ಪಾಪ ಯಾರದ್ದು? ಮಾಡಿದವನ ಪಾಪ ಆಡಿದವನ ಬಾಯಿಯಲ್ಲಿ ಇದು ನಿಜವೇ?
ಹಿರಿಯರು ಹೇಳುವುದನ್ನು ಕೇಳಿರುತ್ತೇವೆ ನಾವು ಮಾಡಿದವನ ಪಾಪ ಆಡಿದವನ ಬಾಯಿಯಲ್ಲಿ ಎಂಬ ಮಾತನ್ನು. ಇದನ್ನು ಕೆಲವರು ಒಪ್ಪಬಹುದು ಇನ್ನು ಕೆಲವರು ಒಪ್ಪದೆಯೂ ಇರಬಹುದು. ಆದರೆ ಈ ಗಾದೆ ಮಾತು ಅಕ್ಷರಶಃ ಸತ್ಯವಂತು ಹೌದು. ಈ ಪುರಾಣದ ಕಥೆಯನ್ನು ಒಮ್ಮೆ ಓದಿ ತಿಳಿಯುತ್ತದೆ.
ಹಿರಿಯರು ಹೇಳುವುದನ್ನು ಕೇಳಿರುತ್ತೇವೆ ನಾವು ಮಾಡಿದವನ ಪಾಪ ಆಡಿದವನ ಬಾಯಿಯಲ್ಲಿ ಎಂಬ ಮಾತನ್ನು. ಇದನ್ನು ಕೆಲವರು ಒಪ್ಪಬಹುದು ಇನ್ನು ಕೆಲವರು ಒಪ್ಪದೆಯೂ ಇರಬಹುದು. ಆದರೆ ಈ ಗಾದೆ ಮಾತು ಅಕ್ಷರಶಃ ಸತ್ಯವಂತು ಹೌದು. ಈ ಪುರಾಣದ ಕಥೆಯನ್ನು ಒಮ್ಮೆ ಓದಿ ತಿಳಿಯುತ್ತದೆ. ಒಂದು ಕಾಲದಲ್ಲಿ ಧರ್ಮಧ್ವಜನೆಂಬ ರಾಜ ಉತ್ತಮ ರೀತಿಯಲ್ಲಿ ರಾಜ್ಯಭಾರ ನಡೆಸುತ್ತಿದ್ದ. ಅವನ ಹೆಸರಿಗೆ ಶೋಭೆಯೋ ಎಂಬಂತೆ ಎಲ್ಲಾ ವಿಭಾಗಳಲ್ಲೂ ಅದರದ್ದೇ ಆದ ಧರ್ಮವನ್ನು ಮೀರಿ ನಡೆಯುತ್ತಿರಲಿಲ್ಲ. ಒಂದು ಸಲ ರಾಜ್ಯದಲ್ಲಿ ಅಕಸ್ಮಾತ್ತಾಗಿ ಬೆಳೆಹಾನಿಯಾಯಿತು. ಇದರ ಕಾರಣವನ್ನು ಪರಿಶೀಲಿಸಿದಾಗ ಸಾವಿರ ಜನ ವೇದಜ್ಞರನ್ನು ಕರೆಸಿ ಅವರಿಂದ ವೇದಾದಿಗಳ ಪಾರಾಯಣ ಮಾಡಿಸಿ ಸಂತರ್ಪಣೆ ಮಾಡಿದರೆ ಕ್ಷೇಮವಾಗುವುದು ಎಂಬ ಸೂಚನೆ ಬರುತ್ತದೆ.
ಅದರಂತೆ ರಾಜನು ಪಾರಾಯಣಾದಿಗಳನ್ನು ಮುಗಿಸಿ ಸಂತರ್ಪಣೆಗೆ ಸಿದ್ಧತೆ ನಡೆಸುತ್ತಿರುವಾಗ ಆಕಾಶ ಮಾರ್ಗದಲ್ಲಿ ಒಂದು ಗಿಡುಗ ತನ್ನ ಕೊಕ್ಕಲ್ಲಿ ಹಾವೊಂದನ್ನು ಕಚ್ಚಿಕೊಂಡು ಹೋಗುತ್ತಿತ್ತು. ಅದಕ್ಕೂ ಇವರಿಗೂ ಗೊತ್ತಾಗದೇ ಆ ಸರ್ಪದ ಬಾಯಿಯಿಂದ ಒಂದು ಬಿಂದು ವಿಷ ಸಿದ್ಧವಾಗುತ್ತಿರುವ ಆಹಾರದ ಮೇಲೆ ಬಿತ್ತು.
ಇದನ್ನೂ ಓದಿ:Spiritual; ಕೃಷ್ಣ ಅಭಿನಂದಿಸಿದ ಕರ್ಣನ ಗುಣ ಪರಾಕ್ರಮ ಯಾವುದು? ಕರ್ಣನ ರಥದ ಮಹತ್ವ ಇಲ್ಲಿದೆ
ಇದರ ಕಾರಣದಿಂದಾಗಿ ಅಲ್ಲಿ ಆಹಾರ ಸೇವಿದ ಹಲವರು ಜೀವವನ್ನು ಕಳೆದುಕೊಂಡರು. ಇನ್ನು ಕೆಲವರು ತೀವ್ರ ಅಸ್ವಸ್ಥರಾದರು. ಧರ್ಮಪರಾಯಣನಾದ ಈ ಧರ್ಮಧ್ವಜನೆಂಬ ರಾಜನಿಗೆ ಇದರಿಂದಾಗಿ ಅತೀವ ದುಃಖವಾಯಿತು. ಲೋಕಕಲ್ಯಾಣದ ಕಾರ್ಯದಲ್ಲಿ ಲೋಕಕಂಟಕವಾತಲ್ಲ ಎಂದು. ಎಷ್ಟೇ ಯೋಚಿಸಿದರು ಆಹಾರಕ್ಕೆ ವಿಷ ಹೇಗೆ ಬಿತ್ತು ಎಂಬುದು ತಿಳಿಯದಾಯಿತು ರಾಜನಿಗೆ. ಹಲವಾರು ವಿಧಗಳಲ್ಲಿ ಪ್ರಾಯಶ್ಚಿತ್ತ ಮಾಡಿದರೂ ತನ್ನಿಂದಾದ ತಪ್ಪು ಎಂಬ ಆಂತರಿಕ ಬೆಂಕಿ ಅವನನ್ನು ದಿನೇದಿನೆ ಸುಡುತ್ತಲೇ ಇತ್ತು.
ಇಂತಹ ಸಂದರ್ಭದಲ್ಲಿ ಚಿತ್ರಗುಪ್ತನಿಗೂ ಯಮನಿಗೂ ಒಂದು ಸಂಭಾಷಣೆ ನಡೆಯುತ್ತದೆ. ಈ ಪಾಪದ ಫಲ ಯಾರದ್ದು ? ಎಂಬುದಾಗಿ . ಏಕೆಂದರೆ ಗಿಡುಗನಿಗೆ ಅಂದರೆ ಅದರ ಆಹಾರ ಸರ್ಪ ಮತ್ತು ಕೆಳಗೆ ಸಂತರ್ಪಣೆ ನಡೆಯುತ್ತಿದೆ ಎಂಬುದು ಅದಕ್ಕೆ ತಿಳಿದಿಲ್ಲ. ಆದಕಾರಣ ಅದಕ್ಕೆ ಕೊಡುವುದು ಸರಿಯಲ್ಲ. ಇನ್ನು ಹಾವಿಗೆ ನೀಡೋಣವೆಂದರೆ ಹಾವು ಅದರ ಪ್ರಾಣ ಭಯದಿಂದ ಬಾಯಿ ತೆಗೆದಿತ್ತು ಆವಾಗ ಈ ಘಟನೆ ನಡೆಯಿತು. ರಾಜನಿಗೆ ನೀಡೋಣವೆಂದರೆ ರಾಜನಾದರೋ ತನ್ನ ಸ್ವಾರ್ಥಕ್ಕೆ ಮಾಡುವ ಸಂತರ್ಪಣೆ ಇದಲ್ಲ ಮತ್ತು ಲೋಕಕಲ್ಯಾಣಕ್ಕಾಗಿ ಹೊರಟ ಕಾರ್ಯವಾಗಿತ್ತು ಇದು. ಅಲ್ಲದೇ ಇಂತಹ ಪರಿಸ್ಥಿತಿಯ ಅರಿವು ಅವನಿಗೆ ಇರಲಿಲ್ಲ.
ಹಾಗಾದರೆ ಈ ಪಾಪದ ಫಲ ಯಾರದ್ದು ? ಎಂದು ಚಿತ್ರಗುಪ್ತ ಯಮನಿಗೆ ಕೇಳುತ್ತಾನೆ. ಯಮ ನಸು ನಗುತ್ತಾ ಹೇಳುತ್ತಾನೆ ಸ್ವಲ್ಪ ಕಾಲದ ನಂತರ ಹೇಳುತ್ತೇನೆ ಎಂದು. ಹೀಗೆ ಕೆಲವು ಕಾಲದ ನಂತರ ಆ ರಾಜ್ಯಕ್ಕೆ ಸಾತ್ವಿಕ ಜ್ಞಾನಿಯೊಬ್ಬ ಬರುತ್ತಾನೆ. ರಾಜ್ಯದ ಹೆಬ್ಬಾಗಿಲಿನ ಕಟ್ಟೆಯ ಮೇಲೆ ಕುಳಿತು ಹೂಕಟ್ಟುತ್ತಿರುವ ಮಹಿಳೆಯ ಬಳಿ ಕೇಳುತ್ತಾನೆ ರಾಜಭವನಕ್ಕೆ (ರಾಜನ ವಾಸಮಂದಿರಕ್ಕೆ) ಎತ್ತಕಡೆ ಹೋಗಬೇಕು ಎಂದು. ಆಗ ಆ ಮಹಿಳೆ ಹೇಳುತ್ತಾಳೆ ಎಲ್ಲಿ ನೀವು ಆ ವೇದಜ್ಞರನ್ನು ಹತ್ಯೆ ಮಾಡಿಸಿದ ಗೋಮುಖ ತೊಟ್ಟ ವ್ಯಾಘ್ರನಂತಿರುವ ರಾಜನ ಬಳಿಗೆ ಹೋಗಿವಿರೇ? ನೀವಾದರೋ ಜ್ಞಾನಿಗಳಂತೆ ಕಾಣುತ್ತಿರುವಿರಿ ನಿಮೇಗೇಕೆ ಈ ಬುದ್ಧಿ ಎಂದಳು. ಆಗ ಯಮ ಚಿತ್ರಗುಪ್ತನಿಗೆ ಹೇಳುತ್ತಾನೆ ರಾಜ ತನ್ನ ಅರಿವಿಗೆ ಬಾರದೇ ನಡೆದ ಅಚಾತುರ್ಯಕ್ಕೆ ಪಶ್ಚಾತ್ತಾಪದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡದ್ದು ಸಾಕು. ಈಗ ಈ ಪಾಪದ ಫಲವನ್ನು ಈ ಮಹಿಳೆಗೆ ಬರೆ ಎಂದು. ಹಾಗೇ ಮುಂದುವರಿದು ಹೇಳುತ್ತಾನೆ ಸಂದರ್ಭದ ಅರಿವಿಲ್ಲದೇ ಪೂರ್ವಾಪರ ಯೋಚಿಸದೇ ಧಾರ್ಮಿಕನಾದ ರಾಜನನ್ನು ಈ ರೀತಿಯಾಗಿ ಪರಿಚಯಿಸಬಾರದಿತ್ತು ಅಲ್ಲದೇ ಹಿಂದೆ ನಡೆದ ಘಟನೆಯ ಕಿಂಚಿತ್ತೂ ಅರಿವಿಲ್ಲದೇ ತೀರ್ಮಾನದ ಮಾತನ್ನು ಮಹಿಳೆ ಆಡಿದ್ದು ತಪ್ಪು ಆದ ಕಾರಣ ಪಾಪದ ಫಲ ಮಹಿಳೆಯ ಪಾಲಿಗೆ ಎಂದನಂತೆ ಯಮ. ಇದು ಯಮಪುರಾಣದ ಒಂದು ಘಟನೆ. ಗಾದೆಯ ಮಾತು ನಿಜವಾಗಿಯೇ ಇದೆ. ಸಂದರ್ಭ ವಿವೇಚಿಸದೇ ಉತ್ತರಿಸುವುದು ತಪ್ಪಲ್ಲವೇ ?
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
Published On - 6:24 pm, Tue, 7 February 23