ಸಂತಾನದ ಸಮಸ್ಯೆಯಿರುವವರು ಈ ಒಂದು ಸೇವೆ ಮಾಡಿ, ಫಲ ಖಂಡಿತ

ಇಂದಿನ ವರ್ತಮಾನದಲ್ಲಿ ಹಲವಾರು ಜನರು ಸಂತಾನ ಭಾಗ್ಯವಿಲ್ಲದೆ ನೋವು ಅನುಭವಿಸುತ್ತಿದ್ದಾರೆ. ಸಾಕಷ್ಟು ಔಷಧೋಪಚಾರಗಳು ನಡೆದಿದ್ದರೂ ಹಾಗೆಯೇ ದೇವತಾ ಕಾರ್ಯಗಳನ್ನು ಮಾಡಿದ್ದರೂ ಸಂತಾನವಾಗದೇ ಮಾನಸಿಕವಾಗಿ ಕೊರಗುತ್ತಿರುವವರು ಹಲವರು ಇದ್ದಾರೆ. ಈ ಸಮಸ್ಯೆ ಕೇವಲ ವರ್ತಮಾನದಲ್ಲಿ ಮಾತ್ರವಲ್ಲ.

ಸಂತಾನದ ಸಮಸ್ಯೆಯಿರುವವರು ಈ ಒಂದು ಸೇವೆ ಮಾಡಿ, ಫಲ ಖಂಡಿತ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 08, 2023 | 11:18 AM

ಇಂದಿನ ವರ್ತಮಾನದಲ್ಲಿ ಹಲವಾರು ಜನರು ಸಂತಾನ ಭಾಗ್ಯವಿಲ್ಲದೆ ನೋವು ಅನುಭವಿಸುತ್ತಿದ್ದಾರೆ. ಸಾಕಷ್ಟು ಔಷಧೋಪಚಾರಗಳು ನಡೆದಿದ್ದರೂ ಹಾಗೆಯೇ ದೇವತಾ ಕಾರ್ಯಗಳನ್ನು ಮಾಡಿದ್ದರೂ ಸಂತಾನವಾಗದೇ ಮಾನಸಿಕವಾಗಿ ಕೊರಗುತ್ತಿರುವವರು ಹಲವರು ಇದ್ದಾರೆ. ಈ ಸಮಸ್ಯೆ ಕೇವಲ ವರ್ತಮಾನದಲ್ಲಿ ಮಾತ್ರವಲ್ಲ. ಹಿಂದಿನ ಕಾಲ, ಯುಗಯುಗಾಂತರಗಳಲ್ಲೂ ಇದ್ದಂತಹದು. ಹಾಗಾದರೆ ಈ ಸಂತಾನವಿಲ್ಲದಿರುವಿಕೆ ಒಂದು ಶಾಪವೇ ಅಂತ ಕೇಳಿದರೆ. ಧರ್ಮಶಾಸ್ತ್ರ ರೀತಿಯಲ್ಲಿ ಅದಕ್ಕುತ್ತರೆ ಕರ್ಮಫಲವೆಂದು. ನಾವು ಪೂರ್ವಜನ್ಮದಲ್ಲಿ ಹಾಗೂ ನಮ್ಮ ಹಿರಿಯರು ಮಾಡಿದ ಕರ್ಮಕ್ಕನುಗುಣವಾಗಿ ನಮ್ಮ ಜೀವನ ರೂಪಿತವಾಗುತ್ತದೆ. ಅದಕ್ಕೇ ಪ್ರತಿಯೊಂದು ವ್ಯಕ್ತಿಯ ಶಕ್ತಿ-ಯುಕ್ತಿಯಲ್ಲಿ, ಆಹಾರ – ವಿಹಾರದಲ್ಲಿ, ರುಚಿ-ಶುಚಿಗಳಲ್ಲಿ ವ್ಯಾತ್ಯಾಸ ಕಂಡುಬರುತ್ತದೆ.

ಆದ್ದರಿಂದ ಪ್ರತಿವ್ಯಕ್ತಿಯ ಜೀವನಕ್ಕೆ ಅವನ ಕರ್ಮಫಲವೇ ಪ್ರಧಾನ ಎಂದಾಯಿತು. ಮನುಷ್ಯ ಕೆಲವು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂಬಂತೆ ವ್ಯವಹರಿಸಿಬಿಡುತ್ತಾನೆ. ಆದರೆ ಸಮಸ್ಯೆ ಎಂದ ಮೇಲೆ ಪರಿಹಾರ ಇರಲೇಬೇಕು ಎಂಬುದು ಜ್ಞಾನಿಗಳ ಅಭಿಪ್ರಾಯ.

ಸಂತಾನದ ಕುರಿತಾಗಿ ರಾಮಾಯಣದ ಪೂರ್ವದಲ್ಲಿ ಸೂರ್ಯವಂಶಜನಾದ ದಿಲೀಪ ಚಕ್ರವರ್ತಿಗೆ ಮಹರ್ಷಿ ವಸಿಷ್ಠರು ಒಂದು ಸೂಕ್ತ ಸಲಹೆ ನೀಡುತ್ತಾರೆ ಅದೇನೆಂದು ನೋಡೋಣ. ಚಕ್ರವರ್ತಿಯಾದ ದಿಲೀಪನಿಗೆ ಮಕ್ಕಳಿರುವುದಿಲ್ಲ. ಅದಕ್ಕಾಗಿ ಅವನು ಹಲವಾರು ಕರ್ಮಗಳನ್ನು ಮಾಡಿಸಿದರೂ ಸತ್ಫಲ ಪ್ರಾಪ್ತವಾಗುವುದೇ ಇಲ್ಲ. ಮನನೊಂದ ದಿಲೀಪನು ಅಂತರಂಗದ ವೇದನೆಯನ್ನು ಕುಲಗುರುಗಳಾದ ವಸಿಷ್ಠರ ಬಳಿ ಬಿನ್ನಮಿಸಿದಾಗ ಅವರು ಸೂಕ್ಷ್ಮವಾಗಿ ಪರಿಶೀಲಿಸಿ ಅವನಿಗೆ ಕಾಮಧೇನುವಿನ (ಸ್ವರ್ಗಲೋಕದ ದನ) ಮಗಳಾದ ನಂದಿನಿಯ ಸೇವೆಯನ್ನು ಮಾಡಲು ಹೇಳುತ್ತಾರೆ. ಆ ನಂದಿನಿ ಎಂಬ ಹಸುವು ವಸಿಷ್ಠರ ಆಶ್ರಮದಲ್ಲಿ ಅವರ ಯಜ್ಞಕ್ಕೆ ಸಂಬಂಧಿಸಿದ ಹವಿಸ್ಸನ್ನು ನೀಡುತ್ತಿತ್ತು. ಅಂತಹ ದೇವತಾ ರೂಪವಾದ ನಂದಿನಿ ಎಂಬ ಗೋವಿನ ಸೇವೆ ಶ್ರದ್ಧೆಯಿಂದ ಮಾಡು ನಿನ್ನೆ ಇಚ್ಛೆ ಸಾರ್ಥಕವಾಗುವುದು ಎಂದು ಹೇಳುತ್ತಾರೆ.

ಗುರುಗಳ ಮಾತಿಗೆ ಮರುಮಾತಾಡದೆ ರಾಜ ಪೋಷಾಕನ್ನು (ರಾಜನಿಗೆ ಯೋಗ್ಯವಾದ ವಸ್ತ್ರ,ಅಲಂಕಾರದಿಗಳು) ಬಿಟ್ಟು. ನಾರುವಸ್ತ್ರವನ್ನು ಧರಿಸಿದವನಾಗಿ ತನ್ನ ಪಟ್ಟದರಸಿಯೊಂದಿಗೆ ವಸಿಷ್ಠರ ಆಶ್ರಮಕ್ಕೆ ತೆರಳಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಗೋ ಸೇವೆ ಮಾಡುತ್ತಾನೆ. ಎಷ್ಟು ಶ್ರದ್ಧೆಯೆಂದರೆ ನಂದಿನಿ ಮಲಗಿದ ನಂತರ ತಾನು ಮಲಗುತ್ತಿದ್ದ. ಅದು ಏಳುವುದಕ್ಕೂ ಮೊದಲೇ ಎದ್ದು ಅದರ ಆಹಾರ ಸಿದ್ಧಪಡಿಸಿ ಅದಕ್ಕೆ ಒಂದಿನಿತೂ ನೋವಾಗದಂತೆ ಸೇವೆ ಮಾಡುತ್ತಿದ್ದ. ರಾಜನಾಗಿದ್ದರೂ ಗೋವು ನಂದಿನಿ ಆಹಾರ ಸ್ವೀಕರಿಸಿದ ನಂತರ ಅವರಿಬ್ಬರು ಉಣ್ಣುತ್ತಿದ್ದರು.

ಇದನ್ನೂ ಓದಿ:Spiritual: ಮನುಷ್ಯನ ಅವನತಿಗೆ ಕಾರಣಗಳಾಗುವ ಐದು ಕಲಿಸ್ಥಾನಗಳು ಯಾವುವು?

ತಪಸ್ಸು ಫಲಿಸಬೇಕಾದರೆ ಪರೀಕ್ಷೆ ನಡೆಯಬೇಕು. ಅದಕ್ಕಾಗಿ ಇಂದ್ರನು ಹುಲಿಯ ರೂಪದಲ್ಲಿ ನಂದಿನಿಯ ಮೇಲೆರಗುತ್ತಾನೆ. ತಕ್ಷಣ ಜಾಗ್ರತನಾದ ದಿಲೀಪನು ಹುಲಿಯ ಮೇಲೆ ದಾಳಿ ಮಾಡಲು ನೋಡುತ್ತಾನೆ. ಆದರೆ ಹುಲಿಯು ಅವನ ಕುರಿತಾಗಿ ಹೇಳುತ್ತದೆ. ಎಲೈ ರಾಜನೇ ನೀನೊಬ್ಬ ಧರ್ಮಿಷ್ಠನಾದ ರಾಜ ಎಂದು ಕೇಳಿದ್ದೆ. ಆದರೆ ಗೋಸೇವೆಯೆಂಬ ವ್ರತದಲ್ಲಿರುವ ನೀನು ನನ್ನನ್ನು ಹೇಗೆ ಕೊಲ್ಲಲು ಸಾಧ್ಯ. ವ್ರತನಿಷ್ಠನಾದವನು ಶಸ್ತ್ರ ಎತ್ತಬಾರದು ಎಂದು ನಿನಗೆ ತಿಳಿದಿಲ್ಲವೇ ಎನ್ನುತ್ತದೆ. ತಕ್ಷಣ ಧರ್ಮಪ್ರಜ್ಞೆಯು ಜಾಗ್ರತಗೊಂಡ ದಿಲೀಪನು ಎಲೈ ವ್ಯಾಘ್ರವೇ ನಿನಗೆ ಆಹಾರ ತಾನೇ ಬೇಕು ನನ್ನನ್ನು ಸೇವಿಸಿ ನಿನ್ನ ಹಸಿವನ್ನು ಇಂಗಿಸಿಕೊ ನಂದಿನಿಯನ್ನು ಬಿಡು ಎಂದು ಕೇಳಿಕೊಳ್ಳುತ್ತಾನೆ. ಹುಲಿಯು ತಕ್ಷಣ ನಂದಿನಿ ಗೋವನ್ನು ಬಿಟ್ಟು ದಿಲೀಪನ ಬಳಿ ಬರುತ್ತದೆ.

ಆಗ ನಂದಿನಿ ಹೇಳುತ್ತದೆ ರಾಜಾ ನೀನು ರಾಜ್ಯಭಾರ ಮಾಡಬೇಕಾದವನು ಮತ್ತು ಸಂತಾನಾಪೇಕ್ಷಿ. ಆದ ಕಾರಣ ತಪ್ಪು ನಿರ್ಣಯ ಮಾಡಬೇಡ ಎಂದು ಹೇಳುತ್ತದೆ. ಆದರೆ ದಿಲೀಪ ತನ್ನ ರಾಜ್ಯದ ಸಮಸ್ತ ಜೀವಿಗಳ ರಕ್ಷಣೆ ತನ್ನ ಕರ್ತವ್ಯ. ಅದರಲ್ಲೂ ಗುರುಗಳು ಸೂಚಿಸಿದ ನಿನ್ನ ರಕ್ಷಣೆ ಮತ್ತು ಸೇವೆಯ ಮುಂದೆ ಯಾವುದೂ ದೊಡ್ಡದಲ್ಲ. ಆದಕಾರಣ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ. ಭಗವದಿಚ್ಛೆಯೆಂತೆ ಆಗಲಿ ಎಂದು ದೇಹಾರ್ಪಣೆಗೆ ಮುಂದಾಗುತ್ತಾನೆ. ತಕ್ಷಣದಲ್ಲಿ ಇಂದ್ರ ಪ್ರತ್ಯಕ್ಷನಾಗುತ್ತಾನೆ. ವಸಿಷ್ಠರೂ ಬರುತ್ತಾರೆ. ನಂದಿನಿಯೂ ಅವರಿಬ್ಬರಿಗೆ ಅನುಗ್ರಹಿಸುತ್ತಾಳೆ. ಅಂತಹ ಗೋಸೇವೆಯ ಫಲದಿಂದ ಅವರಿಗೆ ಉತ್ತಮ ಸಂತಾನವಾಗಿ ಆ ವಂಶ ಮುಂದೆ ರಘುವಂಶವೆಂದು ಪ್ರಖ್ಯಾತಿಯನ್ನು ಹೊಂದುತ್ತದೆ.

ಈ ಮೇಲಿನ ಘಟನೆಯಿಂದ ನಾವು ಯೋಚಿಸಬೇಕಾದ್ದು ಇಷ್ಟೇ ನಾವುಗಳು ಸಂತಾನಾಪೇಕ್ಷಿಗಳಾಗಿದ್ದರೆ ಶ್ರದ್ಧೆಯಿಂದ ಗೋಸೇವೆ ಮಾಡಿದರೆ ಗೋಪಾಲಕೃಷ್ಣನ ಅನುಗ್ರಹದಿಂದ ಸಂತಾನವಾಗುವುದು ನಿಶ್ಚಿತ. ಅದಕ್ಕೇ ಅವನನ್ನು “ಸಂತಾನ ಗೋಪಾಲಕೃಷ್ಣ ಎನ್ನುವರು.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

Published On - 11:18 am, Wed, 8 February 23