ಆನಂದ ಮತ್ತು ಸಂತೋಷ ಒಂದೇ ಆಗಿದೆಯೇ ಅಥವಾ ವ್ಯತ್ಯಾಸವಿದೆಯೇ?
ಮಾನವ ಜನ್ಮ ಮತ್ತು ಅವನ ಜೀವನ ಎಂಬುದು ಸ್ವಾಭಾವಿಕವಾಗಿ ಅತ್ಯಂತ ಕ್ರಿಯಾಶೀಲವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಿಶೇಷ ಸಾಧನೆ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅದೃಶ್ಟವಶಾತ್ ಕೆಲವರು ಸಫಲರಾಗುವರು. ಇನ್ನು ಕೆಲವರು ಮಧ್ಯದಲ್ಲೇ ವಿರಮಿಸುವರು.
ಮಾನವ ಜನ್ಮ ಮತ್ತು ಅವನ ಜೀವನ ಎಂಬುದು ಸ್ವಾಭಾವಿಕವಾಗಿ ಅತ್ಯಂತ ಕ್ರಿಯಾಶೀಲವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಿಶೇಷ ಸಾಧನೆ ಮಾಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅದೃಶ್ಟವಶಾತ್ ಕೆಲವರು ಸಫಲರಾಗುವರು. ಇನ್ನು ಕೆಲವರು ಮಧ್ಯದಲ್ಲೇ ವಿರಮಿಸುವರು. ಮತ್ತು ಕೆಲವರು ದಾರಿ ಬದಲಿಸಿ ಸಾಧಿಸಲಾಗದೇ ಸೋಲೊಪ್ಪುವರು. ಈ ರೀತಿಯ ಕ್ರಿಯೆಗಳು ಅಥವಾ ಪ್ರಯತ್ನಗಳು ಅವನಿಗೊಪ್ಪುವ ಅವನಿಷ್ಟದಂತೆ ಮನುಷ್ಯ ಮಾಡುತ್ತಲೇ ಇರುತ್ತಾನೆ. ಯಾಕೆ ಹೀಗೆ ಎಂದು ಕೇಳಿದರೆ ಸಂತೋಷಕ್ಕಾಗಿ ಅಥವಾ ಸುಖಕ್ಕಾಗಿ ಎಂದು ಸಾಮಾನ್ಯವಾಗಿ ಹೆಚ್ಚಿನವರು ಉತ್ತರಿಸುತ್ತಾರೆ. ಕೆಲವರು ತನಗೆ ಈ ಕೆಲಸದಿಂದ ಆನಂದವಿದೆ ಅದಕ್ಕೆಮಾಡುತ್ತೇನೆ ಎನ್ನುವರು.
ಈಗ ಪ್ರಶ್ನೆ ಉದ್ಭವಿಸುವ ಸಾಧ್ಯತೆ ಇದೆ. ಸಂತೋಷ / ಸುಖ ಮತ್ತು ಆನಂದ ಒಂದೆಯಾ ಅಥವಾ ಬೇರೆ ಬೇರೆಯಾ ಎಂಬುದಾಗಿ. ಮೇಲ್ನೋಟಕ್ಕೆ ಇವುಗಳು ಸಮಾನಾರ್ಥಕ ಪದಗಳಂತೆ ಕಂಡುಬಂದರೂ ಸರಿಯಾಗಿ ವಿಮರ್ಶಿಸಿದಾಗ ಬೇರೆಯೇ ಆಗಿದೆ. ಸುಖ ಮತ್ತು ಸಂತೋಷಗಳೇನಿವೆ ಅದಕ್ಕೆ ಮಿತಿಯಿದೆ. ಹಾಗೆಂದರೇನು ಅಂತ ಕೇಳಬಹುದು ನೀವು? ಈಗ ನೋಡಿ – ಚೆನ್ನಾಗಿ ಮಲಗಿ ಗಾಢವಾಗಿ ನಿದ್ರಿಸಿ ಎದ್ದ ಮೇಲೆ ನೀವೇನನ್ನುತ್ತೀರಿ ? ಸುಖವಾದ ನಿದ್ರೆ ಬಂತು ಅನ್ನುವಿರಿ. ಸುಖದ ಪರಿಮಿತಿ ಎಲ್ಲಿಯ ತನಕ ಯೋಚಿಸಿ…. ಮಲಗಿ ಏಳುವಲ್ಲಿಗೆ ಮುಗಿದಿರುತ್ತದೆ. ಅರ್ಥಾತ್ ಈ ಸುಖವೆನ್ನುವುದು ಮಿತಿಯೊಳಗಿದೆ ಅಂತಾಯಿತಲ್ಲವೇ? ಇನ್ನು ಸಂತೋಷದ ಬಗ್ಗೆ ಹೇಳುವುದಾದರೆ… ಒಳ್ಳೆಯ ಉತ್ತಮ ಊಟವಾದ ನಂತರ ನಾವು ಹೇಳುತ್ತೇವೆ ಊಟ ಚೆನ್ನಾಗಿತ್ತು ತುಂಬಾ ಸಂತೋಷವಾಯಿತು ಎಂದು. ಈ ಸಂತೋಷ ಮುಂದೆ ಹಸಿವಾಗುವ ತನಕ ಇರುತ್ತದೆ. ಆಮೇಲೆ ಅದರ ಮಿತಿ ಮುಗಿಯುತ್ತದೆ. ಅಂದರೆ ಸಂತೋಷಕ್ಕೂ ಮಿತಿಯಿದೆ ಎಂದಾಯಿತು.
ಉಪನಿಷತ್ತಿನ ಪ್ರಕಾರ ಸಂತೋಷ ಮತ್ತು ಸುಖವೆನ್ನುವುದು ಕೇವಲ ಭ್ರಮೆ. ಹೇಗೆಂದರೆ ಒಂದು ಕಥೆಯಿದೆ ಒಂದು ನಾಯಿಯು ಮೂಳೆಯನ್ನು ನೆಕ್ಕುತ್ತದೆ. ಕ್ರಮೇಣ ಅದನ್ನು ಕಡಿಯುತ್ತದೆ. ವಾಸ್ತವವಾಗಿ ಮೂಳೆಯಲ್ಲಿ ನೆಕ್ಕಿದಾಕ್ಷಣವೇ ಮಾಂಸದ ಅಂಶ ಹೋಗಿರುತ್ತದೆ. ಆದರೂ ಅದು ಮೂಳೆಯನ್ನು ಸತತವಾಗಿ ಕಡಿಯುತ್ತಲೇ ಇರುತ್ತದೆ. ಈ ಘರ್ಷಣೆಯ ಫಲವಾಗಿ ತನಗೆ ಅರಿವಿಲ್ಲದಂತೆ ನಾಯಿಯ ವಸಡಿನಿಂದ ರಕ್ತ ಜಿನುಗಲಾರಂಭಿಸುತ್ತದೆ. ಪಾಪ ನಾಯಿಯು ಅದು ತನ್ನ ಕಡಿತದಿಂದಾಗಿ ಮೂಳೆಯಿಂದ ಬಂದ ರಕ್ತ ಎಂಬ ಭ್ರಮಾತ್ಮಕ ಭಾವದಿಂದ ತನ್ನ ರಕ್ತವನ್ನೇ ಸವಿಯುತ್ತದೆ. ಇದರಿಂದ ಅದು ಸುಖವನ್ನು ಅನುಭವಿಸುತ್ತಿರುತ್ತದೆ. ಮೇಲ್ನೋಟಕ್ಕೆ ಇದು ಸುಖದಂತೆ ಕಂಡರೂ ಕ್ರಮೇಣ ಅದರಿಂದ ವೇದನೆ ಆರಂಭವಾಗುತ್ತದೆ. ಆದರೆ ನಿಜಾಂಶವೇನೆಂದರೆ ಅದರಿಂದ ತನ್ನ ದೇಹಕ್ಷತವಾಗುತ್ತಿರುವುದು ಅರಿವಿಗೆ ಬಾರದೇ ಇದ್ದು ಅದನ್ನೇ ಸುಖವೆಂದು ಭ್ರಮಿಸಿರುವುದು. ಅದೇ ರೀತಿ ಸಂತೋಷವೂ ಹೌದು. ಅದೆಷ್ಟೋ ಸಲ ನಮ್ಮ ಸಂತೋಷ ಪರರ ವೇದೆನೆಗೆ ಕಾರಣವಾಗಿರುತ್ತದೆ. ಪರರ ವೇದನೆಗೆ ಕಾರಣಗಳಾದ ಸುಖ ಅಥವಾ ಸಂತೋಷ ಎನ್ನುವುದು ಪಾಪೋತ್ಪತ್ತಿ ಮಾಡುತ್ತದೆ ಎಂಬುದು ಶಾಸ್ತ್ರದ ಮಾತು. ಹಾಗೆಯೇ ಮೊದಲಿಗೆ ಸಂತೋಷ ಅಥವಾ ಸುಖದಂತೆ ಕಂಡು ಕ್ರಮೇಣ ಅದರಿಂದ ದುಃಖೋತ್ಪತ್ತಿ ಆಗುತ್ತದೆ ಎಂದಾದರೆ ಅದು ಅನಿವಾರ್ಯವೇ ಎಂದು ಯೋಚಿಸಿ.
ಇದನ್ನೂ ಓದಿ:Spiritual: ಪತ್ನಿ ಕಲಹ ನಿವಾರಣೆಗೆ ಯಾವ ವ್ರತ ಮಾಡಬೇಕು? ಇಲ್ಲಿದೆ ನೋಡಿ
ಆದರೆ ಆನಂದ ಹಾಗಲ್ಲ. ಇದು ನಿತ್ಯ ಮತ್ತು ಶಾಶ್ವತ. ಸಿಹಿ ತಿಂದಾಗ, ತನ್ನ ಪ್ರಿಯಕರ/ಪ್ರಿಯತಮ ಸಿಕ್ಕಿದಾಗ, ಸಂಪತ್ತು ಪ್ರಾಪ್ತವಾದಾಗ ಉತ್ಪತ್ತಿ ಆಗುವುದಲ್ಲ. ಇಂತಹ ಅಂಶಗಳಿಗೆ ಕೊನೆಯಿದೆ. ಆನಂದಕ್ಕೆ ಕಾರಣಗಳೇ ಬೇಕಿಲ್ಲ. ಇದನ್ನು ಅನುಭವಿಸಲು ಜೊತೆಗೆ ಯಾರೂ ಇರಬೇಕಿಲ್ಲ ಇದ್ದರೂ ಪರವಾಗಿಲ್ಲ. ಆರ್ಥಿಕ ಸವಲತ್ತು ಬೇಕಿಲ್ಲ ಇದಕ್ಕೆ. ಇದು ಹೇಗೆಂದರೆ ಎಲ್ಲದರೊಂದಿಗೆ ಇದ್ದುಕೊಂಡು ಯಾವುದಕ್ಕೂ ಅಂಟಿಕೊಳ್ಳದೇ ಇರುವುದು. ಕೆಸವಿನ ಎಲೆಯೆಂತೆ . ಕೆಸರಲ್ಲಿದ್ದರೂ ನೀರ್ರುಬಿದ್ದರೂ ಅದಕ್ಕೆ ಅದು ಅಂಟಿಕೊಳ್ಳುವುದೇ ಇಲ್ಲ. ಹಾಗೇ ಇದರ ಸ್ಥಿತಿ. ವಚನಕಾರರು ಹೇಳುವ ಅಂತರಂಗ ಬಹಿರಂಗ ಶುದ್ಧಿ ಅಂದರೆ ಇದೇ ಆಗಿದೆ. ಅದನ್ನೇ ಉಪನಿಷತ್ ಹೇಳುತ್ತದೆ. ಭಗವಂತ ಯಾರು ಎಂಬುದಾಗಿ ಒಬ್ಬ ಋಷಿಯನ್ನು ಕೇಳಿದಾಗ ಅವರು ಅವನಿಗೆ ಹಲವಾರು ಸುಖಾತ್ಮಕವಾದ ಹೇತುಗಳನ್ನು (ರೂಪಗಳನ್ನು) ತೋರಿಸಿ ಹೇಳುತ್ತಾರೆ ಇದೇ ದೇವರು ಎಂದು. ಪರಿಶೀಲಿಸಿ ಒಪ್ಪದ ಅವನಿಗೆ ಕೊನೆಯದಾಗಿ ಹೇಳುತ್ತಾರೆ ಆನಂದೋ ಬ್ರಹ್ಮೇತಿವ್ಯಜಾನಾತ್ ಎಂಬುದಾಗಿ. ಅಂದರೆ ಭಗವಂತನೆಂದರೆ ಆನಂದ. ಈ ಆನಂದದ ಅನುಭೂತಿ ಒಮ್ಮೆ ಅನುಭವಿಸಲು ಶುರುವಾಯಿತೆಂದರೆ ಯಾವ ಭಯವೂ ಇಲ್ಲ, ಯಾವ ದುಃಖವೂ ಹತ್ತಿರ ಸುಳಿಯದು. ಇದಕ್ಕೊಂದೇ ದಾರಿ ಭ್ರಮೆಯನ್ನು ಬಿಟ್ಟು ಭಗವದನುಸಂಧಾನ ಅಂದರೆ ಧ್ಯಾನ ಸಾಧನೆಯನ್ನು ಮಾಡುವುದು. ಚಿನ್ಮುದ್ರೆಯಲ್ಲಿ ನೇರವಾಗಿ ಕುಳಿತು ಕಣ್ಣುಮುಚ್ಚಿ ಸ್ವಾರ್ಥ ರಹಿತವಾಗಿ ಇಷ್ಟದೇವನ ನಾಮಸ್ಮರಣೆ ಮಾಡಿರಿ. ಕ್ರಮೇಣ ಅನುಭವಕ್ಕೆ ಬರುವುದು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು.