಿನ ಕೋರ್ ಸದಸ್ಯರ ಭಾಷಾಭಿಮಾನ ಹಾಗೂ ಬದ್ಧತೆ.

ನಮ್ಮ ಬಾಲ್ಯಕ್ಕೆ ನಾವು ಹಿಂದಿರುಗಿದರೆ, ಬಹುಶಃ ನಮ್ಮೆಲ್ಲರ ಬದುಕಿನಲ್ಲಿ ನಾವು ಓದಿದ ಮೊದಲ ಶಾಲೆ, ಮೊದಲ ಟೀಚರ್, ಮೊದಲ ಶಾಲಾದಿನಗಳು ಎಂದಿಗೂ ಮರೆಯಲಾಗದ ನೆನಪುಗಳನ್ನು ನೀಡುತ್ತದೆ. ನಮಗೆಷ್ಟೇ ವಯಸ್ಸಾದರೂ ಈ ಅನುಭವವನ್ನು ಮಾತ್ರ ನಾವು ಮರೆಯುವಂತಿಲ್ಲ. ಈ ಸುಂದರ ನೆನಪುಗಳನ್ನು ನಮ್ಮ ಪಾಲಿಗೆ ದಕ್ಕಿಸುವುದು ಶಾಲೆಗಳ ಬಹುದೊಡ್ಡ ಜವಾಬ್ದಾರಿ. ಅಂತಹ ಒಂದು ಗುರಿ ಹೊಂದಿರುವಂತಹ ಶಾಲೆ ಬ್ಲಾಸಮ್ಸ್ ಇಂಟರ್ನ್ಯಾಷನಲ್ ಪ್ಲೇ ಸ್ಕೂಲ್. ಕೆಲಸದ ಅಗತ್ಯವಿರುವ ಹೆಣ್ಣು ಮಕ್ಕಳಿಗೆ ಅಲ್ಲಿ ಶಿಕ್ಷಕಿಯರಾಗಿ ಅವಕಾಶ ಒದಗಿಸಬೇಕೆಂಬುವ ಆಕಾಂಕ್ಷೆಯೊಂದಿಗೆ ಶಾಲೆಯನ್ನು ಪ್ರಾರಂಭಿಸಿದೆ. ಪೋಷಕರ ಮೆಚ್ಚುಗೆಗೆ ಪಾತ್ರವಾಗಿ, ಮಕ್ಕಳ ಅಚ್ಚುಮೆಚ್ಚಿನ ತಾಣವಾಗಿ ಬೆಳೆದ ಬ್ಲಾಸಮ್ಸ್ ಈಗ ಆರರ ಕೂಸು.

ಇವೆಲ್ಲದರ ನಡುವೆ ಅಮ್ಮನಾಗಿ ನಾನೆಲ್ಲೂ ಸೋಲಲು ತಯಾರಿರಲಿಲ್ಲ ಹಾಗೂ ವಿಷಾದಗಳ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ಎಂದಿಗೂ ಬೇಕಿರಲಿಲ್ಲ. ನಾ ಹಚ್ಚಿಕೊಂಡ ಕೆಲಸಗಳು, ತೆಗೆದುಕೊಂಡ ನಿರ್ಧಾರಗಳು ಮಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಯೋಚಿಸುವಷ್ಟರಲ್ಲಿ ಮೇಘು ತನ್ನ ಡ್ರಾಯಿಂಗ್/ಪೇಂಟಿಂಗ್ ಮೂಲಕ ಬಿತ್ತರಿಸುತ್ತಿದ್ದ ಚಿತ್ರಗಳು ಆಶ್ಚರ್ಯಗೊಳಿಸುತ್ತಿದ್ದವು. ಮಹಿಳಾ ಸಬಲೀಕರಣ, ಅವಳ ಸ್ವಾತಂತ್ರ್ಯ, ಹಕ್ಕುಗಳು ಇವೇ ಅವಳ ಚಿತ್ರಗಳ ವಸ್ತುಗಳಾಗಿದ್ದವು. ಸ್ವತಂತ್ರವಾಗಿ ಯೋಚಿಸುವ, ಆಲೋಚಿಸುವ ಹೆಣ್ಣುಮಗಳಾಗಿ ಅವಳು ಬೆಳೆಯುತ್ತಿರುವುದು, ಮಕ್ಕಳೊಂದಿಗೆ ಹಿರಿಯರೊಂದಿಗೆ ಅವಳು ಬೆರೆಯತ್ತಿರುವುದು, ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವುದು ನೆಮ್ಮದಿ ನೀಡುತ್ತಿದೆ. ಅವಳೊಂದಿಗೆ ನಾನೂ ಕಲಿಯುತ್ತಿದ್ದೇನೆ, ಬೆಳೆಯುತಿದ್ದೇನೆ. ಇಲ್ಲಿಗೆ ನನ್ನ ಜವಾಬ್ದಾರಿಗಳು ಮುಗಿದಂತಿಲ್ಲ, ಪ್ರತಿನಿತ್ಯ ಹೊಸ ಬದುಕು ತೆರೆದುಕೊಳ್ಳುವದನ್ನು ನಾನು ನನ್ನ ಕಾಫಿ ಕಪ್​ನೊಂದಿಗೆ ಕಾಯುತ್ತಿರುತ್ತೇನೆ.

***

ಪರಿಚಯ: ಬೆಂಗಳೂರಿನ ರೂಪಾ ಸತೀಶ್ ಅವರದು ಸುಮಾರು ವರ್ಷಗಳಿಂದ ಕಾಲ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಕಸ್ಟಮರ್ ಸಪೋರ್ಟ್ ವಿಭಾಗದ ಸೀನಿಯರ್ ಲೀಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಲಾಸಮ್​ ಇಂಟರ್ನ್ಯಾಷನಲ್​ ಎಂಬ ಶಾಲೆಯನ್ನೂ ನಡೆಸುತ್ತಿದ್ದಾರೆ. ಹವ್ಯಾಸಿ ಲೇಖಕಿಯಾದ ಇವರು ಪತ್ರಿಕೆ, ವೆಬ್​ಗಳಿಗೆ ಅಂಕಣಗಳನ್ನೂ ಬರೆದಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ಆಗ ಮದುವೆಯಾಗುವುದೇ ನನ್ನ ಪರಮಗುರಿಯಾಗಿತ್ತು!

Published On - 7:06 pm, Thu, 28 January 21