Bedi Hanuman Temple: ಇಲ್ಲಿ ಹನುಮಂತನನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಪೂಜಿಸಲಾಗುತ್ತದೆ; ಈ ದೇವಾಲಯ ಎಲ್ಲಿದೆ ಗೊತ್ತಾ?
ಒಡಿಶಾದ ಪುರಿಯ ಜಗನ್ನಾಥ ದೇವಾಲಯದ ಸಮೀಪದಲ್ಲಿರುವ ಬೇಡಿ ಹನುಮಾನ್ ದೇವಾಲಯವು ವಿಶಿಷ್ಟವಾಗಿದೆ. ಇಲ್ಲಿ ಹನುಮಂತನನ್ನು ಬಂಗಾರದ ಸರಪಳಿಯಲ್ಲಿ ಬಂಧಿಸಲಾಗಿದೆ. ಸಮುದ್ರದ ಅಲೆಗಳು ಜಗನ್ನಾಥ ದೇವಾಲಯಕ್ಕೆ ನುಗ್ಗುವುದನ್ನು ತಡೆಯಲು, ಸ್ವತಃ ಜಗನ್ನಾಥ ದೇವರು ಹನುಮಂತನನ್ನು ಚಿನ್ನದ ಸಂಕೋಲೆಯಿಂದ ಕಟ್ಟಿಹಾಕಿದರು ಎಂಬುದು ಪೌರಾಣಿಕ ಕಥೆ. ಈ ಪ್ರಾಚೀನ ದೇವಾಲಯದ ಇತಿಹಾಸ ಮತ್ತು ಸೌಂದರ್ಯವು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ಒಡಿಶಾದ ಪುರಿ ಜಗನ್ನಾಥ ದೇವಾಲಯದ ಸುತ್ತಲೂ ಅನೇಕ ಇತಿಹಾಸ ಹೊಂದಿರುವ ವಿಶಿಷ್ಟ ದೇವಾಲಯಗಳಿವೆ. ಅವುಗಳಲ್ಲಿ ಒಂದು ಹನುಮಾನ್ ದೇವಾಲಯ. ಆದರೆ ಇಲ್ಲಿನ ವಿಶಿಷ್ಟತೆ ಏನೆಂದರೆ ಈ ದೇವಾಲಯದಲ್ಲಿ ಹನುಮಂತನನ್ನು ಬಂಗಾರದ ಸರಪಳಿಯಲ್ಲಿ ಬಂಧಿಸಲಾಗಿದೆ. ಕೇಳೋದಕ್ಕೆ ಅಚ್ಚರಿ ಎನಿಸಿದ್ರೂ ಇದು ಸತ್ಯ. ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ. ಬಂಗಾರದ ಸರಪಳಿಯಲ್ಲಿ ಬಂಧಿಸಲ್ಪಟ್ಟಿರುವ ಈ ದೇವರನ್ನು ಕಾಣೋದಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ.
ಈ ದೇವಾಲಯವನ್ನು ‘ಬೇಡಿ ಹನುಮ ಮಂದಿರ’ ಎನ್ನುವುದೇಕೆ?
ಈ ದೇವಾಲಯಕ್ಕೆ ಬೇಡಿ ಹನುಮಾನ್ ದೇವಾಲಯ ಎಂದು ಏಕೆ ಹೆಸರಿಸಲಾಗಿದೆ ಅನ್ನೋ ಪ್ರಶ್ನೆ ಮೂಡಬಹುದು. ವಾಸ್ತವವಾಗಿ, ಇದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಗಳನ್ನು ಕೇಳಿದರೆ, ಪ್ರಾಚೀನ ಕಾಲದಲ್ಲಿ, ಸಮುದ್ರದ ಅಲೆಗಳು ಮೂರು ಬಾರಿ ಜಗನ್ನಾಥ ದೇವಾಲಯಕ್ಕೆ ನುಗ್ಗಿ ಬರುತ್ತಾ ಇತ್ತಂತೆ. ಇದರಿಂದ ಮಹಾಪ್ರಭು ಜಗನ್ನಾಥ, ಪವನ ಪುತ್ರ ಹನುಮಂತನನ್ನು ಸಮುದ್ರವನ್ನು ನಿಯಂತ್ರಿಸಲು ಇಲ್ಲಿ ನೇಮಿಸಿದರು. ಆದರೆ ಪವನಸುತ ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ನೋಡಲು ಒಳಗೆ ಹೋಗಲು ಪ್ರಯತ್ನಿಸಿದಾಗ, ಸಮುದ್ರವೂ ಅವನ ಹಿಂದೆ ನಗರವನ್ನು ಪ್ರವೇಶಿಸಲು ಪ್ರಾರಂಭಿಸಿತು. ಇದನ್ನು ನೋಡಿದ ಜಗನ್ನಾಥ ದೇವರು ಹನುಮಂತನನ್ನು ಈ ಚಿನ್ನದ ಸಂಕೋಲೆಗಳಿಂದ ಕಟ್ಟಿದರು. ಆದ್ದರಿಂದಲೇ ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?
ಬೇಡಿ ಹನುಮಾನ್ ದೇವಾಲಯದ ಸೌಂದರ್ಯ:
ಪೂರ್ವಕ್ಕೆ ಮುಖ ಮಾಡಿದ ಹನಮಾನ್ ದೇವಾಲಯದ ವಾಸ್ತುಶಿಲ್ಪವು ತುಂಬಾ ಸರಳವಾಗಿ ಸುಂದರವಾಗಿದೆ. ದೇವಾಲಯದ ಮುಖ್ಯ ದೇವರು ಹನುಮಂತನ ಬಲಗೈಯಲ್ಲಿ ಗದೆ ಮತ್ತು ಎಡಗೈಯಲ್ಲಿ ಲಡ್ಡೂ ಇದೆ. ದೇವಾಲಯದ ಹೊರ ಗೋಡೆಗಳ ಮೇಲೆ, ವಿವಿಧ ದೇವರು ಮತ್ತು ದೇವತೆಗಳ ಚಿತ್ರಗಳಿವೆ. ದಕ್ಷಿಣ ಗೋಡೆಯ ಮೇಲೆ ಗಣೇಶನ ವಿಗ್ರಹವಿದೆ. ಪಶ್ಚಿಮ ಗೋಡೆಯ ಮೇಲೆ ಹನುಮನ ತಾಯಿ ಅಂಜನಾ ವಿಗ್ರಹವಿದೆ. ಅವರ ಮಡಿಲಲ್ಲಿ ಬಾಲ ಹನುಮಂತ ಕುಳಿತಿದ್ದಾನೆ ಮತ್ತು ಉತ್ತರ ಗೋಡೆಯ ಮೇಲೆ ಅನೇಕ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕಾಣಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




