ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅರ್ಪಣ ಎಚ್. ಎಸ್.
’ಪೂನಾಚಿ, ಜಗತ್ತಿನ ಅತೀ ಸಣ್ಣ ಆಡುಮರಿಯೊಂದರ ಕಥೆ. ಪ್ರಾಣಿಗಳು, ಅವುಗಳ ಪ್ರಪಂಚ ಮಕ್ಕಳ ಸಾಹಿತ್ಯದಲ್ಲಿ ತೀರಾ ಸಾಮಾನ್ಯ. ಆದರೆ, ಪ್ರಾಣಿಗಳ ಮೂಲಕ ವಯಸ್ಕರ ಪ್ರಪಂಚದ ಕಥೆ ಹೇಳುವ, ರಾಜಕೀಯ ಸಾಮಾಜಿಕ ಸ್ಥಿತಿಗತಿಗಳನ್ನು ಅನಾವರಣಗೊಳಿಸುವ, ಶೋಷಣೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಪ್ರಯತ್ನ ನನಗೆ ತಿಳಿದಿರುವ ಮಟ್ಟಿಗೆ ಭಾರತೀಯ ಸಾಹಿತ್ಯದಲ್ಲಿ ಆಗಿರುವುದು ತೀರಾ ಕಡಿಮೆ.’ ಎನ್ನುತ್ತಾರೆ ಲೇಖಕಿ ಅರ್ಪಣ ಎಚ್. ಎಸ್.
ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಪತ್ರಕರ್ತೆ, ಲೇಖಕಿ ಅರ್ಪಣ ಎಚ್. ಎಸ್. ಅವರ ಆಯ್ಕೆಗಳು ಇಲ್ಲಿವೆ.
ಕೃ: Poonachi: Or the Story of a Black Goat ತಮಿಳು ಮೂಲ : ಪೆರುಮಾಳ್ ಮುರುಗನ್ ಇಂಗ್ಲಿಷಿಗೆ: ಎನ್. ಕಲ್ಯಾಣರಾಮನ್
ಮ್ಯಾಜಿಕ್ ರಿಯಲಿಸಂ ನನ್ನ ಇಷ್ಟದ ಸಾಹಿತ್ಯ ಶೈಲಿಯೇನೂ ಅಲ್ಲ. ಆದರೆ, ತಮಿಳು ಸಾಹಿತಿ ಪೆರುಮಾಳ್ ಮುರುಗನ್ ಅವರ ಪೂನಾಚಿ ಕಾದಂಬರಿಯ ಮ್ಯಾಜಿಕ್ ರಿಯಲಿಸಂ ಅಂಶಗಳು ಎಷ್ಚು ಪರಿಣಾಮಕಾರಿಯಾಗಿದೆಯೆಂದರೆ ಅತೀ ಮುಖ್ಯವಾದ ಹಾಗೂ ಸೂಕ್ಷ್ಮವಾದ ಸಾಮಾಜಿಕ ಹಾಗೂ ರಾಜಕೀಯ ಸಂಗತಿಯೊಂದನ್ನು ಹೇಳಲು ಪ್ರಾಯುಶಃ ಇದಕ್ಕಿಂತ ಉತ್ತಮ ಶೈಲಿ ಬೇರಿಲ್ಲಎನ್ನಿಸುವಷ್ಚು. ಪೂನಾಚಿ, ಜಗತ್ತಿನ ಅತೀ ಸಣ್ಣ ಆಡುಮರಿಯೊಂದರ ಕಥೆ. ಪ್ರಾಣಿಗಳು, ಅವುಗಳ ಪ್ರಪಂಚ ಮಕ್ಕಳ ಸಾಹಿತ್ಯದಲ್ಲಿ ತೀರಾ ಸಾಮಾನ್ಯ. ಆದರೆ, ಪ್ರಾಣಿಗಳ ಮೂಲಕ ವಯಸ್ಕರ ಪ್ರಪಂಚದ ಕಥೆ ಹೇಳುವ, ರಾಜಕೀಯ ಸಾಮಾಜಿಕ ಸ್ಥಿತಿಗತಿಗಳನ್ನುಅನಾವರಣಗೊಳಿಸುವ, ಶೋಷಣೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಪ್ರಯತ್ನ ನನಗೆ ತಿಳಿದಿರುವ ಮಟ್ಟಿಗೆ ಭಾರತೀಯ ಸಾಹಿತ್ಯದಲ್ಲಿ ಆಗಿರುವುದು ತೀರಾ ಕಡಿಮೆ.
ಇಲ್ಲಿ ಆಡಿನಮರಿ ಪೂನಾಚಿಯೇ ಕಥಾ ನಾಯಕಿ. ಆಕೆಯ ಹುಟ್ಟು, ಬೆಳವಣಿಗೆ, ಬಾಲ್ಯ, ಪ್ರೇಮ ಪ್ರಕರಣ, ತಾಯ್ತನ, ಹಸಿವು, ಹೋರಾಟ ಇವೆಲ್ಲವೂ ಎಷ್ಟು ನೈಜ್ಯವಾಗಿ ನಿರೂಪಿತವಾಗಿದೆಯೆಂದರೆ, ಓದುಗರಿಗೆ ಓರ್ವ ಮಾನವ ಪಾತ್ರದೊಂದಿಗೆ ಹುಟ್ಟಬಹುದಾದ ತಾದಾತ್ಮ್ಯತೆಗಿಂತಲೂ ಹೆಚ್ಚಿನ ಮಟ್ಟದ ಅನುಭೂತಿ ಪೂನಾಚಿ ಜೊತೆ ಸಾಧ್ಯವಾಗುತ್ತದೆ. ಲೇಖಕರೇ ಹೇಳುವಂತೆ ‘ಸದ್ಯದ ಪರಿಸ್ಥಿತಿಯಲ್ಲಿ ಮನುಷ್ಯರ, ದೇವರ ಮತ್ತು ಕೆಲವು ಪ್ರಾಣಿಗಳ ಮೇಲೆ ಕಥೆ ಬರೆಯುವುದು ಅಪಾಯಕಾರಿ. ಆಡು, ಕುರಿ ಈ ವಿಷಯದಲ್ಲಿ ನಿರುಪದ್ರವ ಜೀವಿಗಳು.’ ಪೆರುಮಾಳ್ ಹೇಳುವ ಕುರಿಮಂದೆಯ ಕಥೆ ತನ್ನ ವಿಭಿನ್ನ ಶೈಲಿ, ದನಿ ಮತ್ತು ಗಟ್ಟಿತನದಿಂದಾಗಿ ತುಂಬಾ ಮೆಚ್ಚುಗೆಯಾಯಿತು. ಸರಳ ಮತ್ತು ನೇರವಾದ ಇಂಗ್ಲಿಷ್ ಅನುವಾದ, ತಮಿಳೇತರ ಓದುಗರಿಗೂ ಮೂಲ ತಮಿಳಿನ ಸಾರವನ್ನು ದೊರಕಿಸಿಕೊಟ್ಟಿದೆ ಎಂಬುದು ನನ್ನ ಅನಿಸಿಕೆ.
ಕೃ: A Time Of Madness: A Memoir Of Partition ಲೇ: Salman Rashid ಪ್ರ: Aleph Book Company
ನಿಜ ಹೇಳಬೇಕೆಂದರೆ ಲೇಖಕರ ಹೆಸರನ್ನು ಸಲ್ಮಾನ್ ರಶ್ದಿ ಎಂದು ತಪ್ಪಾಗಿ ಓದಿದ್ದರಿಂದ ಈ ಪುಸ್ತಕವನ್ನು ಕೈಗೆತ್ತಿಕೊಂಡೆ. ಆದರೆ ಮೊದಲೆರಡು ಪುಟಗಳನ್ನು ತಿರುವುದರೊಳಗೆ ಇದು ಪಾಕಿಸ್ತಾನಿ ಲೇಖಕ ಸಲ್ಮಾನ್ ರಶೀದ್ ಅವರ ಪುಸ್ತಕ ಎಂಬುದು ಅರಿವಿಗೆ ಬಂತು. ನಾನು ಸಲ್ಮಾನ್ ರಶೀದ್ ಅವರ ಹೆಸರೂ ಕೇಳಿರಲಿಲ್ಲ. ಅವರ ಯಾವುದೇ ಪುಸ್ತಕ ಓದಿರಲೂ ಇಲ್ಲ. ಆದರೆ, ತನ್ನ ಮೊದಲ ಅಧ್ಯಾಯದಲ್ಲೇ ಪುಸ್ತಕ ನನ್ನನ್ನು ಎಷ್ಟರಮಟ್ಟಿಗೆ ಹಿಡಿದಿಟ್ಟಿತೆಂದರೆ ನನ್ನ ತಪ್ಪು ಗ್ರಹಿಕೆಯ ಬಗ್ಗೆ ಖುಷಿಯೇ ಆಯಿತು.
ತನ್ನ ಬೇರಿನ ಕುರಿತು ಮನುಷ್ಯನಿಗೆ ಇನ್ನಿಲ್ಲದ ಸೆಳೆತ, ಆಕರ್ಷಣೆ. ಆದರಲ್ಲೂ, ಮೂಲದೊಂದಿಗೆ ಎಲ್ಲಾ ಸಂಬಂಧಗಳು ಕಡಿದು ಹೋಗಿರುವಾಗ, ಅದು ಸುಲಭವಾಗಿ ದಾಟಲಾರದ ಬೃಹತ್ ಬೇಲಿಯ ಹಿಂದಿರುವಾಗ, ಅದರ ಹುಡುಕಾಟ ಮತ್ತು ಸತ್ಯದ ಅನ್ವೇಷಣೆ ಕಷ್ಟ ಎಂದಾದಾಗ ಆ ಕುರಿತ ಸೆಳೆತವೂ ಹೆಚ್ಚಾಗುತ್ತದೆ. ದೇಶ ವಿಭಜನೆಯ ಸಂದರ್ಭದಲ್ಲಿ ಈಗಿನ ಪಾಕಿಸ್ತಾನ ತೊರೆದು ಭಾರತಕ್ಕೆ ವಲಸೆ ಬಂದ ಹಿಂದು ಮತ್ತು ಸಿಖ್ಖರ ಕಥೆಗಳನ್ನು ನಾನು ಸಾಕಷ್ಚುಓದಿದ್ದರೂ, ಭಾರತ ತೊರೆದು ಪಾಕಿಸ್ತಾನ ಸೇರಿದ ಕುಟುಂಬದ ಕತೆ ಓದಿದ್ದು ಇದೇ ಮೊದಲು.
ಲೇಖಕ ಸಲ್ಮಾನ್ ಕುಟುಂಬದವರು ವಿಭಜನೆಯ ಸಂದರ್ಭದಲ್ಲಿ ಪಂಜಾಬಿನ ಜಲಂಧರ್ ತೊರೆದು ಪಾಕಿಸ್ತಾನಕ್ಕೆ ವಲಸೆ ಬಂದವರು. ಸುಮಾರು 60 ವರ್ಷಗಳ ನಂತರ ಸಲ್ಮಾನ್ ತಮ್ಮ ಮೂಲಸ್ಥಾನದ ಅನ್ವೇಷಣೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಅನುಭವದ ಕಥಾನಕವೇ ಈ ಪುಸ್ತಕ. ಕೊನೆಯಲ್ಲಿ, ತನ್ನ ಅಜ್ಜ (ತಾಯಿಯ ತಂದೆ) ಮತ್ತು ಕುಟುಂಬದವರನ್ನು ಬಲಿತೆಗೆದುಕೊಂಡಿದ್ದ ಗುಂಪಿನ ನಾಯಕನ ಮಗನೊಂದಿಗೆ ಸಲ್ಮಾನ್ ಮುಖಾಮುಖಿಯಾಗುತ್ತಾರೆ. ಇದರಲ್ಲಿ ಗಡಿಯ ಎರಡೂ ಕಡೆ ನಡೆದ ದೇಶ ವಿಭಜನೆಯ ಕರಾಳ ಕಥೆಗಳ ಜೊತೆಗೆ, ಎರಡು ಸೋದರ ಶತ್ರುಗಳ ದೇಶಗಳ ಸಾಮ್ಯತೆ, ಭಿನ್ನತೆ ಮತ್ತು ಸಂಬಂಧಗಳ ಕತೆಯೂಇದೆ. ಭಾರತದ ಕುರಿತು, ಭಾರತೀಯರ ಕುರಿತು ಪಾಕಿಸ್ತಾನಿ ನಾಗರಿಕನೊಬ್ಬನ ಪ್ರಾಮಾಣಿಕ ಅನಿಸಿಕೆ, ಪಾಕಿಸ್ತಾನ ಸೋತಿದ್ದೆಲ್ಲಿ ಎಂಬ ಆತ್ಮವಿಮರ್ಶೆ ಪುಸ್ತಕದಲ್ಲಿರುವ ಮಾನವೀಯ ಕಥಾನಕದಷ್ಟೇ ಆಕರ್ಷಕವಾಗಿದೆ. ಹೀಗಾಗಿ, ಕೇವಲ ವಿಭಜನೆಯ ಕುರಿತ ಭಾವನಾತ್ಮಕ ಮೆಲುಕಿನಂತೆ ಮಾತ್ರವಲ್ಲದೆ ಮಾಹಿತಿ, ವಿವರಣೆ ಹಾಗೂ ಸರಳ ವಿಶ್ಲೇಷಣೆಯ ಮೂಲಕವೂ ಈ ಪುಸ್ತಕ ಗಮನ ಸೆಳೆಯುತ್ತದೆ.
Published On - 4:55 pm, Wed, 30 December 20